ಸೋಮವಾರ, ಜನವರಿ 17, 2022
19 °C

ಎನ್‍ಇಪಿ: ಶಿಕ್ಷಣ ನೀತಿ ಬಲ ಕುಗ್ಗಿಸುವ ತಂತ್ರ- ಐಸಾ ರಾಜ್ಯ ಸಂಚಾಲಕ ಕಿಶನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎನ್‍ಇಪಿ-2020 ಸಾರ್ವಜನಿಕ ಶಿಕ್ಷಣದ ಬಲವನ್ನು ಕುಗ್ಗಿಸಿ ಖಾಸಗೀಕರಣಗೊಳಿಸುವ ತಂತ್ರದ ಭಾಗವಾಗಿದೆ ಎಂದು ಅಖಿಲ ಭಾರತ ವಿದ್ಯಾರ್ಥಿಗಳ ಸಂಘ (ಐಸಾ) ರಾಜ್ಯ ಸಂಚಾಲಕ ಕಿಶನ್ ಅಭಿಪ್ರಾಯಪಟ್ಟರು.

ನಗರದ ಕುಷ್ಟಗಿ ರಸ್ತೆಯಲ್ಲಿರುವ ಬಿಸಿಎಂ ವಸತಿ ನಿಲಯದಲ್ಲಿ ಭಾನುವಾರ ನಡೆದ ‘ಎನ್‍ಇಪಿ 2020’ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೊಸ ಶಿಕ್ಷಣ ನೀತಿಯಲ್ಲಿ ಪದೇ ಪದೆ ಖಾಸಗಿಯವರೊಂದಿಗೆ ಒಪ್ಪಂದದ ಕುರಿತು ಪ್ರಸ್ತಾಪಿಸಲಾಗಿದೆ. ಶಿಕ್ಷಣದ ವಿಷಯ ಕೇಂದ್ರ ಮತ್ತು ರಾಜ್ಯದ ಸಮವರ್ತಿ ಪಟ್ಟಿಯಲ್ಲಿದ್ದರೂ ಕೇಂದ್ರ ಸರ್ಕಾರ ಕೇಂದ್ರೀಕರಣಗೊಳಿಸಲು ಹೊರಟಿದೆ. ಈ ನೀತಿಯಿಂದ ಶಿಕ್ಷಣ ಮಾರಾಟದ ವಸ್ತುವಾಗಲಿದೆ ಎಂದರು. 

ಸರ್ಕಾರಿ ಶಾಲಾ, ಕಾಲೇಜುಗಳು ಮೂಲ ಸೌಕರ್ಯ ಕೊರತೆ, ಶಿಕ್ಷಕರ ಅಭಾವ ಸೇರಿದಂತೆ ಅನೇಕ ಸಮಸ್ಯೆಗಳ ಕಾರಣ ದುಃಸ್ಥಿತಿಯಲ್ಲಿದ್ದರೂ ಈ ಬಗ್ಗೆ ಹೊಸ ಶಿಕ್ಷಣ ನೀತಿಯಲ್ಲಿ ಪರಿಹಾರದ ಕುರಿತು ಚಕಾರವೆತ್ತಿಲ್ಲ. ಈ ನಡುವೆ ಖಾಸಗಿ ಶಾಲಾ-ಕಾಲೇಜುಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಬಡ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರು ಶೈಕ್ಷಣಿಕ ಹಕ್ಕಿನಿಂದ ವಂಚಿತರಾಗಲಿದ್ದಾರೆ ಎಂದು ಹೇಳಿದರು.

ಬಡವರು ಸಾಮಾಜಿಕವಾಗಿ ಒಂದು ಹಂತಕ್ಕೆ ಬರಲು ಶಿಕ್ಷಣವೇ ಸಹಕಾರಿಯಾಗಿದೆ. ಈ ಶಿಕ್ಷಣವನ್ನೇ ಸರ್ಕಾರ ಬಡ ಮತ್ತು ಮಧ್ಯಮ ವರ್ಗದವರಿಂದ ದೂರವಿಡಲು ಹೊರಟಿದೆ. ಹೊಸ ಶಿಕ್ಷಣ ನೀತಿ ಉಳ್ಳವರಿಗೆ ಸುಲಭವಾಗೇ ಕೈಗೆಟುಕುವ ಸಾಧನವಾದರೆ, ಬಡ ವಿದ್ಯಾರ್ಥಿಗಳಿಗೆ ಗಗನಕುಸುಮವಾಗಲಿದೆ. ಇದರಿಂದಾಗಿ ಶಿಕ್ಷಣದಿಂದ ವಂಚಿತರಾಗುವವರ ಸಂಖ್ಯೆ ಹೆಚ್ಚಲಿದೆ. ಆದರೆ ಸರ್ಕಾರ ಇದನ್ನು ಮುಚ್ಚಿಟ್ಟು ತನ್ನ ಗುಪ್ತ ಕಾರ್ಯಸೂಚಿಯನ್ನು ಈಡೇರಿಸಿಕೊಳ್ಳಲು, ಶಿಕ್ಷಣವನ್ನು ಖಾಸಗೀಕರಣಗೊಳಿಸಲು ತುದಿಗಾಲಲ್ಲಿ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಐಸಾ’ದ ಸದಸ್ಯ ಶರತ್ ಮಾತನಾಡಿ, ಪ್ರತಿಯೊಬ್ಬರಿಗೂ ಉಚಿತ ಮತ್ತು ಸಮಾನ ಶಿಕ್ಷಣ ಸಿಗಬೇಕಿದೆ. ಮೇಲ್ನೋಟಕ್ಕೆ ಈ ನೀತಿಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಬಹಳಷ್ಟು ಅನುಕೂಲವಾಗಲಿದೆ ಎಂಬ ಭ್ರಮೆ ಹುಟ್ಟಿಸುತ್ತಲೇ ಬಡವರನ್ನು ಹಕ್ಕಿನಿಂದ ವಂಚಿಸುವ ಪ್ರಕ್ರಿಯೆಯಾಗಿದೆ. ದೇಶದಲ್ಲೇ ಕರ್ನಾಟಕದಲ್ಲಿ ಮೊದಲಿಗೆ ಜಾರಿಗೆ ತರಲು ಹೊರಟಿರುವುದು ಅವಸರದ ಕ್ರಮವಾಗಿದೆ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವಿದ್ಯಾರ್ಥಿಗಳಿಗೆ ಈ ನೀತಿ ಮಾರಕವಾಗಿದೆ ಎಂದು ದೂರಿದರು.

ಎಐಸಿಸಿಟಿಯುನ ಸಂಚಾಲಕ ನಾಗರಾಜ್ ಪೂಜಾರ್ , ಯುವ ಮುಖಂಡ ಬಸವರಾಜ ಎಕ್ಕಿ ಮಾತನಾಡಿದರು. ಐಸಾದ ಅರವಿಂದಮ್, ಆರ್.ಎಚ್.ಕಲಮಂಗಿ, ಶ್ರೀನಿವಾಸ ಬುಕ್ಕನಹಟ್ಟಿ, ಮಹಾದೇವ ಅಮರಾಪುರ, ಬಸವರಾಜ ಹಸಮಕಲ್ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು