ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನಧನ ಖಾತೆ ತೆರೆಸಿದರೂ ಹಣ ಕೊಡದ ಬಿಜೆಪಿ ಸರ್ಕಾರ

ಕೇಂದ್ರದ ವಿರುದ್ದ ಉಪ ಮುಖ್ಯಮಂತ್ರಿ‌ ಡಿ.ಕೆ. ಶಿವಕುಮಾರ ವಾಗ್ಧಾಳಿ
Published 14 ಮಾರ್ಚ್ 2024, 15:49 IST
Last Updated 14 ಮಾರ್ಚ್ 2024, 15:49 IST
ಅಕ್ಷರ ಗಾತ್ರ

ರಾಯಚೂರು: ‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೆಲ್ಲ ದೇಶ ಅಭಿವೃದ್ಧಿಯ ಪರ್ವವನ್ನೇ ಕಂಡಿದೆ. ಬಿಜೆಪಿ ಸರ್ಕಾರ ಮಾತ್ರ ಅಚ್ಛೇದಿನ ಬರಲಿದೆ ಎನ್ನುತ್ತಲೇ ದೇಶದ ಜನರನ್ನು ಸಂಕಷ್ಟಕ್ಕೆ ದೂಡಿದೆ’ ಎಂದು ಉಪ ಮುಖ್ಯಮಂತ್ರಿ‌ ಡಿ.ಕೆ. ಶಿವಕುಮಾರ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರ ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ಜಮಾ ಮಾಡುವ ಭರವಸೆ ನೀಡಿ ಜನರಿಂದ ಜನಧನ ಖಾತೆಗಳನ್ನು ತೆರೆಸಿತು. ಆದರೆ ಬ್ಯಾಂಕ್‌ ಖಾತೆಗೆ ಹಣವನ್ನೇ ಜಮಾ ಮಾಡಲಿಲ್ಲ. ಆದರೆ, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡಿದೆ‘ ಎಂದು ತಿಳಿಸಿದರು.

‘ಕೇಂದ್ರಕ್ಕೆ ತೆರಿಗೆ ಹಣದ ಸಂಗ್ರಹಿಸಿಕೊಟ್ಟರೂ ಬಿಜೆಪಿ ಸರ್ಕಾರ ರಾಜ್ಯದ ಪಾಲನ್ನೂ ಕೊಡುತ್ತಿಲ್ಲ. ಅನ್ನಭಾಗ್ಯಕ್ಕೆ ಅಕ್ಕಿಯನ್ನೂ ಕೊಡಲಿಲ್ಲ. ನೀರನ್ನು ಕೊಡಲಿಲ್ಲ. ಜನರಿಗೆ ಅಚ್ಛೇ ದಿನಗಳು ಬರಲೇ ಇಲ್ಲ‘ ಎಂದು ಟೀಕಿಸಿದರು.

‘ಐದು ಯೋಜನೆಗಳಿಗೆ ರಾಜ್ಯ ಸರ್ಕಾರ ವರ್ಷಕ್ಕೆ ₹ 24 ಸಾವಿರ ಕೋಟಿ ಕೊಡಬೇಕಾಗುತ್ತದೆ. ಬಡವರ ಹಿತದೃಷ್ಟಿಯಿಂದ ಕಾಂಗ್ರೆಸ್‌ ಸರ್ಕಾರ ಐತಿಹಾಸಿಕ ತೀರ್ಪು ತೆಗೆದುಕೊಂಡಿದೆ. ಈ ದೇಶಕ್ಕೆ ಶಕ್ತಿ ತುಂಬಿದ್ದೇ ಕಾಂಗ್ರೆಸ್. ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್‌ ಅವರಂತೆ ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ 371(ಜೆ) ಕೊಡಿಸಿದರು. ಅದರ ಫಲವಾಗಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಈ ಭಾಗದ ವಿದ್ಯಾರ್ಥಿಗಳು ಮೀಸಲಾಗಿ ಸೌಲಭ್ಯ ಪಡೆಯಲು ಸಾಧ್ಯವಾಗಿದೆ. ಇದನ್ನು ಯಾರೂ ಮರೆಯಬಾರದು’ ಎಂದು ಹೇಳಿದರು.

‘ರಾಯಚೂರು ಜಿಲ್ಲೆಯ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ಒದಗಿಸಿದೆ. ಕೆರೆಗಳನ್ನು ತುಂಬಿಸಲು ಆದ್ಯತೆ ಕೊಡಲಾಗಿದೆ‘ ಎಂದು ತಿಳಿಸಿದರು.

ನವಲಿ ಸಮಾನಾಂತರ ಜಲಾಯಶಯ ನಿರ್ಮಾಣಕ್ಕೆ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಆಂಧ್ರಪ್ರದೇಶದ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತೇವೆ. ಗಣೇಕಲ್‌ ಜಲಾಶಯದಲ್ಲಿನ ಹೂಳು ತೆಗೆಯುವ ದಿಸೆಯಲ್ಲಿ ಕ್ರಮ ಕೈಗೊಳ್ಳಲಾಗುವುದು. ರಾಯಚೂರಿಗೆ ಏಮ್ಸ್ ತರಲು ಎಲ್ಲ ರೀತಿಯ ಪ್ರಯತ್ನ ಮುಂದುವರಿಸಿದ್ದೇವೆ‘ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ, ಸಣ್ಣ ನೀರಾವರಿ ಸಚಿವ ಎನ್‌.ಎಸ್. ಬೋಸರಾಜ, ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮಾತನಾಡಿದರು.

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ, ಮಾನ್ವಿ ಶಾಸಕ ಹಂಪಯ್ಯ ನಾಯಕ ಸಾಹುಕಾರ, ಸಂಡೂರು ಶಾಸಕ ತುಕಾರಾಂ, ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಉಪಾಧ್ಯಕ್ಷ ಬಸೀರ್ ಆಹ್ಮದ್, ಮಾಜಿ ಸದಸ್ಯ ಬಸವರಾಜ ಪಾಟೀಲ ಇಟಗಿ, ಮಾಜಿ ಶಾಸಕ ಡಿ.ಎಸ್ ಹುಲಿಗೇರಿ, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಪಂಚಾಯಿತಿಯ ಸಿಇಒ ರಾಹುಲ್ ಪಾಂಡ್ವೆ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತೆದಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬಲಾಬಲ ಪ್ರದರ್ಶನ

ಕಾರ್ಯಕ್ರಮದ ಕೊನೆಯಲ್ಲಿ ಡಿ.ಕೆ ಶಿವಕುಮಾರ ಅವರಿಗೆ ಸಣ್ಣ ನೀರಾವರಿ ಸಚಿವ ಎನ್‌.ಎಸ್. ಬೋಸರಾಜ ಹಾಗೂ ಶಾಸಕ ಬಸನಗೌಡ ದದ್ದಲ್ ಅವರ ಬೆಂಬಲಿಗರು ಪ್ರತ್ಯೇಕವಾಗಿ ಬೆಳ್ಳಿಯ ಗಧೆ ನೀಡಿ ಸನ್ಮಾನಿಸಿದರು.

ಈ ವೇಳೆ ಬಸನಗೌಡ ದದ್ದಲ್ ಅವರ ಬೆಂಬಲಿಗರು ಘೋಷಣೆ ಕೂಗಿದರು ಇದಕ್ಕೆ ಪ್ರತಿಯಾಗಿ ಎನ್‌. ಎಸ್‌. ಬೋಸರಾಜು ಬೆಂಬಲಿಗರೂ ಮೈಕ್ ಎಳೆದು ಘೋಷಣೆ ಕೂಗಿದರು. ಇದನ್ನು ಗಮನಿಸಿದ ಡಿ.ಕೆ ಶಿವಕುಮಾರ ದಂಗಾದರು.

ಇಬ್ಬರು ನಾಯಕರ ಬೆಂಬಲಿಗರು ಪರಸ್ಪರ ಜಿದ್ದಿಗೆ ಬಿದ್ದು ಘೊಷಣೆ ಮೊಳಗಿಸಿದ್ದು ಕಾಂಗ್ರೆಸ್ ನಾಯಕರ ಬಣ ರಾಜಕೀಯ ಬಯಲಿಗೆ ಕಾರಣವಾಯಿತು.

ಬಿಸಿಲಿಗೆ ಬಳಲಿದ ಮಹಿಳೆಯರು

ಗ್ಯಾರಂಟಿ ಸಮಾವೇಶಕ್ಕೆ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಹತ್ತಾರು ಬಸ್ ಗಳಲ್ಲಿ ಕರೆತಂದ ಮಹಿಳೆಯರಿಗೆ ದೊಡ್ಡದಾದ ಪೆಂಡಾಲ್ ನಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು.

ಕ್ರೀಡಾಂಗಣದ ಹೊರಗಡೆ ಪೈಪ್‌ಗಳಿಗೆ ನಲ್ಲಿಗಳನ್ನು ಜೋಡಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಒಳಾಂಗಣ ಕ್ರೀಡಾಂಗಣದ ಬಳಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟಕ್ಕೆ ಮಹಿಳೆಯರ ನೂಕುನುಗ್ಗಲು ಕಂಡು ಬಂದಿತು.

ಬೆಳಿಗ್ಗೆ 11 ಗಂಟೆಗೆ ಶುರುವಾಗಬೇಕಾಗಿತ್ತು. ಮುಖ್ಯಮಂತ್ರಿ ಸಮಾವೇಶಕ್ಕೆ ಗೈರಾಗಿದ್ದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಧ್ಯಾಹ್ನ 2 ಗಂಟೆಗೆ ವೇದಿಕೆಗೆ ಬಂದರು. ಕಾರ್ಯಕ್ರಮ ಎರಡು ತಾಸು ವಿಳಂಬವಾಗಿ ಆರಂಭವಾಯಿತು.

ಬಿಸಿಲಿನ ತಾಪ ಹಾಗೂ ಸೆಖೆಗೆ ಮಹಿಳೆಯರು ಸುಸ್ತಾಗಿದ್ದರು. ಕಾರ್ಯಕ್ರಮ ಮುಗಿದಾಗ 3.30 ಆಗಿತ್ತು. ನಂತರ ಊಟ ಮಾಡಲು ಹೋದವರಿಗೆ ಊಟ ಸಿಗದೆ ನಿರಾಸೆಯಿಂದ ತಮ್ಮ ಊರುಗಳಿಗೆ ಹೆಜ್ಜೆ ಹಾಕಿದರು. ಕೆಲವು ಮಹಿಳೆಯರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಭಾಷಣ ಕೇಳಲೆಂದೇ ಬಂದಿದ್ದರು. ಕಾರ್ಯಕ್ರಮಕ್ಕೆ ಗೈರಾದ ಸುದ್ದಿ ತಿಳಿದು ನಿರಾಸೆಯಾದರು.

ಶಿಷ್ಟಾಚಾರ ಗಾಳಿಗೆ

ಸರ್ಕಾರದ ಕಾರ್ಯಕ್ರಮವಾದರೂ ರಾಜಕೀಯ ಪುಢಾರಿಗಳು ಪೊಲೀಸರ ಸಲುಗೆ ಬೆಳೆಸಿಕೊಂಡು ವೇದಿಕೆ ಮೇಲೆ ಬಂದು ಕುಳಿತಿದ್ದರು. ಜಿಲ್ಲಾಧಿಕಾರಿ ಚಂದ್ರಶೇಖರ ಸೂಕ್ಷ್ಮವಾಗಿ ಸೂಚಿಸಿದರೂ ಕೆಲ ಮುಖಂಡರು ಕುರ್ಚಿಬಿಟ್ಟು ಮೇಲಕ್ಕೆ ಏಳಲಿಲ್ಲ. ಹೀಗಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಅವರು ಸ್ಥಳಕ್ಕೆ ಬಂದು ವೇದಿಕೆಯಿಂದ ಕೆಳಗೆ ಕಳಿಸಿದರು.

ಅಹ್ವಾನ ಪತ್ರಿಕೆಯಲ್ಲಿ ಹೆಸರು ಇಲ್ಲದವರು ವೇದಿಕೆಯಿಂದ ಕೆಳಗೆ ಇಳಿಯಬೇಕು ಎಂದು ನಿರೂಪಕರು ಹೇಳಿದ ನಂತರ ಕಾಂಗ್ರೆಸ್ ಮುಖಂಡರು ವೇದಿಕೆ ಖಾಲಿ ಮಾಡಿದರು.

ಆದರೆ ದೇವದುರ್ಗ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಮಹಿಳಾ ವಿಭಾಗದ ಪದಾಧಿಕಾರಿ, ವಕ್ತಾರೆ ಶ್ರೀದೇವಿ ನಾಯಕ ಅವರಿಗೆ ಪೊಲೀಸರು ವೇದಿಕೆಯಿಂದ ಕೆಳಗೆ ಇಳಿಯುವಂತೆ ಹೇಳಿದಾಗ ಮೊದಲು ನಿರಾಕರಿಸಿ ಶ್ರೀದೇವಿ ಅನಂತರ ಪೊಲೀಸರ ಒತ್ತಾಯದ ನಂತರ ವೇದಿಕೆಯಿಂದ ಕೆಳಗೆ ಇಳಿದರು.

ಕಾರ್ಯಕ್ರಮ ಶುರುವಾದ ಸ್ವಲ್ಪ ಹೊತ್ತಿನ ನಂತರ ಮತ್ತೆ ಮುಖಂಡರು ವೇದಿಕೆಯಲ್ಲಿ ಬಂದು ಕುಳಿತರು. ಸಮಾವೇಶದಲ್ಲಿ ಸರ್ಕಾರಿ ಶಿಷ್ಟಾಚಾರ ಪಾಲನೆಯಾಗಲಿಲ್ಲ.

ರಾಯಚೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು
ರಾಯಚೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು
ರಾಯಚೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪುರುಷರು
ರಾಯಚೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪುರುಷರು
ರಾಯಚೂರಿನ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಊಟಕ್ಕೆ ಮಹಿಳೆಯರಿಂದ ನೂಕುನುಗ್ಗಲು ಉಂಟಾಗಿತ್ತು
ರಾಯಚೂರಿನ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಊಟಕ್ಕೆ ಮಹಿಳೆಯರಿಂದ ನೂಕುನುಗ್ಗಲು ಉಂಟಾಗಿತ್ತು
ರಾಯಚೂರಿನ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು
ರಾಯಚೂರಿನ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT