ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು | ಇ-ಸ್ವತ್ತುವಿಗೆ ತೊಡಕು: ಬಗೆಹರಿಯದ ಸಮಸ್ಯೆ

ತಾಲ್ಲೂಕು ಕೇಂದ್ರಗಳ ಖಾಸಗಿ ಡಿಟಿಪಿ ಕೇಂದ್ರಗಳಲ್ಲಿ ಕಾರ್ಯನಿರ್ವಹಣೆ
Published : 27 ಆಗಸ್ಟ್ 2024, 5:10 IST
Last Updated : 27 ಆಗಸ್ಟ್ 2024, 5:10 IST
ಫಾಲೋ ಮಾಡಿ
Comments

ರಾಯಚೂರು: ಗ್ರಾಮ ಪಂಚಾಯಿತಿ ಮಟ್ಟದಲ್ಲಿ “ಇ-ಸ್ವತ್ತು’ ಹೊಸ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಿದರೂ ಹಳೆಯ ಸಮಸ್ಯೆ ಮುಂದುವರಿದಿದೆ. ಜಿಲ್ಲೆಯಲ್ಲಿ 9/11 ಅರ್ಜಿ ಸಲ್ಲಿಕೆ ಬಹುತೇಕ ಪಂಚಾಯಿತಿಗಳಲ್ಲಿ ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಇಂಟರ್‌ನೆಟ್‌ ಸಮಸ್ಯೆಯೂ ಇರುವ ಕಾರಣ ಇ-ಸ್ವತ್ತುವಿಗೆ ಮತ್ತಷ್ಟು ತೊಡಕಾಗಿದೆ.

ಇ -ಸ್ವತ್ತು 4.8 ತಂತ್ರಾಂಶ ನಿಧಾನವಾಗಿ ಕಾರ್ಯನಿರ್ವಹಿಸುತ್ತಿದೆ ಅಲ್ಲದೇ ಕಾರ್ಯನಿರ್ವಹಿಸವಾಗುವಾಗಲೇ ತಂತ್ರಾಂಶ ಲಾಗ್‌ ಔಟ್‌ ಆಗುತ್ತಿದೆ. ಸರ್ವರ್‌ ‘ಎರರ್‌’ ಸಮಸ್ಯೆ ಹಾಗೂ ನಮೂನೆ 9/11 ಹಾಗೂ 11ಬಿ ದಾಖಲಾತಿ ಇ-ಸ್ವತ್ತು ತಂತ್ರಾಂಶದಲ್ಲಿ “ಸೇವ್‌’ ಮಾಡಿಪ್ರಿಂಟ್‌ ತೆ ಗೆಯುವ ವೇಳೆ ‘ಎರರ್‌ ಬರುತ್ತಿದೆ. ಇದು ಸಾರ್ವಜನಿಕರಿಗೆ ಅಷ್ಟೇ ಅಲ್ಲ ಪಿಡಿಒಗಳಿಗೂ ತಲೆನೋವಾಗಿದೆ.

ಪಂಚಾಯಿತಿಗಳ ಪಿಡಿಒಗಳು ತಾಲ್ಲೂಕು ಕೇಂದ್ರಕ್ಕೆ ಬಂದು ಭರ್ತಿ ಮಾಡಬೇಕಾದ ಸ್ಥಿತಿ ಇದೆ. ಬಹುತೇಕ ಪಿಡಿಒಗಳು ಖಾಸಗಿ ಡಿಟಿಪಿ ಕೇಂದ್ರಗಳೊಂದಿಗೆ ಕೈಜೋಡಿಸಿದ್ದಾರೆ. ಡಿಟಿಪಿ ಕೇಂದ್ರಗಳಲ್ಲೇ ಅರ್ಜಿ ಅಪ್‌ಲೋಡ್‌ ಮಾಡಲಾಗುತ್ತಿದೆ. ಅದಕ್ಕೆ ಡಿಟಿಪಿಯವರು ಸೇವಾ ಶುಲ್ಕವಾಗಿ ₹50ರಿಂದ 200 ಪಡೆಯುತ್ತಿದ್ದಾರೆ. ಪಿಡಿಒಗಳು ಡಿಟಿಪಿ ಕೇಂದ್ರಗಳಿಗೆ ಹೋಗಿ ‘ಥಂಬ್‌’ ಕೊಡುತ್ತಿದ್ದಾರೆ.

ಅರ್ಜಿಯನ್ನು ಅಪ್ರೂವ್‌ ಮಾಡಬೇಕಾದರೆ ಪಿಡಿಒ ‘ಥಂಬ್‌’ ಕೊಡಬೇಕು. ಆಗ ಕೆಲವರಿಗೆ “ಎರರ್‌’ ಬರುತ್ತಿದೆ. ತಾಂತ್ರಿಕ ಸಮಸ್ಯೆಯಿಂದ ಗ್ರಾಮಾಂತರ ಭಾಗದಲ್ಲಿ ವಿವಿಧ ಅರ್ಜಿ ಸಲ್ಲಿಕೆಗೆ ತೊಡಕಾಗಿದೆ.

ಆಸ್ತಿ ಮಾರಾಟ, ಖರೀದಿ, ಬ್ಯಾಂಕ್‌ ಲೋನ್‌, ಮನೆ ಸಂಖ್ಯೆ ಪಡೆಯುವುದು, ವಾಸದ ಕಟ್ಟಡ ಸಹಿತ ವಿವಿಧ ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕ ಪಡೆಯುವುದು ಇತ್ಯಾದಿ ಕೆಲಸ ಕುಂಠಿತಗೊಂಡಿದೆ ಎಂದು ಪಂಚಾಯಿತಿ ಸಿಬ್ಬಂದಿಯೇ ಹೇಳುತ್ತಾರೆ.

‘9/11 ಖಾತೆ ಬದಲಾವಣೆಗಳಿಗೆ ಭಾರಿ ಪ್ರಯಾಸಪಡಬೇಕಾಗಿದೆ. ಭೂ ಪರಿವರ್ತನೆಯಾದ ಜಾಗ ಮಾರಾಟ ಮಾಡಲು ಕಷ್ಟವಾಗಿದೆ. ಕೆಲವರಿಗೆ 9/11 ಹಳೆಯ ಪ್ರತಿ ಪಡೆಯಲೂ ಆಗುತ್ತಿಲ್ಲ. ಆಗಾಗ ಲಾಗ್‌ ಔಟ್‌ ಆಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಮೊದಲೇ ನೆಟವರ್ಕ್‌ ಇರುವುದಿಲ್ಲ. ಪಿಡಿಒಗಳ ಮೇಲೆ ಕಾರ್ಯಾಭಾರ ಹೆಚ್ಚಾಗಿದೆ. ಎಲ್ಲವನ್ನೂ ನಿಭಾಯಿಸಲು ಸಮಯ ಸಾಲುತ್ತಿಲ್ಲ. ಸರ್ಕಾರ ಹೆಚ್ಚುವರಿ ಕೆಲಸ ಕೊಟ್ಟರೂ ಸಿಬ್ಬಂದಿ ಕೊಡುತ್ತಿಲ್ಲ‘ ಎಂದು ಹೆಸರು ಹೇಳಲಿಚ್ಚಿಸದ ಪಿಡಿಒ ಹೇಳಿದರು.

ಇ–ಸ್ವತ್ತು ತಂತ್ರಾಂಶವನ್ನು ಮೇಲ್ದರ್ಜೆಗೆ ಏರಿಸಿದ ನಂತರ ಹಲವು ತಾಂತ್ರಿಕ ಸಮಸ್ಯೆ ಎದುರಾಗುತ್ತಿವೆ. ಲಾಗಿನ್ ಆಗಿ ಡೇಟಾ ನಮೂದಿಸಿ ಸೇವ್ ಮಾಡಲು ಹೋದರೆ ಧಿಡೀರ್ ಲಾಗ್ ಔಟ್ ಆಗಿ ಮೊದಲಿನಿಂದ ಮತ್ತೆ ಪುನಃ ಡೇಟಾ ನಮೂದಿಸಬೇಕಾಗುತ್ತದೆ. ಥಂಬ್ ಹಾಕಿ ಲಾಗಿನ್ ಓಪನ್ ಮಾಡುವಾಗಲೂ ಕೂಡ ಸರ್ವರ್ ಡೌನ್ ಆಗಿ ಮರಳಿ ಯತ್ನಿಸಬೇಕಾಗುತ್ತದೆ. ಕೆಲವೊಮ್ಮೆ ಈಗಾಗಲೇ ಸೇವ್ ಆಗಿ ವಿತರಿಸಿದ್ದ ಆಸ್ತಿ ನಮೂನೆ 9 ಮತ್ತು 11 ರಿಪ್ರಿಂಟ್ ತೆಗೆಯಲು ಹೋದರೆ ಕೇವಲ 9 ನಮೂನೆ ಮಾತ್ರ ಬರುತ್ತದೆ. ಜುಲೈ 29ಕ್ಕಿಂತ ಮೊದಲು ವಿತರಿಸಿದ 11 ಬಿ ಆಸ್ತಿ ನಮೂನೆಗಳು ಸಬ್ ರಜಿಸ್ಟರ್ ಕಚೇರಿಯಲ್ಲಿ ನೊಂದಣಿಗೆ ತೊಂದರೆ ಆಗುತ್ತಿದೆ.

‘ನಿವೇಶನ ಅಡವಿಟ್ಟು ಸಾಲ ಪಡೆಯುವ ಕಾರ್ಯಕ್ಕೆ ಫಾರಂ 9 ಫಾರಂ 11ಬಿ ಕೊಡುವಂತೆ ಕೇಳಿದರೆ ಪಿಡಿಒ ಅವರು ಸರ್ವರ್ ಇಲ್ಲ ಎಂದು ಹೇಳುತ್ತಾರೆ. ತಾಂತ್ರಿಕ ಸಮಸ್ಯೆಗಳನ್ನೇ ಹೇಳ ತೊಡಗಿದರೆ ನಮ್ಮ ಸಮಸ್ಯೆಗೆ ಪರಿಹಾರ ದೊರಕುವುದು ಯಾವಾಗ? ಎಂದು ಸಿಂಧನೂರು ತಾಲ್ಲೂಕಿನ ಕಲ್ಲೂರಿನ
ಯಮನಪ್ಪ ಭೋವಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಪಿಡಿಒಗಳು ನಮೂನೆ-9 ಮತ್ತು ನಮೂನೆ-11 ನೀಡುವಾಗ ಇಲ್ಲಿಯವರೆಗೆ ಕೃಷಿ ಜಮೀನಿನಲ್ಲಿ ನಿರ್ಮಿಸಿರುವ ಕಟ್ಟಡಗಳನ್ನು ಯಾವ ರೀತಿ ಪರಿಗಣಿಸಬೇಕೆಂಬ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ. `ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇ ಆದರೆ, ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ಕಟ್ಟಿರುವ ಹೆಚ್ಚಿನ ಕಟ್ಟಡಗಳು ಅಕ್ರಮಗಳ ಪಟ್ಟಿಯಲ್ಲೇ ಬರಲಿವೆ.ಇದರಿಂದ ಇ ಸ್ವತ್ತು ದಾಖಲೆ ಪಡೆಯಲು ಸಾಧ್ಯವಾಗುವುದಿಲ್ಲ‘ ಎಂದು
ಕೃಷಿ ಕೂಲಿ ಕಾರ್ಮಿಕ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಲಿಂಗಣ್ಣ ಮಕಾಶಿ ಹೇಳುತ್ತಾರೆ.

‘ಸುಮಾರು 40ರಿಂದ 50 ವರ್ಷಗಳಿಂದ ಜನರು ವಾಸಿಸುವ ಪ್ರದೇಶ ಕೃಷಿಯೇತರ ಜಮೀನಾಗಿ ಪರಿವರ್ತನೆ ಆಗಿಲ್ಲ. ಪ್ರಸ್ತುತ ಬೇರೊಬ್ಬರ ಮಾಲೀಕರ ಹೆಸರಿನಲ್ಲಿ ಆರ್ ಟಿ ಸಿ ಪಹಣಿಗಳಿವೆ. ಹಲವು ಪ್ರದೇಶಗಳು ಗ್ರಾಮ ಠಾಣ ವ್ಯಾಪ್ತಿಗೆ ಒಳಪಟ್ಟಿಲ್ಲ. ಇವು 11/A,11/B ಮತ್ತು 9A ಪಡೆಯಲು ಸಾಕಷ್ಟು ಸಮಸ್ಯೆಗಳು ತಲೆದೋರುತ್ತಿವೆ. ಜತೆಗೆ 4.8 ಇ - ಸ್ವತ್ತು ತಂತ್ರಾಂಶ ತಾಂತ್ರಿಕ ದೋಷಗಳು ಹೊಂದಿದ್ದು ಸಾರ್ವಜನಿಕರಿಗೆ ಮತ್ತು ಪಿಡಿಒಗಳಿಗೆ ತೊಡಕಾಗುತ್ತಿದೆ’ ಎಂದು ದೇವದುರ್ಗದ ತಾಲ್ಲೂಕು ಪಂಚಾಯಿತಿ ಇಒ ಬಸವರಾಜ್‌ ವಿವರಿಸುತ್ತಾರೆ.

ದೇವದುರ್ಗ ತಾಲ್ಲೂಕಿನ ಕೆಲವೇ ಗ್ರಾ.ಪಂ ಗಳಲ್ಲಿ ಮಾತ್ರ ಇ-ಸ್ವತ್ತು ತೆಗೆದು ಕೊಡುತ್ತಾರೆ. ಉಳಿದಂತೆ ಬಹುತೇಕ ಪಂಚಾಯಿತಿಗಳಲ್ಲಿ ಇಲ್ಲಿಯ ವರೆಗೆ ಫಾರ್ಮ್ ನಂಬರ್ 6 ರಲ್ಲಿ ಕೈ ಬರಹದಲ್ಲಿಯೇ ಮ್ಯುಟೇಷನ್ ಬರೆದು ಕೊಡುತ್ತಾರೆ ಎನ್ನುವ ಆರೋಪ ದೇವದುರ್ಗ ತಾಲ್ಲೂಕಿನ ಹಳ್ಳಿಗಳಲ್ಲಿ ಕೇಳಿ ಬರುತ್ತಿದೆ.

ಇ-ಸ್ವತ್ತು ತಂತ್ರಾಂಶದ ಸಮಸ್ಯೆಯಿಂದಾಗಿ ಒಂದು ತಿಂಗಳಿನಿಂದ ಗ್ರಾಮಸ್ಥರ ಅರ್ಜಿ ಸ್ವೀಕಾರ ವಿಲೇವಾರಿ ಸ್ಥಗಿತಗೊಳಿಸಲಾಗಿದೆ. ತಂತ್ರಾಂಶವನ್ನು ಮೇಲ್ದರ್ಜೆಗೇರಿಸಿದ ನಂತರ ಸಮಸ್ಯೆ ಉದ್ಭವಿಸಿದೆ. ಸಮಸ್ಯೆ ಶೀಘ್ರ ನಿವಾರಿಸುವ ಕುರಿತು ಮೇಲಧಿಕಾರಿಗಳು ಭರವಸೆ ನೀಡಿದ್ದಾರೆ.
-ನಾಗಭೂಷಣ ಕಾಂಬ್ಳೆ ಪಿಡಿಒ ಗ್ರಾಮ ಪಂಚಾಯಿತಿ ಹಿರೇಕೊಟ್ನೆಕಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT