ಸೋಮವಾರ, ಆಗಸ್ಟ್ 15, 2022
28 °C
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ನಾರಾಯಣಸ್ವಾಮಿ ಸೂಚನೆ

ಮಹಿಳೆ, ಶಿಶು ಆರೋಗ್ಯಕ್ಕೆ ಆದ್ಯತೆ ಕೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಶಿಶುಗಳಿಗೆ ಆದ್ಯತೆ ಕೊಟ್ಟು, ಅವರ ಆರೋಗ್ಯ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಮಹತ್ವಾಕಾಂಕ್ಷಿ ಜಿಲ್ಲೆ ಮತ್ತು ಕೇಂದ್ರ ಯೋಜನೆಗಳ ಪ್ರಗತಿ ಪರಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಶೇ 4 ರಷ್ಟು ಗರ್ಭಿಣಿಯರಲ್ಲಿ ಗಂಭೀರ ಅನಿಮಿಯಾ ಸಮಸ್ಯೆ ಇದೆ ಎನ್ನುವುದು ವರದಿಯಲ್ಲಿದೆ. ಗರ್ಭಿಣಿಯರ ನೋಂದಣಿ ಪ್ರತಿಶತ ಆಗಿದೆ ಎನ್ನುವುದಾದರೆ, ಗರ್ಭಿಣಿಯರ ಹಿಮೋಗ್ಲೊಬಿನ್‌ ತಪಾಸಣೆ ಮಾಡುತ್ತಿಲ್ಲವೆ? ಶೇ 4 ರಷ್ಟು ಗರ್ಭಿಣಿಯರಲ್ಲಿ ಈ ಸಮಸ್ಯೆ ಉಳಿಯುವುದಕ್ಕೆ ಕಾರಣ ಏನೆಂಬುದು ತಳಮಟ್ಟಕ್ಕೆ ಹೋಗಿ ಪತ್ತೆ ಮಾಡಬೇಕು. ಸಮಸ್ಯೆ ನಿವಾರಣೆಗೆ ಏನಾಗಬೇಕು ಎಂಬುದನ್ನು ಸರ್ಕಾರದಿಂದ ಕೇಳಬೇಕು. ಅಧಿಕಾರಿಗಳು ಸರ್ಕಾರದ ಯೋಜನೆ ಸಮರ್ಥನೆ ಮಾಡುವ ರೀತಿ ಉತ್ತರಿಸಬಾರದು. ಪರಿಹಾರ ಕಲ್ಪಿಸುವುದಕ್ಕೆ ಏನು ಆಗಬೇಕಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ತಿಳಿಸಿದರು.

ಈ ವಿಷಯದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಸಮನ್ವಯತೆಯಿಂದ ಕೆಲಸ ಮಾಡಬೇಕು. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯಾಧಿಕಾರಿ ಗಮನಹರಿಸಬೇಕು. ಮೂಲ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಉದ್ದೇಶಕ್ಕಾಗಿ  ಮಹತ್ವಾಕಾಂಕ್ಷಿ ಜಿಲ್ಲೆ ಎಂದು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ ಎಂದರು.

ಅವಧಿಪೂರ್ವ ಹೆರಿಗೆ ಮತ್ತು ಜನಿಸಿದ ಶಿಶು ತೂಕ ಕಡಿಮೆ ಇರುವ ಕಡೆಗಳಲ್ಲಿ ಹೆಚ್ಚು ಪ್ರಾಶಸ್ತ್ಯ ಮಾಡಬೇಕು. ಇದಕ್ಕೆ ಮೂಲ ಕಾರಣ ಪತ್ತೆ ಮಾಡಬೇಕು. ಈ ಸಂಬಂಧ ವರದಿಯೊಂದನ್ನು ಸಿದ್ಧಪಡಿಸಬೇಕು.‌ ಗುಳೆ ಹೋಗುವವರಲ್ಲಿ ಕಡಿಮೆ ತೂಕದ ಶಿಶುಜನನ ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ಅಧ್ಯಯನ ಮಾಡಬೇಕು.ಐವಿ ಐರನ್ ಸುಕ್ರೋಸ್‌‌ ಇಂಜೆಕ್ಷನ್ ಖರೀದಿಗೆ ಅನುದಾನ ಸಾಲುತ್ತಿಲ್ಲ ಎಂದಾದರೆ ಈ ಬಗ್ಗೆ ಕ್ರಿಯಾಯೋಜನೆ ಮಾಡಿ ಎಂದು ತಿಳಿಸಿದರು.

ಬಾಲ್ಯವಿವಾಹ ಯಾವ ಜಾತಿಯವರಲ್ಲಿ ಹೆಚ್ಚಾಗಿದೆ ಪತ್ತೆಮಾಡಿ. ಈ ಬಗ್ಗೆ ಜನಜಾಗೃತಿ ವ್ಯಾಪಕವಾಗಿ ಮಾಡಬೇಕು.ಸಿಎಸ್ ಆರ್ ನೆರವಿನಲ್ಲಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಾಣ‌ ಮಾಡಬೇಕು. ಜಿಲ್ಲೆಯ ಪ್ರತಿ ಬ್ಯಾಂಕ್ ಶಾಖೆಯು ಕನಿಷ್ಠ ಇಬ್ಬರಿಗೆ ಸ್ಟ್ಯಾಂಡಪ್ ಇಂಡಿಯಾ ಯೋಜನೆಯಡಿ ಸಾಲ ಕೊಡಬೇಕು ಎನ್ನುವ ನಿಯಮವಿದೆ. ಜಿಲ್ಲಾಧಿಕಾರಿ ಈ ಬಗ್ಗೆ ಪರಿಶೀಲಿಸಬೇಕು ಎಂದು ಹೇಳಿದರು. 

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಗರ್ಭಿಣಿಯರದ್ದು ಪ್ರತಿಶತ ನೋಂದಣಿ ಆಗುತ್ತಿದೆ. ಆದರೆ ಅನಿಮಿಯಾ ತಪಾಸಣೆ ಏಕೆ ಪ್ರತಿಶತ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಮಳೆ ಕೊರತೆಯಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಕೊಟ್ಟು ಮೋಡ ಬಿತ್ತನೆಗೆ ಬೇಡಿಕೆ ಸಲ್ಲಿಸಬೇಕು. ಯಾವುದೇ ಗೊಬ್ಬರವನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ರೈತರಿಗೆ ಒತ್ತಾಯ ಮಾಡಬೇಡಿ ಎಂದು ಕೃಷಿ ಇಲಾಖೆ ಅಧಿಕಾರಿಗೆ ತಿಳಿಸಿದರು.

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಗರ್ಭಿಣಿಯರು ಮತ್ತು ಕಡಿಮೆ ತೂಕದ ಮಕ್ಕಳ ಸಮಸ್ಯೆ ಪರಿಹಾರಕ್ಕೆ ಜಿಲ್ಲೆಯಲ್ಲಿ ಯುದ್ದೋಪಾದಿಯಲ್ಲಿ ಕೆಲಸ‌ ಮುಂದಿನ ದಿನಗಳಲ್ಲಾದರೂ ಆರಂಭಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುರೇಂದ್ರಬಾಬು, ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್‌. ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ್‌ ನಾಯಕ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ., ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕೆ.ಆರ್‌.ದುರುಗೇಶ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು