ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ನಿಗದಿಪಡಿಸಿದ ದರಕ್ಕೆ ರೈತರ ಆಕ್ಷೇಪ

ಭೂ ಸ್ವಾಧೀನ ಜಮೀನಿನ ಭೂ ಬೆಲೆ ನಿರ್ಧಾರಣಾ ಸಲಹಾ ಸಮಿತಿ ಸಭೆ
Last Updated 19 ಏಪ್ರಿಲ್ 2021, 14:26 IST
ಅಕ್ಷರ ಗಾತ್ರ

ರಾಯಚೂರು: ವಾಡಿ–ಗದಗ ನೂತನ ರೈಲ್ವೆ ಮಾರ್ಗಕ್ಕಾಗಿ ಲಿಂಗಸುಗೂರು ತಾಲ್ಲೂಕಿನಲ್ಲಿ ಭೂಸ್ವಾಧೀನ ಮಾಡಿಕೊಳ್ಳುತ್ತಿರುವ ಜಮೀನಿಗೆ ಸರ್ಕಾರವು, ಪ್ರತಿ ಎಕರೆಗೆ ₹11 ಲಕ್ಷ ದರ ನಿಗದಿ ಮಾಡಿರುವುದಕ್ಕೆ ಸಂಬಂಧಿಸಿದ ರೈತರು ಆಕ್ಷೇಪ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್‌.ದುರುಗೇಶ ಅಧ್ಯಕ್ಷತೆಯಲ್ಲಿ ಭೂ ಸ್ವಾಧೀನ ಜಮೀನಿನ ಭೂ ಬೆಲೆ ನಿರ್ಧಾರಣಾ ಸಲಹಾ ಸಮಿತಿ ಸಭೆ ಆಯೋಜಿಸಲಾಗಿತ್ತು. ಲಿಂಗಸುಗೂರು ತಾಲ್ಲೂಕಿನ ತಲೆಕಟ್ಟ, ಹುನಕುಂಟಿ ಹಾಗೂ ಕಸಬಾ ಲಿಂಗಸುಗೂರು ಗ್ರಾಮಗಳ ರೈತರು ಭಾಗವಹಿಸಿದ್ದರು.

ಈ ಯೋಜನೆಗೆ ಒಟ್ಟು 175 ಎಕರೆ 15 ಗುಂಟೆ ಜಮೀನು ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಗ್ರಾಮದಲ್ಲಿ ಸದ್ಯ ಪ್ರತಿ ಎಕರೆಗೆ ₹25 ರಿಂದ ₹30 ಲಕ್ಷದವರೆಗೂ ಜಮೀನು ಮಾರಾಟವಾಗುತ್ತಿವೆ. ಆದರೆ, ಸರ್ಕಾರ ನಿಗದಿಪಡಿಸಿದ ದರಕ್ಕೆ ಮಾರಾಟ ಮಾಡುವುದಕ್ಕೆ ಸಾಧ್ಯವಿಲ್ಲ. ಈ ಕೃಷಿ ಜಮೀನು ಅವಲಂಬಿಸಿ ನೂರಾರು ಜನರು ಬದುಕು ಸಾಗಿಸುತ್ತಿದ್ದಾರೆ ಎಂದು ರೈತರು ತಿಳಿಸಿದರು.

ಈ ಭಾಗದಲ್ಲಿ ಜಮೀನುಗಳನ್ನು ನಿವೇಶನಗಳನ್ನಾಗಿ ಪರಿವರ್ತಿಸಿ, ಒಂದು ನಿವೇಶನಕ್ಕೆ ₹20 ಲಕ್ಷ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇಂಥ ಮೌಲ್ಯವಿರುವ ಜಮೀನನ್ನು ಸರ್ಕಾರಕ್ಕೆ ಕೊಡುವುದಿಲ್ಲ. ಸರ್ಕಾರವು ನ್ಯಾಯಬದ್ಧ ದರ ನಿಗದಿಪಡಿಸಬೇಕು. ಇಲ್ಲದಿದ್ದರೆ ರೈತರ ಬದುಕು ಬೀದಿಪಾಲಾಗುತ್ತದೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್‌.ದುರುಗೇಶ ಮಾತನಾಡಿ, ರೈಲ್ವೆ ಮಾರ್ಗಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳುವುದಕ್ಕೆ ರೈತರ ಅಭಿಪ್ರಾಯ ಸಂಗ್ರಹಿಸಲು ಸಭೆ ಕರೆಯಲಾಗಿದೆ. ಸರ್ಕಾರವು ಪ್ರತಿ ಎಕರೆಗೆ ₹11,75,456 ದರ ನಿಗದಿಪಡಿಸಿದೆ. ರೈತರಿಗೆ ಅನ್ಯಾಯವಾಗದಂತೆ ಭೂ ಬೆಲೆ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.

ವಿಶೇಷ ಭೂಸ್ವಾಧೀನ ಅಧಿಕಾರಿ ಅಶೋಕ, ಲಿಂಗಸುಗೂರು ತಹಶೀಲ್ದಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT