ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಿಕ ಹುಳ ಬಾಧಿತ ಜಮೀನಿಗೆ ಅಧಿಕಾರಿಗಳ ತಂಡ ಭೇಟಿ

Last Updated 11 ಅಕ್ಟೋಬರ್ 2019, 13:56 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಬಾದರ್ಲಿ ಹೋಬಳಿಯ ಮಾಡಸಿರವಾರ, ಬೆಳಗುರ್ಕಿ ಹಾಗೂ ಅಲಬನೂರು ಗ್ರಾಮಗಳಲ್ಲಿ ಸೈನಿಕ ಹುಳ ಬಾಧೆ ಎದುರಿಸುತ್ತಿರುವ ಜೋಳದ ಬೆಳೆಯ ಜಮೀನುಗಳಿಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ನೇತೃತ್ವದ ಅಧಿಕಾರಿಗಳ ತಂಡ ಬುಧವಾರ ಭೇಟಿ ಪರಿಶೀಲನೆ ನಡೆಸಿತು.

ಕೀಟದ ನಿರ್ವಹಣೆಯ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದ ಚೇತನಾ ಪಾಟೀಲ, ಕೀಟಬಾಧೆ ತೀವ್ರತೆ ಕಡಿಯಿದ್ದರೆ ಅಥವಾ ಮರಿಹುಳಗಳ ನಿರ್ವಹಣೆಗೆ 0.5 ಮಿ.ಲೀ. ಅಜ್ಜಾರ್ ಡಿಕ್ಟೀನ್ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ತೀವ್ರತೆ ಹೆಚ್ಚಿದ್ದರೆ ಇಮಾಮೆಕ್ಟೀನ್ ಬೆಂಜೋವೇಟ್‌ 0.4 ಗ್ರಾಂ ಲೀಟರ್‌ಗೆ ಬೆರೆಸಿ ಸಿಂಪರಣೆ ಮಾಡಿದರೆ ಹತೋಟಿಗೆ ತರಬಹುದು ಎಂದು ತಿಳಿಸಿದರು.

ಬೆಲ್ಲವನ್ನು ನೀರಿನಲ್ಲಿ ಕರಗಿಸಿ ಮಾನೋಕ್ರೋಟೋಫಾಸ್, ನುವಾನ್ ಔಷಧಿ ಮತ್ತು ತೌಡನ್ನು ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ ವಿಷ ಪಾಷಾಣ ತಯಾರಿಸಬೇಕು. ರಾತ್ರಿಯಿಡೀ ಕಲಿಯಲು ಬಿಡಬೇಕು. ಮರುದಿನ ಸಂಜೆ ಬೆಳೆಗೆ ಎರಚಬೇಕು. ಬೆಳೆಗಳ ಸಂಖ್ಯೆ ದಟ್ಟವಾಗಿದ್ದರೆ ಎರಡು ಸಾಲಿಗೊಂದರಂತೆ ಎರಡು ಮೀಟರ್ ಅಂತರದಲ್ಲಿ ಹಿಇಡಿ ಪಾಷಾಣವಿಟ್ಟು ಹುಳಗಳನ್ನು ಆಕರ್ಷಿಸಬಹುದು ಎಂದರು.

ಕಾಯಿಕೊರಕ, ಎಲೆ ತಿನ್ನುವ ಹುಳ, ಎಲೆಸುರುಳಿ ಪೂಚಿ, ತೊಗರಿಗೂಡು ಮಾರು ಹುಳ ಮತ್ತು ಹರಳು ರಂಗೋಲಿ ಹುಳಗಳು ಕೂಡ ಕಂಡುಬರುವ ಸಾಧ್ಯತೆಯಿದ್ದು, ಈ ಔಷಧಗಳನ್ನು ಬಳಸಿ ನಿಯಂತ್ರಿಸಿಕೊಳ್ಳಬಹುದು. ತುರ್ತಾಗಿ ಮತ್ತು ಸಾಮೂಹಿಕವಾಗಿ ಹತೋಟಿ ಕ್ರಮಗಳನ್ನು ರೈತರು ಕೈಗೊಳ್ಳಬೇಕು. ಅಗತ್ಯ ಔಷಧಗಳು ರೈತ ಸಂಪರ್ಕ ಕೇಂದ್ರದಲ್ಲಿ ವಿತರಣೆ ಮಾಡಲಾಗುತ್ತಿದ್ದು, ಸದುಪಯೋಗ ಪಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬೇಕು ಎಂದು ವಿವರಿಸಿದರು.

ಲಿಂಗಸುಗೂರು ಉಪ ವಿಭಾಗದ ಕೃಷಿ ನಿರ್ದೇಶಕಿ ಮಂಜುಳಾ ಬಸವರೆಡ್ಡಿ ಹಾಗೂ ಸ್ಥಳೀಯ ಕೃಷಿ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT