ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮಮಂದಿರ: ಮೋದಿ ಪಾಲ್ಗೊಂಡಿದ್ದಕ್ಕೆ ವಿರೋಧ, ಸಿಪಿಐ ರೆಡ್ ಸ್ಟಾರ್ ಪ್ರತಿಭಟನೆ

Published 22 ಜನವರಿ 2024, 15:38 IST
Last Updated 22 ಜನವರಿ 2024, 15:38 IST
ಅಕ್ಷರ ಗಾತ್ರ

ರಾಯಚೂರು: ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸಿರುವುದನ್ನು ಖಂಡಿಸಿ ಸಿಪಿಐ (ಎಂಎಲ್) ರೆಡ್‌ಸ್ಟಾರ್ ರಾಯಚೂರು ಜಿಲ್ಲಾ ಸಮಿತಿ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪಕ್ಷದ ಮುಖಂಡರು ಪ್ರತಿಭಟನೆ ನಡೆಸಿ ಪ್ರಧಾನಿ ಮೋದಿಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸ್ವತಂತ್ರ, ಸಾರ್ವಭೌಮ, ಜಾತ್ಯತೀತ, ಸಮಾಜವಾದಿ ಆಶಯವನ್ನು ಹೊಂದಿರುವಂತಹ ಭಾರತದಲ್ಲಿ ಪ್ರಧಾನಿ ಅವರು ಒಂದು ಧರ್ಮದ ಪರ ವಕಾಲತ್ತು ಮಾಡಿದ್ದು ಖಂಡನೀಯ. ದೇಶದ ಅಭಿವೃದ್ಧಿಗೆ ಪೂರಕವಾಗಿ ಹಾಗೂ ಸಂವಿಧಾನಾತ್ಮಕವಾಗಿ ಕಾರ್ಯನಿರ್ವಹಿಸಬೇಕಾದ ಸರ್ಕಾರ ಮಂದಿರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ದೇಶದ ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದೆ ಎಂದು ದೂರಿದರು.

ದೇಶದಲ್ಲಿ ನಿರುದ್ಯೋಗ, ಹಸಿವು, ಬಡತನ, ಬೆಂಬಲ ಬೆಲೆಯ ಕೊರತೆ, ಆರೋಗ್ಯದ ಸಮಸ್ಯೆ ಹಾಗೂ ಇತರೆ ಗಂಭೀರ ಸಮಸ್ಯೆಗಳನ್ನು ಜನರು ಎದುರಿಸುತ್ತಿರುವ ಸಂದರ್ಭದಲ್ಲಿ ಜನತೆಯ ನೆರವಿಗೆ ಬಾರದೆ ಜನರಿಂದ ಸಂಗ್ರಹಿಸಿದ ತೆರಿಗೆಯ ಸಾವಿರಾರು ಕೋಟಿ ಹಣವನ್ನು ಮಂದಿರ ಕಟ್ಟುವುದಕ್ಕೆ ಬಳಸುವುದು ಕೂಡ ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತ ವಿರೋಧಿ, ಕಾರ್ಮಿಕ ವಿರೋಧಿ, ಜಾತ್ಯತೀತ, ಆದಿವಾಸಿ, ದಲಿತ, ಅಲ್ಪಸಂಖ್ಯಾತರ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಿದೆ. ದೇಶದ ಸಂಪನ್ಮೂಲಗಳನ್ನು ಹಾಗೂ ಸೇವಾ ವಲಯಗಳನ್ನು ಕಾರ್ಪೊರೇಟರ್ ಲಾಭಕ್ಕೆ ತಕ್ಕಂತೆ ಖಾಸಗೀಕರಣಗೊಳಿಸಿ ದೇಶದ ಅಭಿವೃದ್ಧಿಗೆ ಮಾರಕವಾದ ನೀತಿ ಅನುಸರಿಸುತ್ತಿದೆ. ಒಂದೆಡೆ ಬಂಡವಾಳ ಶಾಹಿಗಳ ಆದಾಯ ಹೆಚ್ಚಾಗುತ್ತಿದ್ದು ಮತ್ತೊಂದೆಡೆ ಕೂಲಿ ಕಾರ್ಮಿಕರ ರೈತರ ಬದುಕು ಹೀನಾಯವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈಗ ಟ್ಯಾಕ್ಸಿ, ಲಾರಿ ಚಾಲಕರ ವಿರೋಧಿ ಹಾಗೂ ರಿಲಯನ್ಸ್ ಎಸ್‌ಆರ್ ಎಂಬ ಕಂಪನಿಗಳ ಪರವಾದ ವಿಧೇಯಕವನ್ನು ಮಂಡಿಸುವುದರ ಮೂಲಕ ಅಮಾಯಕ ಚಾಲಕರನ್ನು ಬಲಿಕೊಡುವ ಕೆಲಸದಲ್ಲಿ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ದೂರಿದರು.

ಮುಂಬರುವ ಲೋಕಸಭಾ ಚುನಾವಣೆ ಗೆಲ್ಲುವ ಸಲುವಾಗಿ ಹಿಂದೂ ಮೂಲಭೂತವಾದವನ್ನು ಗಟ್ಟಿಗೊಳಿಸುತ್ತಿದೆ. ರಾಷ್ಟ್ರೀಯ ಸರಕು ಸಾಗಾಣೆಯ ಖಾಸಗೀಕರಣದ ಪ್ರಯತ್ನ ನಡೆದಿದೆ. ಮನೆ ಮನೆಗೆ ಅಕ್ಷತೆಯ ಹೆಸರಲ್ಲಿ ಅಮಾಯಕ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಈ ತಂತ್ರಗಾರಿಕೆಯನ್ನು ಮಾಡುತ್ತಿದೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿಗಳ ಜಾರಿಯಲ್ಲಿಯೇ ಮಗ್ನವಾಗಿದ್ದು ಸಾಮಾನ್ಯ ಜನರ ಸಮಸ್ಯೆಗಳಿಗೆ ಹಾಗೂ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಪೂರಕವಾದ ಯೋಜನೆಗಳನ್ನು ರೂಪಿಸುವಲ್ಲಿ ವಿಫಲವಾಗಿದೆ. ಜಾತಿಗಣತಿ ವರದಿ ಬಿಡುಗಡೆ ಮಾಡದೆ ತಮ್ಮದೇ ಪಕ್ಷದ ಕೆಲವೇ ಕೆಲವು ಮಂತ್ರಿಗಳು ಮತ್ತು ಜಾತಿವಾದಿ ಶಾಸಕರ ನಿರ್ದೇಶನದಂತೆ ತಡೆಹಿಡಿಯಲಾಗಿದೆ. ಈ ಕೂಡಲೇ ರಾಜ್ಯ ಸರ್ಕಾರ ಜಾತಿಗಣತಿ ವರದಿಯನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಪದಾಧಿಕಾರಿಗಳಾದ ಎಂ.ಡಿ.ಅಮೀರ್ ಅಲಿ, ಚಿನ್ನಪ್ಪ ಕೊಟ್ರಿಕಿ, ಜಿ.ಅಮರೇಶ, ಎಂ.ಗಂಗಾಧರ ಆರ್.ಹುಚ್ಚರೆಡ್ಡಿ, ಮಲ್ಲಯ್ಯ ಕಟ್ಟಿಮನಿ, ಸೈಯದ್ ಅಬ್ಬಾಸ್ ಅಲಿ, ಜಿ.ಅಡವಿರಾವ್, ಅಜೀಜ್ ಜಾಗೀರದಾರ್, ಆದಿ ನಗನೂರು, ಸಂತೋಷ ದಿನ್ನಿ, ತಿಪ್ಪರಾಜ ಗೆಜ್ಜಲಗಟ್ಟಾ, ವೆಂಕಟೇಶ ನಾಯಕ, ಯಲ್ಲಪ್ಪ ಊಟಕನೂರು ಹಾಗೂ ಗಿರಿಲಿಂಗಸ್ವಾಮಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT