ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೇಗುಡ್ಡದಲ್ಲಿ ಸಿಎಂ ನಾಲ್ಕು ತಾಸು ನಿದ್ರೆ

ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆ, ವಿದ್ಯಾರ್ಥಿಗಳೊಂದಿಗೆ ಊಟ
Last Updated 27 ಜೂನ್ 2019, 19:30 IST
ಅಕ್ಷರ ಗಾತ್ರ

ರಾಯಚೂರು: ಜೂನ್‌ 26 ರಂದು ಬೆಳಿಗ್ಗೆ 6 ಗಂಟೆಗೆ ರಾಯಚೂರು ರೈಲು ನಿಲ್ದಾಣದಿಂದ ಗ್ರಾಮವಾಸ್ತವ್ಯ ಕಾರ್ಯಕ್ರಮದ ದಿನಚರಿ ಆರಂಭಿಸಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಎಡಬಿಡದೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾನ್ವಿ ತಾಲ್ಲೂಕಿನ ಕರೇಗುಡ್ಡದಲ್ಲಿ ರಾತ್ರಿ ನಿದ್ರಿಸಿದ್ದು ನಾಲ್ಕು ತಾಸು ಮಾತ್ರ!

ಜನತಾ ದರ್ಶನ ಮುಗಿಸಿಕೊಂಡು, ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದ ನಂತರ ಕರೇಗುಡ್ಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿ ಊಟ ಮುಗಿಸಿದಾಗ ಸಮಯ ರಾತ್ರಿ 11.55 ಆಗಿತ್ತು. ಗ್ರಾಮವಾಸ್ತವ್ಯ ವ್ಯವಸ್ಥೆ ಮಾಡಲಾಗಿದ್ದ ಶಾಲೆಯ ಸ್ಮಾರ್ಟ್‌ಕ್ಲಾಸ್‌ ಕೋಣೆಗೆ ಹೋಗಿ, ಜೊತೆಗಿದ್ದ ಸಚಿವರೊಂದಿಗೆ ಸಿಎಂ ಮಾತನಾಡಿ ನಿದ್ರೆಗೆ ಜಾರಿದಾಗ ಮಧ್ಯರಾತ್ರಿ 12.30 ರ ವೇಳೆಯಾಗಿತ್ತು.

ರಾತ್ರಿಯೂ ಶಾಲೆಯ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಾಡು ಮಾಡಲಾಗಿತ್ತು. ಬಳ್ಳಾರಿ ವಲಯದ ಐಜಿಪಿ ನಂಜಂಡಸ್ವಾಮಿ, ಮೂವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಸೇರಿದಂತೆ ಪೊಲೀಸ್‌ ಅಧಿಕಾರಿಗಳು ಸಾಕಷ್ಟು ಸಂಖ್ಯೆಯಲ್ಲಿ ಭದ್ರತೆ ನಿರ್ವಹಣೆ ಮಾಡಿದರು. ಶಾಲಾ ಆವರಣಕ್ಕೆ ಜನಸಾಮಾನ್ಯರು ಬರುವುದಕ್ಕೆ ಅವಕಾಶ ಇರಲಿಲ್ಲ.

ಗ್ರಾಮದಲ್ಲಿ ಮಧ್ಯರಾತ್ರಿ ಮೌನ ಆವರಿಸಿದ್ದರೂ ಯಾವುದೋ ಮೂಲೆಯಿಂದ ಬೆಳಿಗ್ಗೆ ಹಾಕಬೇಕಿದ್ದ ಸುಪ್ರಭಾತ ಹಾಡೊಂದು ಟೇಪ್‌ ರಿಕಾರ್ಡರ್‌ ಮೂಲಕ ಕೇಳಿ ಬರುತ್ತಿತ್ತು. ಮುಖ್ಯಮಂತ್ರಿಗೆ ವಾಸ್ತವ್ಯ, ಅಧಿಕಾರಿಗಳಿಗೆ ಜಾಗರಣೆ ಎನ್ನುವಂತಿತ್ತು ಆ ಹಾಡು. ಇದನ್ನು ಕೇಳಿಸಿಕೊಳ್ಳುತ್ತಿದ್ದ ಕೆಲವು ಅಧಿಕಾರಿಗಳು ನಿದ್ದೆಗಣ್ಣಿನಲ್ಲಿಯೇ ನಗುತ್ತಿರುವುದು ಕಂಡಿತು!

ಶಾಲೆಯ ಆವರಣ, ಸುತ್ತಮುತ್ತಲೂ ಬೆರಳೆಣಿಕೆಯಷ್ಟು ಪೊಲೀಸರು ಮತ್ತು ಅಧಿಕಾರಿಗಳು ಗ್ರಾಮವಾಸ್ತವ್ಯದ ನಿರ್ವಹಣೆಗಾಗಿ ಅತ್ತಿತ್ತ ಓಡಾಡಿಕೊಂಡಿದ್ದರು. ಸಿಎಂ ಕಚೇರಿಯ ಮಾಧ್ಯಮದವರಿಗೂ ಹಾಸಿಗೆ ವ್ಯವಸ್ಥೆ ಇರಲಿಲ್ಲ. ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಎಲ್ಲರೂ ಕಾರುಗಳಲ್ಲೆ ಕುಳಿತು ನಿದ್ರೆಗೆ ಜಾರಿದ್ದರು. ಬೆಳಿಗ್ಗೆ 5 ಗಂಟೆಗೆ ಬೀದರ್ ಜಿಲ್ಲೆಯ ಬಸವಕಲ್ಯಾಣಕ್ಕೆ ಸಿಎಂ ಪ್ರಯಾಣಿಸುವುದು ನಿಗದಿಯಾಗಿತ್ತು. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ನಿದ್ರೆ ಮಾಡುವುದಕ್ಕೆ ಸಾಧ್ಯವಾಗಲಿಲ್ಲ.

ನಾಲ್ಕು ತಾಸು ನಿದ್ರಿಸಿದ ಮುಖ್ಯಮಂತ್ರಿ ನಸುಕಿನ 4.30 ಕ್ಕೆ ಸರಿಯಾಗಿ ಹಾಸಿಗೆಯಿಂದ ಎದ್ದು, ನಿತ್ಯಕ್ರಿಯೆ ಮತ್ತು ಸ್ನಾನ ಮುಗಿಸಿಕೊಂಡರು. ಕಾಫಿ ಸೇವಿಸಿ ಸರಿಯಾಗಿ 5 ಗಂಟೆಗೆ ಕರೇಗುಡ್ಡದಿಂದ ಬೀದರ್‌ ಜಿಲ್ಲೆ ಬಸವಕಲ್ಯಾಣದತ್ತ ತೆರಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT