ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾಶೀರ್ವಾದ ಯಾವ ಸಾಧನೆಗೆ

ಸಮಾವೇಶದಲ್ಲಿ ಬಿಜೆಪಿ ಪ್ರಶ್ನಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌
Last Updated 18 ಆಗಸ್ಟ್ 2021, 3:52 IST
ಅಕ್ಷರ ಗಾತ್ರ

ರಾಯಚೂರು: ‘ಕೇಂದ್ರದಲ್ಲಿ ಸಚಿವರಾಗಿದ್ದು ನಿಜ. ಆದರೆ ಯಾವ ಸಾಧನೆಗಾಗಿ ಜನಾಶೀರ್ವಾದ ಯಾತ್ರೆ ಮಾಡುತ್ತಿದ್ದಾರೆ ಎಂಬುದನ್ನು ತಿಳಿಸಬೇಕು. ಏನು ಸಾಧನೆ ಮಾಡಿದ್ದಾರೆ ಎನ್ನುವ ಪ್ರಶ್ನೆಯನ್ನು ನಮ್ಮ ಕಾರ್ಯಕರ್ತರು ಜನರನ್ನು ಕೇಳಲಿದ್ದಾರೆ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಡಿದರು.

ನಗರದ ಸಂತೋಷ್‌ ಹಬ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್‌ ವಿಭಾಗಮಟ್ಟದ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಕೋವಿಡ್‌ ನಿಯಂತ್ರಿಸುವುದಕ್ಕೆ ಸಾಧ್ಯವಾಗದಿರುವುದಕ್ಕೆ ಲಕ್ಷಾಂತರ ಜನರು ಮೃತಪಟ್ಟಿದ್ದು, ಆಮ್ಲಜನಕ ಪಡೆಯುವುದಕ್ಕೆ ಸರದಿ ನಿಂತಿದ್ದು ಹಾಗೂ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಘೋಷಿಸಿದ್ದ ಪ್ಯಾಕೇಜ್‌ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಇಂತಹ ಸಾಧನೆಗಳ ಬಗ್ಗೆ ಜನರಿಗೆ ಕಾಂಗ್ರೆಸ್‌ ಕಾರ್ಯಕರ್ತರು ತಿಳಿಸಲಿದ್ದಾರೆ’ ಎಂದರು.

‘ಜನರಿಂದ ಸತ್ಯ ಮರೆಮಾಚಲು ಸಾಧ್ಯವಿಲ್ಲ. ಕೋವಿಡ್‌ನಿಂದ ಮೃತಪಟ್ಟವರ ಮನೆಗೆ ಇದುವರೆಗೂ ಬಿಜೆಪಿಯವರು ಭೇಟಿ ನೀಡಿಲ್ಲ’ ಎಂದು ತಿಳಿಸಿದರು.

ಅಮೃತ ಮಹೋತ್ಸವ: ಮೈಸೂರು, ಹುಬ್ಬಳ್ಳಿಯಲ್ಲಿ ವಿಭಾಗೀಯ ಸಮಾವೇಶ ಮುಗಿಸಿ, ಈಗ ಕಲಬುರ್ಗಿ ವಿಭಾಗದ ಸಮಾವೇಶ ಮಾಡಲಾಗಿದೆ. 75ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಎಲ್ಲ ವರ್ಗದವರನ್ನು ಒಳಗೊಂಡಂತೆ ವರ್ಷವಿಡೀ ಅಮೃತ ಮಹೋತ್ಸವ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲ ಕುಟುಂಬಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಭೇಟಿ ಮಾಡಲಿದ್ದಾರೆ. ಅ. 2 ರಂದು ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದ ಸಭೆ ಮಾಡಲಿದ್ದಾರೆ ಎಂದು ಹೇಳಿದರು.

ಡಿಸೆಂಬರ್‌ನಲ್ಲಿ ಕಾಂಗ್ರೆಸ್‌ ಸಂಸ್ಥಾಪನಾ ದಿನದ ನಿಮಿತ್ತ ವಿಶೇಷ ಕಾರ್ಯಕ್ರಮಗಳಿವೆ. ನವೆಂಬರ್‌ನಲ್ಲಿ ಜವಾಹರಲಾಲ್‌ ನೆಹರು ಅವರ ಜನ್ಮದಿನ ಇರುವುದರಿಂದ ವಿದ್ಯಾರ್ಥಿಗಳಿಗಾಗಿ ಮತ್ತು ಯುವಜನರಿಗಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಪ್ರತಿ ಜಿಲ್ಲೆಯ ಕಾರ್ಯಕರ್ತರ ಪಡೆಗೆ ಸಂಘಟನೆ ಮತ್ತು ಹೋರಾಟದ ಗುರಿ ನೀಡಲಾಗಿದೆ. ಪಕ್ಷವನ್ನು ಸಮಗ್ರವಾಗಿ ಪುನರ್‌ ರಚನೆ ಮಾಡುವ ಕೆಲಸ ಮಾಡಲಾಗುತ್ತಿದೆ. ಕಾಂಗ್ರೆಸ್‌ನಲ್ಲಿ ಯಾವುದೇ ಮನಸ್ತಾಪಗಳಿದ್ದರೂ ಬಗೆಹರಿಸುತ್ತೇವೆ ಎಂದು ತಿಳಿಸಿದರು.

ಪಕ್ಷದ ರಾಜ್ಯ ಉಸ್ತುವಾರಿ ರಣದೀಪಸಿಂಗ್‌ ಸುರ್ಜೆವಾಲ್‌ ಮಾತನಾಡಿ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂಧನ ದರದ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದಾರೆ. ಅವರಿಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೆರಳು ಬಿದ್ದಿದೆ ಎಂದು ಟೀಕಿಸಿದರು.

ಪ್ರತಿ ಲೀಟರ್‌ ಪೆಟ್ರೊಲ್‌ಗೆ ₹ 23.87 ಹಾಗೂ ಡೀಸೆಲ್‌ಗೆ ₹ 28.37 ಎಕ್ಸೈಜ್‌ ಸುಂಕ ವಿಧಿಸಲಾಗುತ್ತಿದೆ. ಕಳೆದ ಏಳು ವರ್ಷಗಳಲ್ಲಿ ಒಟ್ಟು ₹ 22.31 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಲಾಗಿದೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ, ಜನರಿಗೆ ಹೊರೆಯಾಗದಂತೆ ದರಗಳನ್ನು ನಿಗದಿ ಮಾಡಲಾಗಿತ್ತು ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ನಾಯಕ, ಎಐಸಿಸಿ ಕಾರ್ಯದರ್ಶಿ ಎನ್‌.ಎಸ್‌.ಬೋಸರಾಜ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್‌ ವಿಪಕ್ಷ ನಾಯಕ ಎಸ್‌.ಆರ್‌.ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ, ವಕ್ತಾರ ಎ.ವಸಂತಕುಮಾರ್‌, ಸಲೀಂ ಅಹ್ಮದ್‌, ಶಾಸಕ ಎಚ್‌.ಕೆ.ಪಾಟೀಲ ಮತ್ತಿತರರು ಇದ್ದರು.

ಸಮಾವೇಶದಲ್ಲಿ ಬೀದರ್‌, ಕಲಬುರ್ಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಗಳ ಕಾಂಗ್ರೆಸ್‌ ಶಾಸಕರು, ಜಿಲ್ಲಾ ಅಧ್ಯಕ್ಷರು, ಮಾಜಿ ಶಾಸಕರು, ಸಂಸದರು ಹಾಗೂ ಹಿರಿಯ ಮುಖಂಡರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಬಿಜೆಪಿಯಿಂದ ಅನ್ಯಾಯ: ಸುರ್ಜೇವಾಲಾ

‘ರಾಜ್ಯ ಬಿಜೆಪಿ ಸರ್ಕಾರ ಅಭಿವೃದ್ಧಿ ಮತ್ತು ರಾಜಕೀಯ ಪ್ರಾತಿನಿಧ್ಯ ನೀಡುವ ವಿಷಯದಲ್ಲಿ ಕಲ್ಯಾಣ ಕರ್ನಾಟಕವನ್ನು ಕಡೆಗಣಿಸಿ, ಈ ಭಾಗಕ್ಕೆ ಅನ್ಯಾಯ ಮಾಡಿದೆ’ ಎಂದುಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪಸಿಂಗ್‌ ಸುರ್ಜೇವಾಲಾ ಆರೋಪಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಗೆ ₹ 1,500 ಕೋಟಿ ಅನುದಾನ ಘೋಷಣೆ ಮಾಡಿದರೂ, ಶೇ 30ರಷ್ಟು ಮಾತ್ರ ಅನುದಾನ ಬಿಡುಗಡೆ ಮಾಡಲಾಗಿದೆ’ ಎಂದರು.

‘ರಾಜ್ಯ ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೇವಲ ಮೂರು ಸ್ಥಾನಗಳನ್ನು ನೀಡಿ, ತಾನು ಈ ಭಾಗದ ಅಭಿವೃದ್ಧಿ ವಿರೋಧಿ ಎಂಬುದನ್ನು ಸರ್ಕಾರ ತೋರಿಸಿದೆ. ಕೇಂದ್ರ ಸರ್ಕಾರ ತೊಗರಿ ಮೇಲಿನ ಆಮದು ಸುಂಕವನ್ನು ಸಂಪೂರ್ಣ ಕೈಬಿಟ್ಟಿರುವುದರಿಂದ ತೊಗರಿ ಬೆಳೆಗಾರರಿಗೆ ಅನ್ಯಾಯವಾಗಲಿದೆ’ ಎಂದು ಹೇಳಿದರು.

‘ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿಅವಮಾನಿಸಲಾಗಿದೆ. ಅವರನ್ನು ಏಕೆ ಕೆಳಗಿಳಿಸಲಾಯಿತು ಎಂಬುದಕ್ಕೆ ಬಿಜೆಪಿ ಈ ವರೆಗೂ ಕಾರಣ ನೀಡಿಲ್ಲ’ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ, ‘ಪಕ್ಷದ ಸಂಘಟನೆಗಾಗಿ ಧಾರವಾಡ ವಿಭಾಗ ಮತ್ತು ಮೈಸೂರು ವಿಭಾಗ ಸಮಾವೇಶಗಳ ಬಳಿಕ ಇದೀಗ ಕಲಬುರ್ಗಿ ವಿಭಾಗೀಯ ಸಮಾವೇಶ ನಡೆಸಲಾಗಿದೆ. ರಾಜ್ಯಸಭೆಯ ಹಿರಿಯ ಸದಸ್ಯ ಆಸ್ಕರ್‌ ಫರ್ನಾಂಡಿಸ್‌ ಅವರು ಆಸ್ಪತ್ರೆಯಲ್ಲಿ ಇದ್ದುದರಿಂದ ಮಂಗಳೂರಿನಲ್ಲಿ ನಡೆಯಬೇಕಿದ್ದ ಸಮಾವೇಶ ಮುಂದೂಡಲಾಗಿದೆ. 75ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ವರ್ಷವಿಡೀ ಅಮೃತ ಮಹೋತ್ಸವ ಕಾರ್ಯಕ್ರಮಗಳನ್ನು ಆಚರಿಸುವುದಕ್ಕೆ ಪ್ರತಿ ಕಾರ್ಯಕರ್ತರಿಗೂ ಗುರಿ ನೀಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT