ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಉಳಿಸುವವರಿಗೆ ಸಿಗುತ್ತಿಲ್ಲ ಪ್ರೋತ್ಸಾಹ: ನಿಜಾಮುದ್ದೀನ್‌

Last Updated 30 ಅಕ್ಟೋಬರ್ 2020, 15:10 IST
ಅಕ್ಷರ ಗಾತ್ರ

ರಾಯಚೂರು: ಕನ್ನಡ ಭಾಷೆ ಉಳಿಸಿ, ಬೆಳೆಸಿ ಎನ್ನುವುದು ಬರೀ ಘೋಷಣೆಗೆ ಸಿಮೀತವಾಗಿದೆ. ರಾಯಚೂರಿಗೆ ಹೊಂದಿಕೊಂಡಿರುವ ತೆಲಂಗಾಣದ ಕೃಷ್ಣಾ ಮಂಡಲ್‌ ಆಸುಪಾಸು 13 ಗ್ರಾಮಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಿದ್ದರೂ, ಅಲ್ಲಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಯಾವುದೇ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಗಡಿನಾಡು ಕನ್ನಡ ಸಂಘ ಕೃಷ್ಣಾಮಂಡಲ್‌ ಅಧ್ಯಕ್ಷ ನಿಜಾಮುದ್ದೀನ್‌ ಅಸಹಾಯಕತೆ ವ್ಯಕ್ತಪಡಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೆಲಂಗಾಣ ಸರ್ಕಾರವು ಕನ್ನಡ ಮಾಧ್ಯಮ ಶಾಲೆಗಳನ್ನು ತೆರೆಯುವುದಕ್ಕೆ ಅವಕಾಶ ಮಾಡಿದೆ. ಸುಮಾರು 35 ಶಿಕ್ಷಕರಿಗೆ ಅಲ್ಲಿನ ಸರ್ಕಾರ ವೇತನ ನೀಡುತ್ತಿದೆ. ಆದರೆ ಕನ್ನಡ ಮಾಧ್ಯಮದಲ್ಲಿ ಪ್ರೌಢಶಾಲೆ ಪೂರ್ಣಗೊಳಿಸುವ ವಿದ್ಯಾರ್ಥಿಗಳಿಗೆ ರಾಯಚೂರಿನಲ್ಲಿ ಪಿಯುಸಿ ಕಾಲೇಜುಗಳಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಇದರಿಂದ ಗಡಿಭಾಗದಲ್ಲಿ ಕನ್ನಡ ಭಾಷೆ ಉಳಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದರು.

ಕನ್ನಡ ಅಭಿಮಾನದಿಂದ ವಿದ್ಯಾರ್ಥಿಗಳು ಭವಿಷ್ಯ ಹಾಳು ಮಾಡಿಕೊಳ್ಳುವ ದುಃಸ್ಥಿತಿ ಉದ್ಭವಿಸಿದೆ. ಇದೀಗ ಕನ್ನಡ ಮಾಧ್ಯಮಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಶಿಕ್ಷಕರೆಲ್ಲರೂ ಅಲ್ಲಿರುವ ಕನ್ನಡಿಗ ಕುಟುಂಬಗಳಿಗೆ ಭರವಸೆ ಮೂಡಿಸಿ, ಶಿಕ್ಷಣ ನೀಡುತ್ತಿದ್ದಾರೆ. ಇತ್ತೀಚೆಗೆ ಪಾಲಕರು ಶಿಕ್ಷಕರನ್ನು ಜರಿಯುವ ಸಂದರ್ಭ ಉದ್ಭವಿಸಿದೆ. ಕಾಲೇಜು ಶಿಕ್ಷಣಕ್ಕಾಗಿ ಕೃಷ್ಣಾ ವಿದ್ಯಾರ್ಥಿಗಳು ಕಷ್ಟಪಡುತ್ತಿದ್ದಾರೆ. ಗಡಿನಾಡು ಕನ್ನಡ ಅಭಿವೃದ್ಧಿಗಾಗಿ ಸರ್ಕಾರ ಅನುದಾನ ಮೀಸಲಿಡುತ್ತಿದೆ. ಆದರೆ, ವಾಸ್ತವದಲ್ಲಿ ಸಮಸ್ಯೆಗಳನ್ನು ಪರಿಹಾರ ಮಾಡುತ್ತಿಲ್ಲ. ಕನ್ನಡ ವಿದ್ಯಾರ್ಥಿಗಳಿಗೆ ಸಿಗುವ ಸ್ಥಾನಮಾನ, ಗಡಿನಾಡು ಕನ್ನಡದ ವಿದ್ಯಾರ್ಥಿಗೆ ಸಿಗುತ್ತಿಲ್ಲ ಎಂದು ಹೇಳಿದರು.

ಗಡಿಭಾಗದ ವಿದ್ಯಾರ್ಥಿಗಳಿಗೆ ಹಾಸ್ಟೇಲ್‌ಗಳಿಗೆ ಪ್ರವೇಶ ನೀಡುತ್ತಿಲ್ಲ. ರಾಜ್ಯ ಸರ್ಕಾರವು ಹೊರಡಿಸಿದ್ದ ಆದೇಶವನ್ನು ಶಿಕ್ಷಣ ಇಲಾಖೆ ಪಾಲನೆ ಮಾಡುತ್ತಿಲ್ಲ. ಕೃಷ್ಣಾ ಗಡಿಭಾಗದ ವಿದ್ಯಾರ್ಥಿಗಳ ಆದಾಯ ಪ್ರಮಾಣಪತ್ರವನ್ನು ಪರಿಗಣಿಸಿ ಪ್ರವೇಶ ಕಲ್ಪಿಸಬೇಕು. ಕನ್ನಡಿಗರ ಸಮಸ್ಯೆಯನ್ನು ಕನ್ನಡನಾಡಿನವರು ಆಲಿಸುತ್ತಿಲ್ಲ. ಈ ಧೋರಣೆ ಬದಲಾಗಬೇಕಿದೆ ಎಂದರು.

ಸಮಿತಿ ಉಪಾಧ್ಯಕ್ಷ ಅಮರ ದೀಕ್ಷಿತ್‌ ಮಾತನಾಡಿ, ಗಡಿನಾಡ ಗ್ರಾಮಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಪ್ರವೇಶಾತಿ ನೀಡುವಂತೆ 2011 ರಲ್ಲಿ ಸರ್ಕಾರ ಆಧಿಸೂಚನೆ ಹೊರಡಿಸಿದೆ. ಆದರೆ, ಐಟಿಐ ಸೇರಿದಂತೆ ವಿವಿಧ ಪಿಯು ಕಾಲೇಜುಗಳಲ್ಲಿ ಪ್ರವೇಶಾತಿ ಸಿಗುತ್ತಿಲ್ಲ. ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಅಂಟಿಕೊಂಡಿದ್ದು, ನಿಜವಾದ ಭಾಷಾಭಿಮಾನ ಬೆಳೆಸಲು ಮುಂದಾಗುತ್ತಿಲ್ಲ ಎಂದು ಹೇಳಿದರು.

ಕಪ್ಪುಪಟ್ಟಿ ಪ್ರದರ್ಶನ: ಗಡಿಭಾಗದ ವಿದ್ಯಾರ್ಥಿಗಳಿಗೆ ಸುಗಮ ಪ್ರವೇಶಾತಿ, ಶಿಷ್ಯವೇತನ ಕೊಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನವೆಂಬರ್‌ 1 ರಂದು ಕಪ್ಪುಪಟ್ಟಿ ಧರಿಸಿ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರಿಗೆಮನವಿ ಸಲ್ಲಿಸಲಾಗುವುದು ಎಂದು ಸಂಘದಸದಸ್ಯರು ತಿಳಿಸಿದರು.

ವಕೀಲ ನೀಲಕಂಠರಾವ್‌, ನಾಗಭೂಷಣ, ರಾಮಲಿಂಗಪ್ಪ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT