ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಜಿಲ್ಲೆಯಲ್ಲಿ ಜೋಳ, ಕಡಲೆ ಬಂಪರ್‌ ಬೆಳೆ

ಉತ್ತಮ ದರ ದೊರಕುವ ನಿರೀಕ್ಷೆಯಲ್ಲಿ ರೈತರು
Last Updated 19 ಜನವರಿ 2022, 20:30 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಾದ್ಯಂತ ಹಿಂಗಾರು ಹಂಗಾಮಿನಲ್ಲಿ ಬೆಳೆದಿರುವ ಜೋಳ ಹಾಗೂ ಕಡಲೆ ಫಸಲು ಉತ್ತಮವಾಗಿದ್ದು, ಶೀಘ್ರದಲ್ಲೇ ಕಟಾವು ಆರಂಭವಾಗಲಿದೆ.

ಕೆಲವು ರೈತರು ಈಗಾಗಲೇ ಜೋಳ ಕಟಾವು ಮಾಡಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ದರವಿಲ್ಲದೆ ನಿರಾಸೆ ಅನುಭವಿಸುವಂತಾಗಿದೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಮಾರಾಟ ಮಾಡುವುದಕ್ಕೆ ರೈತರು ನೋಂದಣಿ ಮಾಡಿಕೊಂಡಿದ್ದರೂ ಖರೀದಿ ಇನ್ನೂ ಆರಂಭವಾಗಿಲ್ಲ. ಅಲ್ಲದೆ, ನಿಗದಿತ ಪ್ರಮಾಣದಲ್ಲಿ ಮಾತ್ರ ಖರೀದಿಸಲಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿಯಾದರೂ ದರ ಏರಿಕೆಯಾಗಬಹುದು ಎಂದು ರೈತರು ಕಾಯುತ್ತಿದ್ದಾರೆ.

ಎಂಎಸ್‌ಪಿ ಕೇಂದ್ರಗಳಲ್ಲಿ ಒಬ್ಬ ರೈತರಿಂದ ಜೋಳ ಗರಿಷ್ಠ 20 ಕ್ವಿಂಟಲ್ ಖರೀದಿಸಲಾಗುತ್ತಿದ್ದು, ಬಿಳಿಜೋಳ-ಹೈಬ್ರೀಡ್‌ಗೆ ಪ್ರತಿ ಕ್ವಿಂಟಲ್‌ಗೆ ₹2,738 ಹಾಗೂ ಬಿಳಿಜೋಳ-ಮಾಲ್ದಂಡಿಗೆ ಪ್ರತಿ ಕ್ವಿಂಟಲ್‌ಗೆ ₹2,758 ಗಳಂತೆ ದರ ನಿಗದಿ ಮಾಡಲಾಗಿದೆ. ಜೋಳ ಖರೀದಿ ಆರಂಭಿಸಲಾಗಿದೆ ಎಂದು ಹೇಳಿದ್ದರೂ, ಅಧಿಕೃತವಾಗಿ ಇನ್ನೂ ಖರೀದಿ ಆರಂಭವಾಗಿಲ್ಲ. ಫೆಬ್ರುವರಿ ಆರಂಭವಾಗುತ್ತಿದ್ದಂತೆ ಜೋಳ ಮತ್ತು ಕಡಲೆ ಕೊಯ್ಲು ವ್ಯಾಪಕವಾಗಿ ಪ್ರಾರಂಭವಾಗುವ ನಿರೀಕ್ಷೆ ಇದೆ.

ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯು 91 ಸಾವಿರ ಹೆಕ್ಟೇರ್‌ ಜೋಳ ಬಿತ್ತನೆ ಗುರಿ ಹೊಂದಿದ್ದರೂ 71,019 ಹೆಕ್ಟೇರ್‌ನಲ್ಲಿ ಬಿತ್ತನೆ ಸಾಧನೆಯಾಗಿದೆ. ಕಡಲೆ ಬಿತ್ತನೆ ಗುರಿ 1,12,037 ಹೆಕ್ಟೇರ್‌ ಬಿತ್ತನೆ ಇದ್ದರೂ, ಗುರಿ ಮೀರಿ 2,16,690 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಒಣಬೇಸಾಯ ಹೆಚ್ಚಿನ ಪ್ರಮಾಣದಲ್ಲಿರುವ ಲಿಂಗಸುಗೂರು ಹಾಗೂ ಮಸ್ಕಿ ತಾಲ್ಲೂಕುಗಳಲ್ಲಿ ಈ ಸಲ ವ್ಯಾಪಕವಾಗಿ ಕಡಲೆ ಬಿತ್ತನೆಯಾಗಿದೆ.

ಲಿಂಗಸುಗೂರು ತಾಲ್ಲೂಕಿನಲ್ಲಿ 50,400 ಕಡಲೆ ಬಿತ್ತನೆ ಗುರಿ ಇತ್ತು, 46,204 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಮಸ್ಕಿ ತಾಲ್ಲೂಕಿನಲ್ಲಿ 20,487 ಹೆಕ್ಟೇರ್‌ ಕಡಲೆ ಬಿತ್ತನೆಯಾಗುವ ಗುರಿ ಇತ್ತು. ಆದರೆ, 34,196 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಕಾಲುವೆ ನೀರು ಸಮರ್ಪಕವಾಗಿ ದೊರೆಯದ ಭಾಗದಲ್ಲಿರುವ ಬಹುತೇಕ ರೈತರು ಕಡಲೆ ಬೆಳೆದಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಹತ್ತಿ ಬೆಳೆದಿದ್ದ ರೈತರ ಪೈಕಿ ಕೆಲವರು ಇನ್ನೂ ಜಮೀನು ಖಾಲಿ ಮಾಡಿಕೊಂಡಿಲ್ಲ. ಭತ್ತ ಬೆಳೆದು ಕಟಾವು ಮಾಡಿಕೊಂಡಿದ್ದವರು ಹಾಗೂ ನಷ್ಟ ಅನುಭವಿಸಿದ ರೈತರು ಎರಡನೇ ಬೆಳೆಗೆ ಭತ್ತವನ್ನೇ ಬೆಳೆಯುತ್ತಿದ್ದಾರೆ. ಕಾಲುವೆ ನೀರು ಸಮರ್ಪಕವಾಗಿ ಲಭ್ಯವಿರುವ ರೈತರು ಮಾತ್ರ ಭತ್ತದ ಮೊರೆ ಹೋಗಿದ್ದಾರೆ. ಇನ್ನುಳಿದಂತೆ ಹತ್ತಿ ಬೆಳೆದಿರುವ ರೈತರು ಈ ವರ್ಷ ಉತ್ತಮ ಲಾಭ ಪಡೆದುಕೊಂಡು ಸಂತುಷ್ಟದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT