ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿಯಿಂದ ಅನ್ಯಾಯ: ರಣದೀಪಸಿಂಗ್‌

Last Updated 17 ಆಗಸ್ಟ್ 2021, 12:45 IST
ಅಕ್ಷರ ಗಾತ್ರ

ರಾಯಚೂರು: ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಗೆ ₹1,500 ಕೋಟಿ ಅನುದಾನ ಘೋಷಣೆ ಮಾಡಿದರೂ, ಶೇ 30 ರಷ್ಟು ಮಾತ್ರ ಅನುದಾನ ಮಂಜೂರಿ ನೀಡಿ ಈ ಭಾಗದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ’ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪಸಿಂಗ್‌ ಸುರ್ಜೆವಾಲ್ ಹೇಳಿದರು.

ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ವಿಭಾಗಮಟ್ಟದ ಕಾಂಗ್ರೆಸ್‌ ಸಮಾವೇಶದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ರಾಜ್ಯ ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೇವಲ ಮೂರು ಸ್ಥಾನಗಳನ್ನು ನೀಡಿ, ಈ ಭಾಗದ ಅಭಿವೃದ್ಧಿಗೆ ವಿರೋಧಿ ಎಂಬುದನ್ನು ಸರ್ಕಾರ ತೋರಿಸಿದೆ. ಈ ಭಾಗದಲ್ಲಿ ತೊಗರಿ ಪ್ರಮುಖ ಬೆಳೆಯಾಗಿದೆ. ಆದರೂ ಕೇಂದ್ರ ಸರ್ಕಾರವು ತೊಗರಿ ಆಮದು ಮೇಲಿನ ಸುಂಕ ಸಂಪೂರ್ಣ ಕೈಬಿಟ್ಟಿರುವುದರಿಂದ ತೊಗರಿ ಬೆಳೆಗಾರರಿಗೆ ಅನ್ಯಾಯವಾಗಲಿದೆ’ ಎಂದರು.

‘ರಾಜ್ಯ ಸರ್ಕಾರವು ಜನರಿಂದ ಆಯ್ಕೆಯಾಗಿಲ್ಲ. ಶಾಸಕರನ್ನು ಖರೀದಿಸಿ ಆಡಳಿತಕ್ಕೆ ಬಂದಿರುವ ಸರ್ಕಾರ ಇದಾಗಿದೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಅಪಮಾನಿಸಿ ಮುಖ್ಯಮಂತ್ರಿ ಅಧಿಕಾರದಿಂದ ಕೆಳಗಿಳಿಸಲಾಗಿದೆ. ಏಕೆ ಮುಖ್ಯಮಂತ್ರಿಯನ್ನು ಕೈಬಿಡಲಾಯಿತು ಎಂಬುದನ್ನು ಇದುವರೆಗೂ ಬಿಜೆಪಿ ಕಾರಣ ಹೇಳಿಲ್ಲ' ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ, ‘ಪಕ್ಷದ ಸಂಘಟನೆಗಾಗಿ ಧಾರವಾಡ ವಿಭಾಗ ಮತ್ತು ಮೈಸೂರು ವಿಭಾಗ ಸಮಾವೇಶಗಳ ಬಳಿಕ ಇದೀಗ ಕಲಬುರ್ಗಿ ವಿಭಾಗ ಸಮಾವೇಶವೂ ಮುಗಿದಿದೆ. ರಾಜ್ಯಸಭಾ ಹಿರಿಯ ಸದಸ್ಯ ಆಸ್ಕರ್‌ ಫರ್ನಾಂಡಿಸ್‌ ಅವರು ಆಸ್ಪತ್ರೆಯಲ್ಲಿ ಇದ್ದುದರಿಂದ ಮಂಗಳೂರಿನಲ್ಲಿ ನಡೆಯಬೇಕಿದ್ದ ಸಮಾವೇಶ ಮುಂದೂಡಲಾಗಿದೆ. 75ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ವರ್ಷವಿಡೀ ಅಮೃತ ಮಹೋತ್ಸವ ಕಾರ್ಯಕ್ರಮಗಳನ್ನು ಆಚರಿಸುವುದಕ್ಕೆ ಪ್ರತಿ ಕಾರ್ಯಕರ್ತರಿಗೂ ಗುರಿ ನೀಡಲಾಗಿದೆ’ ಎಂದರು.

ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್‌ ವಿಪಕ್ಷ ನಾಯಕ ಎಸ್‌.ಆರ್‌.ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹ್ಮದ್‌, ಶಾಸಕ ಎಚ್‌.ಕೆ.ಪಾಟೀಲ ಇದ್ದರು.

ಕಲಬುರ್ಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಬೀದರ್‌ ಹಾಗೂ ವಿಜಯನಗರ ಜಿಲ್ಲೆಗಳ ಕಾಂಗ್ರೆಸ್‌ ಶಾಸಕರು, ಜಿಲ್ಲಾ ಅಧ್ಯಕ್ಷರು, ಮುಂಚೂಣಿ ಘಟಕದ ಅಧ್ಯಕ್ಷರು ಸಮಾವೇಶದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT