ಸಿಂಧನೂರು: ಕಟ್ಟಡ ಪರವಾನಗಿಗೆ ಅಲೆಯುವ ನಾಗರಿಕರು

ಸಿಂಧನೂರು: ನಗರ ಯೋಜನಾ ಪ್ರಾಧಿಕಾರದ ಅನುಮತಿ ಇಲ್ಲದ ನಿವೇಶನ ಖರೀದಿಸಿದ ನಾಗರಿಕರು ಕಟ್ಟಡ ಪರವಾನಗಿ ಪಡೆಯಲು ನಗರಸಭೆಗೆ ಅಲೆದಲಿದು ಸುಸ್ತಾಗಿದ್ದಾರೆ.
ನಗರಸಭೆ ಮತ್ತು ನಗರ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಪ್ರಾಧಿಕಾರದ ಅನುಮತಿ ಇಲ್ಲದ ನಿವೇಶನಗಳಿಗೆ ಕಟ್ಟಡ ಕಟ್ಟಲು ಅನುಮತಿ ಕೊಡುವುದಿಲ್ಲವೆಂದು ಸ್ಪಷ್ಟವಾಗಿ ಹೇಳುತ್ತಿರುವುದರಿಂದ ನಾಗರಿಕರು ತ್ರಿಶಂಕು ಸ್ತಿತಿಯನ್ನು ಅನುಭವಿಸಬೇಕಾಗಿದೆ.
ಈ ಹಿಂದೆ ಭೂಮಿಯನ್ನು ನಿವೇಶನಕ್ಕೆ ಪರಿವರ್ತಿಸುವ ಬಿನ್‍ಶೇತಕಿ (ಎನ್‍ಎ) ಆಗಿದ್ದರೆ ಸಾಕು ನಗರಸಭೆ ನಿವೇಶನ ಮಾರಾಟಕ್ಕೆ ಅನುಮತಿ ಕೊಡುತ್ತಿತ್ತು. ಸಿಂಧನೂರಿನಲ್ಲಿ ನಗರ ಯೋಜನಾ ಪ್ರಾಧಿಕಾರದ ಕಚೇರಿ ಪ್ರಾರಂಭವಾದ ನಂತರ ವಸತಿ ನಿವೇಶನಗಳಿಗೆ ಭೂಮಿಯನ್ನು ಪರಿವರ್ತಿಸಲು ಹಲವಾರು ಷರತ್ತುಗಳನ್ನು ವಿಧಿಸಿತು.
30 ಅಡಿ ರಸ್ತೆ, ನಾಗರಿಕ ಸೌಲಭ್ಯಕ್ಕೆ ಪ್ರತ್ಯೇಕ ನಿವೇಶನ, ಉದ್ಯಾನಕ್ಕೆ ಜಾಗ ಮೀಸಲು, ಚರಂಡಿ, ವಿದ್ಯುತ್, ಕುಡಿಯುವ ನೀರಿನ ಸೌಕರ್ಯ ಹೀಗೆ ಹಲವು ಸೌಕರ್ಯ ಕಲ್ಪಿಸಿದ ನಂತರವೇ ನಗರಸಭೆ ಮತ್ತು ನಗರಯೋಜನಾ ಪ್ರಾಧಿಕಾರಗಳು ವಸತಿ ನಿವೇಶನ ಮತ್ತು ಇತರ ಉಪಯೋಗದ ಮಾರಾಟಕ್ಕೆ ಅವಕಾಶ ನೀಡುತ್ತಿವೆ.
ನಗರ ಯೋಜನಾ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ನಂತರವು ಈ ಹಿಂದೆ ಖರೀದಿಸಿದ ನಿವೇಶನಗಳಿಗೆ ಕಟ್ಟಡ ಪರವಾನಗಿಯನ್ನು ಸ್ಥಗಿತಗೊಳಿಸಿರಲಿಲ್ಲ. ಆದರೆ ಕಳೆದ ಒಂದು ವರ್ಷದಿಂದ ಪ್ರಾಧಿಕಾರದಿಂದ ಅನುಮೋದಿತ ವಿನ್ಯಾಸ ಪಡೆಯದ ನಿವೇಶನಗಳಿಗೆ ಪರವಾನಗಿಯನ್ನು ರದ್ದುಪಡಿಸಿರುವುದರಿಂದ ಹಳೆಯ ನಿವೇಶನಗಳನ್ನು ಖರೀದಿಸಿರುವ ನಾಗರಿಕರು ಈಗ ಪೇಚಿಗೆ ಸಿಲುಕಿದ್ದಾರೆ.
ಲಕ್ಷಗಟ್ಟಲೆ ಖರ್ಚು ಮಾಡಿ ಖರೀದಿಸಿರುವ ನಿವೇಶನಕ್ಕೆ ಮನೆ ನಿರ್ಮಾಣ ಮಾಡಲು ಸಕ್ಷಮ ಪ್ರಾಧಿಕಾರಗಳು ಅನುಮತಿ ನೀಡದಿರುವುದರಿಂದ ಮನೆ ನಿರ್ಮಾಣ ಮಾಡುವ ಕನಸು ಕಟ್ಟಿಕೊಂಡ ನಾಗರಿಕರಿಗೆ ದಿಕ್ಕು ತಿಳಿಯದಂತಾಗಿದೆ.
‘ಜಮೀನು ಪರಿವರ್ತನೆ ಮಾಡುವ ಸಮಯದಲ್ಲಿ ನಗರ ಯೊಜನಾ ಪ್ರಾಧಿಕಾರದ ಅನುಮತಿ ಪಡೆದಿಲ್ಲ ಎನ್ನುವ ಕಾರಣವೊಡ್ಡಿ ಅಂತ ನಿವೇಶನಗಳನ್ನು ಅಕ್ರಮ ನಿವೇಶನಗಳೆಂದು ನಗರಸಭೆ ಅಧಿಕಾರಿಗಳು ಮುದ್ರೆ ಒತ್ತುವುದು ಎಷ್ಟು ಸರಿ‘ ಎಂದು ನಗರಸಭೆ ಮಾಜಿ ಸದಸ್ಯರಾದ ಮಹಿಬೂಬ ಪ್ರಶ್ನಿಸಿದ್ದಾರೆ.
ಈ ಕುರಿತು ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಅವರನ್ನು ಸಂಪರ್ಕಿಸಿದಾಗ, ‘ನಗರಯೋಜನಾ ಪ್ರಾಧಿಕಾರ ಸ್ಥಾಪನೆಯಾಗುವ ಪೂರ್ವದಲ್ಲಿ ಮಾಡಲ್ಪಟ್ಟ ನಿವೇಶನಗಳಿಗೆ ನಿರ್ಮಾಣಕ್ಕೆ ಅನುಮತಿ ದೊರೆಯದ ಹಲವಾರು ನಾಗರಿಕರ ಬೇಡಿಕೆ ಮನ್ನಿಸಿ ಸರ್ಕಾರ ಅಕ್ರಮ ನಿವೇಶನಗಳನ್ನು ಸಕ್ರಮಗೊಳಿಸಲು ತೀರ್ಮಾನ ಕೈಗೊಂಡಿತ್ತು. ಇದರ ವಿರುದ್ಧ ಕೆಲವರು ಸುಪ್ರೀಂ ಕೋರ್ಟ್ ಮೊರೆ ಹೋಗಿರುವುದರಿಂದ ಅಕ್ರಮ ನಿವೇಶನ ಸಕ್ರಮ ಮಾಡುವ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.
**
ಅಕ್ರಮ ನಿವೇಶನಗಳನ್ನು ಸಕ್ರಮಗೊಳಿಸುವ ಸರ್ಕಾರದ ತೀರ್ಮಾನದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಜ್ಯ ಇರುವುದರಿಂದ ಹಳೆಯ ನಿವೇಶನಗಳನ್ನು ಖರೀದಿಸಿದ ನಾಗರಿಕರಿಗೆ ತೊಂದರೆಯಾಗುತ್ತಿದೆ. ವ್ಯಾಜ್ಯ ಇತ್ಯಾರ್ಥವಾಗುವ ತನಕ ಕಾಯಬೇಕಾಗಿದೆ.
-ಮಲ್ಲಿಕಾರ್ಜುನ ಪಾಟಿಲ್, ಅಧ್ಯಕ್ಷರು, ನಗರಸಭೆ
*
ನಗರಗಳು ಸುಂದರವಾಗಿರಬೇಕಾದರೆ ನಗರಯೋಜನಾ ಪ್ರಾಧಿಕಾರದ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೆ ತರಬೇಕು. ಇದಕ್ಕೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಇಚ್ಚಾಶಕ್ತಿ ಮತ್ತು ಪ್ರಾಮಾಣಿಕತೆ ಅವಶ್ಯ.
-ಅಮರೇಗೌಡ ವಿರೂಪಾಪುರ ಅಧ್ಯಕ್ಷರು ನಗರಯೋಜನಾ ಪ್ರಾಧಿಕಾರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.