ಗುರುವಾರ , ಮಾರ್ಚ್ 23, 2023
23 °C
ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ಮಾಹಿತಿ ಕಾರ್ಯಾಗಾರ

ಪರಿಶ್ರಮ ವಹಿಸಿದರೆ ಶಿಕ್ಷಣದಲ್ಲಿ ಸಾಧನೆ: ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಮಹತ್ವಾಕಾಂಕ್ಷೆ ಜಿಲ್ಲೆ ಘೋಷಣೆ ಆಗಿರುವುದರಿಂದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ. ಇಲ್ಲಿರುವ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನದ ಅಗತ್ಯವಿದೆ. ಪರಿಶ್ರಮದ ಹಾದಿಯಲ್ಲಿ ಸಾಗಿದಾಗ ಮಾತ್ರ ವಿದ್ಯಾರ್ಥಿಗಳು ಯಶಸ್ಸು ಕಾಣಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸೆಂಟರ್ ಫಾರ್ ಎಂಪ್ಲಾಯಿಮೆಂಟ್, ಅಪರ್ಚುನಿಟೀಸ್ & ಲರ‍್ನಿಂಗ್(ಸಿ.ಇಒಎಲ್)ನಿಂದ ಸೋಮವಾರದಿಂದ ಹಮ್ಮಿಕೊಂಡಿರುವ ಎರಡು ದಿನಗಳ ‘ವೃತ್ತಿ ಮಾರ್ಗದರ್ಶನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ಮಾಹಿತಿ ಕಾರ್ಯಗಾರ’ ಸಸಿಗೆ ನೀರು ಹಾಕಿ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಆತ್ಮಬಲ ಅತ್ಯಂತ ಪ್ರಮುಖವಾಗಿದ್ದು, ಈ ಆತ್ಮಬಲ ಮೂಡಿಸುವ ತಂತ್ರ ಈಗಿನ ಶಿಕ್ಷಣ ಪದ್ದತಿಗಳಲ್ಲಿ ಬಹಳ ಕಡಿಮೆಯಾಗಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಸೋಲಿನ ಭಯವನ್ನು ದೂರ ಮಾಡಿಕೊಳ್ಳಬೇಕು ಎಂದರು.

ಉತ್ತಮ ಆಲೋಚನೆಗಳನ್ನು ಮೈಗೂಡಿಸಿಕೊಂಡು ಒಳ್ಳೆಯ ಗುರಿ ಇರಿಸಿ ಮುಂದೆ ಸಾಗಿದರೆ ಯಶಸ್ಸು ಕಾಣಬಹುದು. ವಿದ್ಯಾರ್ಥಿಗಳಲ್ಲಿ ವಿಶೇಷ ಸ್ಫೂರ್ತಿ, ಕಾಳಜಿ ಇರಬೇಕು. ಪರಿಶ್ರಮದಿಂದ ಮಾತ್ರ ಜೀವನದ ಗುರಿ ಮುಟ್ಟಲು ಸಾಧ್ಯ ಎಂದು ತಿಳಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಬೌದ್ಧಿಕ ವಿಕಾಸ ಜೊತೆಗೆ ನಿರಂತರ ಪ್ರಯತ್ನವನ್ನು ವಿದ್ಯಾರ್ಥಿಗಳು ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಅಡಚಣೆಗಳನ್ನು ಎದುರಿಸಿ ಮುಂದೆ ಸಾಗಬೇಕು ಆಗ ಮಾತ್ರ ಸ್ಪರ್ಧಾತ್ಮಕ ಯಶಸ್ಸು ಕಾಣಲು ಸಾಧ್ಯ. ವಿದ್ಯಾರ್ಥಿಗಳ ಸಾಮರ್ಥ್ಯ ಮೇಲೆ ಅವರ ಭವಿಷ್ಯ ಅಡಗಿದೆ. ಮಾನಸಿಕ ಸಾಮರ್ಥ್ಯ ಹಾಗೂ ಜ್ಞಾನದ ಕುರಿತ ಆಸಕ್ತಿಯನ್ನು ವಿದ್ಯಾರ್ಥಿಗಳು ಅರಿತುಕೊಂಡು ಪರೀಕ್ಷೆ ಪೂರ್ವ ತಯಾರಿ ನಡಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮಾತನಾಡಿ, ಜೀವನದಲ್ಲಿ ಯಶಸ್ಸು ಕಾಣಲು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ನಕಾರಾತ್ಮಕ ಯೋಚನೆಗಳಿಂದ ದೂರವಿರಬೇಕು. ಯಶಸ್ಸು ಕಡೆ ಹೆಚ್ಚಿನ ಮಹತ್ವ ನೀಡಬೇಕು ಎಂದರು. 

ಐ.ಎ.ಎಸ್. ಪ್ರೊಬೇಷನರಿ ಅಧಿಕಾರಿ ಅಪರ್ಣಾ ರಮೇಶ, ಉಪವಿಭಾಗಾಧಿಕಾರಿ ರಜನಿಕಾಂತ್ ಚೌವಾಣ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಶಿಕಾಂತ್ ಶಿವಪೂರೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ, ಕೌಶಲಾಭಿವೃದ್ಧಿ ಅಧಿಕಾರಿ ಮೆಹಬೂಬ್ ಜಿಲಾನಿ, ಪ.ಪಂಗಳ ಕಲ್ಯಾಣಾಧಿಕಾರಿ ರಾಜೇಂದ್ರ ಜಲ್ದಾರ್, ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಮಹ್ಮದ್ ಯೂಸೂಫ್ ಅಲಿ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು