ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ಮೂಲಕ ಸಿಜಿಕೆ ಚಳವಳಿ: ಸಾಹಿತಿ ವೀರಹನುಮಾನ

ರಾಯಚೂರಿನ ಸಾಧಕರಿಗೆ ಸಿಜಿಕೆ ರಂಗ ಪುರಸ್ಕಾರ
Last Updated 25 ಫೆಬ್ರುವರಿ 2023, 15:33 IST
ಅಕ್ಷರ ಗಾತ್ರ

ರಾಯಚೂರು: ಪ್ರೊ.ಸಿ.ಜಿ.ಕೃಷ್ಣಮೂರ್ತಿ (ಸಿಜಿಕೆ) ಅವರು ರಂಗಭೂಮಿ ಮೂಲಕ ಚಳವಳಿ ಮಾಡಿದ್ದು, ಇವರೊಂದಿಗೆ ರಂಗಕರ್ಮಿ ಪ್ರಸನ್ನ ಜೊತೆಯಾಗಿದ್ದರು. ಇಬ್ಬರು ರಂಗಭೂಮಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಹಿರಿಯ ಸಾಹಿತಿ ವೀರಹನುಮಾನ ಹೇಳಿದರು.

ನಗರದ ಕನ್ನಡ ಭವನದಲ್ಲಿ ಕರ್ನಾಟಕ ಬೀದಿ ನಾಟಕ ಅಕಾಡೆಮಿ ಹಾಗೂ ರಂಗಸಿರಿ ಸಾಂಸ್ಕೃತಿಕ ಕಲಾ ಬಳಗದಿಂದ ಶನಿವಾರ ಏರ್ಪಡಿಸಿದ್ದ ರಂಗಭೂಮಿ ಸಾಧಕರಿಗೆ ಸಿಜಿಕೆ ರಂಗ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

1974 ರಲ್ಲಿ ನಾಟಕವೊಂದನ್ನು ನೋಡಿ ಪ್ರಭಾವಿತರಾಗಿದ್ದ ಸಿಜಿಕೆ ಅವರು ರಂಗ ಸಮದಾಯ ಕಟ್ಟಿದರು. ಆ ಮೂಲಕ ಸಮಾಜದಲ್ಲಿ ಸಾಕಷ್ಟು ಪರಿವರ್ತನೆಗಳನ್ನು ತರುವ ಪ್ರಯತ್ನ ಮಾಡಿದರು. ಇದರಿಂದ ರಂಗಭೂಮಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ ಎಂದು ಸ್ಮರಿಸಿದರು.

ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದ ಅವಧಿಯಲ್ಲಿ ಸಿಜಿಕೆ, ಪ್ರಸನ್ನ ಹಾಗೂ ಲಂಕೇಶ ಸೇರಿದಂತೆ ಅನೇಕ ಮಹನೀಯರು ಅವರವರ ಕ್ಷೇತ್ರದಲ್ಲಿ ಅಮೋಘವಾದ ಕೊಡುಗೆ ನೀಡಿದ್ದು, ಇತಿಹಾಸದಲ್ಲಿ ಇದು ಬಹುದೊಡ್ಡ ಅವಧಿಯಾಗಿ ಪರಿಗಣಿಸಲಾಗಿದೆ. ಸಮಾಜವನ್ನು ಜಾಗೃತಿಗೊಳಿಸಲು ಸಿಜಿಕೆ ನಾಟಕಗಳನ್ನು ರೂಪಿಸಿದ್ದರು ಎಂದರು.

ಬಿಹಾರದಲ್ಲಿ ದಲಿತರ ಮೇಲಿನ ದಬ್ಬಾಳಿಕೆಯನ್ನು ಬಿಂಬಿಸುವ ‘ಬೆಂಚಿ’ ಹೆಸರಿನ ಪ್ರಥಮ ನಾಟಕವೊಂದನ್ನು ಸಿಜಿಕೆ ಬರೆದಿದ್ದರು. ರಾಯಚೂರಿನಲ್ಲಿಯೂ ಈ ನಾಟಕದ ಪ್ರದರ್ಶನಗಳನ್ನು ಮಾಡಿದ್ದರು. ಈ ನಾಟಕವನ್ನು ನೋಡಿದ ಜನರು ನಿಜಕ್ಕೂ ಅಚ್ಚರಿ ವ್ಯಕ್ತಪಡಿಸಿದರು. ನಾಟಕದ ಮೂಲಕ ಇಡೀ ದೇಶ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದರು ಎಂದು ತಿಳಿಸಿದರು.

ಕೆಪಿಸಿಸಿ ಮಾಧ್ಯಮ ವಕ್ತಾರ ಡಾ.ರಝಾಕ್‌ ಉಸ್ತಾದ್‌ ಮಾತನಾಡಿ, ರಾಯಚೂರಿನಲ್ಲಿಯೂ ರಂಗಭೂಮಿ ಕಲಾವಿದರು ಸಾಕಷ್ಟು ಸಂಖ್ಯೆಯಲ್ಲಿದ್ದು, ಅವರನ್ನು ಪ್ರೋತ್ಸಾಹಿಸಿ ಬೆಳೆಸುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ರಂಗಭೂಮಿ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಹಿನ್ನೆಲೆ ಗಾಯಕ ಸಿದ್ದಯ್ಯಸ್ವಾಮಿ ಹಿರೇಮಠ, ಹಿರಿಯ ಕಲಾವಿದ ಬಿ.ರಾಜಗೋಪಾಲ, ಜಾನಪದ ಕಲಾವಿದ ಡಿಂಗ್ರಿ ನರಸಪ್ಪ ಹಾಗೂ ವೆಂಕಟ ನರಸಿಂಹಲು ಅವರಿಗೆ ಸಿಜಿಕೆ ರಂಗಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಂಗಸಿರಿ ಸಾಂಸ್ಕೃತಿಕ ಕಲಾ ಬಳಗದ ಅಧ್ಯಕ್ಷ ರಂಗಸ್ವಾಮಿ, ಥಿಯೇಟರ್‌ ಸಂಘದ ಅಧ್ಯಕ್ಷ ಸುರೇಶ, ಹಿರಿಯ ರಂಗಭೂಮಿ ಕಲಾವಿದ ವಿ.ಎನ್‌.ಅಕ್ಕಿ, ರಂಗ ನಿರ್ದೇಶಕ ಲಕ್ಷ್ಮಣ ಮಂಡಲಗೇರಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT