ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಬಿಜೆಪಿಯಿಂದ ಸರ್ವಾಧಿಕಾರಿ ಆಡಳಿತ‘

ರಾಜ್ಯ ಸಣ್ಣ ನೀರಾವರಿ ಸಚಿವ ಬೋಸರಾಜು ಆರೋಪ
Published 30 ಮಾರ್ಚ್ 2024, 15:27 IST
Last Updated 30 ಮಾರ್ಚ್ 2024, 15:27 IST
ಅಕ್ಷರ ಗಾತ್ರ

ರಾಯಚೂರು: ‘ವಿರೋಧ ಪಕ್ಷಗಳನ್ನು ಅಧಿಕಾರ ಬಲದಿಂದ ಹತ್ತಿಕ್ಕುವ ಮೂಲಕ ಬಿಜೆಪಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದಲ್ಲಿ ಸರ್ವಾಧಿಕಾರಿ ಆಡಳಿತ ನಡೆಸಿದ್ದಾರೆ‘ ಎಂದು ರಾಜ್ಯ ಸಣ್ಣ ನೀರಾವರಿ ಸಚಿವ ಎನ್‌.ಎಸ್‌.ಬೋಸರಾಜು ಆರೋಪ ಮಾಡಿದರು.

ನಗರದಲ್ಲಿ ಶನಿವಾರ ಆಯೋಜಿಸಿದ್ದ ಲೋಕಸಭೆ ಕ್ಷೇತ್ರದ ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಪ್ರಮುಖ ಕಾರ್ಯಕರ್ತರ ಸಮಾವೇಶ ಹಾಗೂ ಜನಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಅವರು ಮತನಾಡಿದರು.

‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳಿಸಲಾಗಿದೆ. ಕಾಂಗ್ರೆಸ್‌ ₹ 1,823 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ವಿರೋಧ ಪಕ್ಷಗಳನ್ನು ವ್ಯವಸ್ಥಿತವಾಗಿ ತುಳಿಯಲು ಹಲವು ಷಡ್ಯಂತ್ರಗಳನ್ನು ನಡೆಸುತ್ತಿದೆ’ ಎಂದು ಆರೋಪಿಸಿದರು.

‘ಮೋದಿ ಸರ್ಕಾರ ಹತ್ತು ವರ್ಷಗಳ ಆಡಳಿತ ಅವಧಿಯಲ್ಲಿ ದೇಶದ ಜನರಿಗೆ ನೀಡಿದ ಯಾವುದೇ ಭರವಸೆಯನ್ನೂ ಈಡೇರಿಸಿಲ್ಲ. ಅಧಿಕಾರಕ್ಕೆ ಬಂದರೆ ಜನರ ಬ್ಯಾಂಕ್‌ ಖಾತೆಗಳಿಗೆ ₹ 15 ಲಕ್ಷ ಜಮಾ ಮಾಡುವ ಭರವಸೆ ನೀಡಿದ್ದರು. ಪ್ರತಿ ವರ್ಷ ಎರಡು ಕೋಟಿ ಯುವಕರಿಗೆ ಉದ್ಯೋಗ ಕೊಡುವ ಭರವಸೆಯೂ ಸುಳ್ಳಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ಸಹ ಹುಸಿಯಾಗಿದೆ‘ ಎಂದು ಟೀಕಿಸಿದರು.

‘ನುಡಿದಂತೆ ನಡೆದುಕೊಂಡು ಬಂದಿರುವ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಬೇಕಿದೆ. ದೇಶದ ಹಿತಕ್ಕಾಗಿ ಹೋರಾಟ ಮುಂದುವರಿಸಬೇಕಾಗಿದೆ. ಇದಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಕಾರ್ಯನಿರ್ವಹಿಸಬೇಕು’ ಎಂದು ಮನವಿ ಮಾಡಿದರು.

‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷ ಬಲಿಷ್ಠಗೊಂಡಿದೆ. ಸೋನಿಯಾ
ಗಾಂಧಿ ಹಾಗೂ ರಾಹುಲ್‌ ಗಾಂಧಿ ನಾಯಕತ್ವದಲ್ಲಿ ಪಕ್ಷವನ್ನು ಮುನ್ನಡೆಸಬೇಕಾಗಿದೆ‘ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಜಿ‌. ಕುಮಾರ ನಾಯಕ ಅವರು ಮೂರು ವರ್ಷ ರಾಯಚೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮೂರು ದಶಕಗಳ ಕಾಲ ಸರ್ಕಾರ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಆಡಳಿತ ಅನುಭವ ಅವರೊಂದಿಗೆ ಇದೆ. ರಾಯಚೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಅವರನ್ನು ಗೆಲ್ಲಿಸಬೇಕಾಗಿದೆ’ ಎಂದು ಮನವಿ ಮಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಎ.ವಸಂತಕುಮಾರ ಮಾತನಾಡಿ, ‘ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸುವುದು ಹಾಗೂ ಬಿಜೆಪಿಯನ್ನು ಸೋಲಿಸುವುದು ನಮ್ಮ ಗುರಿಯಾಗಿದೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದೇಶದಲ್ಲಿ ಸುಳ್ಳು ತುಂಬಿಕೊಂಡಿದೆ. ದೇಶದ ಹಿನ್ನಡೆಗೆ ಮೋದಿ ಅವರೇ ಕಾರಣವಾಗಿದ್ದಾರೆ’ ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಪಾರಸಮಲ್‌ ಸುಖಾಣಿ, ಜಿ. ಬಸವರಾಜ ರೆಡ್ಡಿ, ಶರಣಗೌಡ ಬಯ್ಯಾಪುರ, ಬಸವರಾಜ ಪಾಟೀಲ ಇಟಗಿ, ಕಾಂಗ್ರೆಸ್‌ನ  ಮೊಹ್ಮದ್ ಶಾಲಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ರೆಡ್ಡಿ, ಕುರಬದೊಡ್ಡಿ ಆಂಜನೇಯ, ಜಯಣ್ಣ, ಕೆ.ಶಾಂತಪ್ಪ, ಬಶೀರುದ್ದೀನ್, ಅರುಣ ದೋತರಬಂಡಿ, ಜಿ ಶಿವಮೂರ್ತಿ, ರುದ್ರಪ್ಪ ಅಂಗಡಿ, ಅಮರೇಗೌಡ ಹಂಚಿನಾಳ,  ಬಿ ರಮೇಶ, ಅಫ್ಜಲ್, ವಾಹೀದ್, ಸಮೀರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT