ಪರಿಸರ ಸ್ನೇಹಿ ಜೀವನಶೈಲಿ ಅಳವಡಿಸಿ

7
ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ರೇಖಾ ಮಹೇಂದ್ರರೆಡ್ಡಿ ಕರೆ

ಪರಿಸರ ಸ್ನೇಹಿ ಜೀವನಶೈಲಿ ಅಳವಡಿಸಿ

Published:
Updated:
Deccan Herald

ರಾಯಚೂರು: ದೈನಂದಿನ ಜೀವನದಲ್ಲಿ ಸ್ವಚ್ಛತೆಗೆ ಆದ್ಯತೆ ವಹಿಸಿ ಮತ್ತು ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಬೇಕು. ಈ ಮೂಲಕ ಪರಿಸರ ಸ್ನೇಹಿ ಜೀವನ ಶೈಲಿಯನ್ನು ಅವಳವಡಿಸಿಕೊಳ್ಳಬೇಕು ಎಂದು ನಗರಸಭೆ ಸದಸ್ಯ ರೇಖಾ ಮಹೇಂದ್ರರೆಡ್ಡಿ ಕರೆ ನೀಡಿದರು.

ನಗರದ ಮುನ್ನುರವಾಡಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ನಗರಸಭೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನೆಹರು ಯುವ ಕೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ರಾಯಚೂರು ಭಾರತ ಸೇವಾದಳ ಹಾಗೂ ಶಿಶು ಅಭಿವೃದ್ಧಿ ಯೋಜನೆಯಿಂದ ಬುಧವಾರ ಏರ್ಪಡಿಸಿದ್ದ ‘ಸ್ವಚ್ಛ ಭಾರತ ಮಿಷನ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೈಯಕ್ತಿಕ ಹಿತಾಸಕ್ತಿ ಮತ್ತು ಗೃಹಾಲಂಕಾರಕ್ಕಾಗಿ ಮಹಿಳೆಯರು ಅನಾವಶ್ಯಕವಾಗಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಅತಿಯಾಗಿ ಬಳಸುತ್ತಿದ್ದಾರೆ. ಆದಷ್ಟು ಕಡಿಮೆ ಮಾಡುವ ಮೂಲಕ ಸ್ವಚ್ಛ ಭಾರತ ಮಿಷನ್ ಸಫಲತೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಗ್ರೀನ್ ರಾಯಚೂರಿನ ಅಧ್ಯಕ್ಷೆ ಸರಸ್ವತಿ ಕಿಲಕಿಲೇ ಮಾತನಾಡಿ, ಹಿಂದಿನ 20 ವರ್ಷಕ್ಕೆ ಹೋಲಿಸಿದಲ್ಲಿ ಇತ್ತೀಚೆಗೆ ಪ್ಲಾಸ್ಟಿಕ್ ವಸ್ತುಗಳ ಬಳಕೆ ಅತಿಯಾಗಿದೆ. ಕೊಳ್ಳುಬಾಕ ಸಂಸ್ಕೃತಿಯಿಂದ ಮನೆ, ಕಚೇರಿ ಹಾಗೂ ದೈನಂದಿನ ಬದುಕಿನಲ್ಲಿ ಅನಾವಶ್ಯಕವಾಗಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹೆಚ್ಚುತ್ತಿದೆ. ಇದರಿಂದ ಕಸದ ಉತ್ಪತ್ತಿ ಹೆಚ್ಚಾಗಿ ಅದರ ನಿರ್ವಹಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದರು.

ನೇರ ಮತ್ತು ಪರೋಕ್ಷವಾಗಿ ಪ್ಲಾಸ್ಟಿಕ್ ಅಂಶವು ದೇಹವನ್ನು ಸೇರುತ್ತಿರುವುದರಿಂದ ಗರ್ಭಾಶಯ ಕಾನ್ಸರ್ ಹಾಗೂ ಋತುಚಕ್ರದಲ್ಲಿ ಏರುಪೇರು ಉಂಟಾಗುತ್ತಿದೆ. ಆದ್ದರಿಂದ ಪರಿಸರ ಸ್ನೇಹಿ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ರೋಗಗಳಿಂದ ಮುಕ್ತರಾಗಬೇಕು ಎಂದು ತಿಳಿಸಿದರು.

ಗ್ರೀನ್ ರಾಯಚೂರು ಕಾರ್ಯದರ್ಶಿ ರಾಜೇಂದ್ರ ಕುಮಾರ್ ಮಾತನಾಡಿ, ದೇಶದಲ್ಲಿ ಪರಿಸರ ಮಾಲಿನ್ಯದಿಂದಾಗಿ ಪ್ರತಿ ಎರಡು ನಿಮಿಷಕ್ಕೆ ಒಂದು ಮಗು ಸಾವನಪ್ಪುತ್ತಿದೆ. ಒಬ್ಬ ವ್ಯಕ್ತಿಯ ಆರೋಗ್ಯ ಚಿಕಿತ್ಸೆಗೆ ಸರಾಸರಿ ₨ 6,400 ವ್ಯಯಿಸಲಾಗುತ್ತಿದೆ. ಆದ್ದರಿಂದ ಸ್ವಚ್ಛ ಪರಿಸರವನ್ನು ನಿರ್ಮಿಸಿಕೊಳ್ಳುವ ಮೂಲಕ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಕ್ಷೇತ್ರ ಪ್ರಾಚಾರ ಅಧಿಕಾರಿ ಜಿ.ತುಕಾರಾಂಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ತಿಳಿಸಿದರು.

ನಗರಸಭೆ ಪರಿಸರ ಎಂಜಿನಿಯರ್‌ ಜೈಪಾಲ್ ರೆಡ್ಡಿ, ರಾಯಚೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀರನಗೌಡ ಮತ್ತು ಎಸ್‌ಡಿಎಸ್‌ಎಂಸಿ ಅಧ್ಯಕ್ಷ ಕೆ.ರಾಘವೇಂದ್ರ ಮಾತನಾಡಿದರು.

ಸ್ವಚ್ಛ ಭಾರತ ಮಿಷನ್ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ರಾಯಚೂರು ನಗರಸಭೆ ಸದಸ್ಯ ಶ್ರೀನಿವಾಸ ರೆಡ್ಡಿ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಚಿತ್ರಕಲೆ, ರಂಗೋಲಿ, ಭಾಷಣ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಮುನ್ನೂರುವಾಡಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಎನ್.ಎನ್.ಎಸ್. ಅಧಿಕಾರಿ ಶರಣಪ್ಪ ಪಾಟೀಲ, ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯಗುರು ಪುಷ್ಪ ಸಿಂಗಾರಿ, ಸರ್ಕಾರಿ ಮಾದರಿ ಬಾಲಕಿಯರ ಪ್ರಾಥಮಿಕ ಶಾಲೆಯ ಮುಖ್ಯಗುರು ಜಿ.ತಿಮ್ಮಣ್ಣ, ಈರಣ್ಣ ಭಾವಿಕಟ್ಟಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಹಾಗೂ ಸ್ವ-ಸಹಾಯ ಸಂಘದ ಸದಸ್ಯರು ಇದ್ದರು.

ಸಿ.ಕೆ.ಸುರೇಶ ಕಾರ್ಯಕ್ರಮ ನಿರೂಪಿಸಿದರು. ಮುರಳೀಧರ ಕಾರಬಾರಿ ಸ್ವಾಗತಿಸಿದರು. ವಿದ್ಯಾಸಾಗರ ಚಿಣಮಗೇರಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !