ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಯಾವ ಮಾನದಂಡದಲ್ಲೂ ಪರಿಗಣೆಗೆ ಬಾರದ ರಾಯಚೂರು ಜಿಲ್ಲೆ

ರಾಯಚೂರು: ಮತ್ತೆ ತಪ್ಪಿದ ಸಚಿವ ಸ್ಥಾನ, ಅಸಮಾಧಾನ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿಯಾದರೂ ಜಿಲ್ಲೆಯ ಇಬ್ಬರು ಬಿಜೆಪಿ ಶಾಸಕರ ಪೈಕಿ ಒಬ್ಬರಿಗಾದರೂ ಸಚಿವಸ್ಥಾನ ದೊರೆಯುತ್ತದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ.

ಈ ಬಗ್ಗೆ ಜಿಲ್ಲಾ ಬಿಜೆಪಿಯಲ್ಲೇ ಅಸಮಾಧಾನ ವ್ಯಕ್ತವಾಗಿದೆ. ಆದರೆ, ಪಕ್ಷದ ವರಿಷ್ಠರು ಕೈಗೊಂಡಿರುವ ತೀರ್ಮಾನವನ್ನು ಗೌರವಿಸಲೇಬೇಕು ಎನ್ನುತ್ತಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೆಗೌಡ ಬಣ) ಜಿಲ್ಲಾ ಘಟಕವು ಪ್ರತಿಭಟನೆ ನಡೆಸಿ, ಜಿಲ್ಲೆಗೆ ಅನ್ಯಾಯವಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮತ್ತೆನಾದರೂ ಸಂಪುಟ ವಿಸ್ತರಣೆ ಮಾಡಿದರೆ, ಜಿಲ್ಲೆಗೆ ಪ್ರಾತಿನಿಧ್ಯ ಕೊಡಲೇಬೇಕು ಎಂದು ಒತ್ತಾಯಿಸಿದರು.

‘ಜಿಲ್ಲೆಗೆ ಸಚಿವಸ್ಥಾನ ಸಿಗಬೇಕು ಎಂದು ಬಹಳ ಆಸೆ ಇಟ್ಟುಕೊಂಡು ವರಿಷ್ಠರಿಗೆ ಬೇಡಿಕೆ ಸಲ್ಲಿಸಲಾಗಿತ್ತು. ವಿವಿಧ ಸಂಘಟನೆಗಳು ಕೂಡಾ ಮನವಿ ಸಲ್ಲಿಸಿದ್ದವು. ಆದರೆ, ಸಚಿವಸ್ಥಾನ ಕೈತಪ್ಪಿದೆ. ನಮ್ಮಂತೆ ರಾಜ್ಯದ ಬೇರೆ ಅನೇಕ ಜಿಲ್ಲೆಗಳಿಗೂ ಸಚಿವಸ್ಥಾನ ಸಿಕ್ಕಿಲ್ಲ. ಹಿರಿಯರ ತೀರ್ಮಾನಕ್ಕೆ ಮನ್ನಣೆ ಕೊಡಲೇಬೇಕು’ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಮಾನಂದ ಯಾದವ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಜೆಪಿ ಶಾಸಕರಾದ ಶಿವನಗೌಡ ನಾಯಕ ಹಾಗೂ ಡಾ.ಶಿವರಾಜ ಪಾಟೀಲ ಅವರಿಗೆ ಸಚಿವಸ್ಥಾನ ನೀಡುವಂತೆ ಜಿಲ್ಲೆಯಾದ್ಯಂತ ಸಮಾಜದ ಸಂಘಟನೆಗಳು, ಬೆಂಬಲಿಗರು ಹಾಗೂ ಸಂಘ–ಸಂಸ್ಥೆಗಳು ಪ್ರತ್ಯೇಕವಾಗಿ ಮನವಿ ಸಲ್ಲಿಸುತ್ತಾ ಬಂದಿದ್ದವು. ಜೇಷ್ಠತೆ ಆಧರಿಸಿ ಶಿವನಗೌಡ ನಾಯಕ ಅವರಿಗೆ ಸಚಿವಸ್ಥಾನ ಕೊಡಬೇಕು ಎಂದು ಅವರ ಬೆಂಬಲಿಗರು ಒತ್ತಾಯಿಸಿದ್ದರು. ಜನಪರ ನಿಲುವು ಮತ್ತು ಅಭಿವೃದ್ಧಿಗಳನ್ನು ಪರಿಗಣಿಸಿ ಡಾ.ಶಿವರಾಜ ಪಾಟೀಲ ಅವರಿಗೆ ಸ್ಥಾನ ಕೊಡಿ ಎಂದು ಮನವಿ ಸಲ್ಲಿಸಲಾಗಿತ್ತು. ಇದೀಗ ನಿರೀಕ್ಷೆಗಳೆಲ್ಲವೂ ಬುಡಮೇಲಾಗಿವೆ.

ಯಾವುದೇ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದರೂ ರಾಯಚೂರು ಜಿಲ್ಲೆಗೆ ಮನ್ನಣೆ ಸಿಗುತ್ತಿಲ್ಲ. ಜಾತಿವಾರು, ಜೇಷ್ಠತೆ ಹಾಗೂ ವಯಸ್ಸಿನ ಮಾನದಂಡಗಳನ್ನು ಪರಿಗಣಿಸಿದಾಗ, ಜಿಲ್ಲೆಯಲ್ಲಿ ಅರ್ಹರು ಇದ್ದಾಗ್ಯೂ 15 ವರ್ಷಗಳಿಂದ ಪೂರ್ಣ ಅವಧಿ ಸಚಿವಸ್ಥಾನ ಇದುವರೆಗೂ ದೊರೆತಿಲ್ಲ. 2018 ರಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆಯಾದಾಗ ಜೆಡಿಎಸ್‌ ಶಾಸಕ ವೆಂಕಟರಾವ್‌ ನಾಡಗೌಡ ಅವರಿಗೆ ಸಚಿವಸ್ಥಾನ ನೀಡಲಾಗಿತ್ತು. ಒಂದೇ ವರ್ಷದಲ್ಲಿ ಸರ್ಕಾರ ಪತನವಾಯಿತು.

2008 ರಲ್ಲಿ ಬಿಜೆಪಿ ಸರ್ಕಾರದಲ್ಲಿ ದೇವದುರ್ಗ ಶಾಸಕ ಶಿವನಗೌಡ ನಾಯಕ ಅವರಿಗೆ ಸಚಿವಸ್ಥಾನ ನೀಡಲಾಗಿತ್ತು. ಆದರೆ, ಅವಧಿ ಪೂರ್ಣಗೊಳಿಸಲಾಗಲಿಲ್ಲ. ಆನಂತರ ಮುಖ್ಯಮಂತ್ರಿಯಾಗಿದ್ದ ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ್‌ ಆಡಳಿತದಲ್ಲೂ ಜಿಲ್ಲೆಗೆ ಸಚಿವಸ್ಥಾನ ಸಿಗಲಿಲ್ಲ. ಎಸ್‌.ಎಂ.ಕೃಷ್ಣ ಹಾಗೂ ಧರ್ಮಸಿಂಗ್‌ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ರಾಯಚೂರು ಜಿಲ್ಲೆಯ ಕನಿಷ್ಠ ಇಬ್ಬರಿಗಾದರೂ ಸಚಿವಸ್ಥಾನ ನೀಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.