ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘₹ 30 ಕೋಟಿ ವೆಚ್ಚದಲ್ಲಿ ಕೆರೆ ನಿರ್ಮಾಣ: ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆ’

Published 3 ಜುಲೈ 2024, 14:22 IST
Last Updated 3 ಜುಲೈ 2024, 14:22 IST
ಅಕ್ಷರ ಗಾತ್ರ

ಸಿಂಧನೂರು: ‘ತಾಲ್ಲೂಕಿನ ತುರ್ವಿಹಾಳ ಪಟ್ಟಣದ ಬಳಿ ₹30 ಕೋಟಿ ವೆಚ್ಚದಲ್ಲಿ ಎರಡನೇ ಹಂತದ ಕೆರೆ ನಿರ್ಮಾಣಕ್ಕಾಗಿ ಡಿಪಿಆರ್ ತಯಾರಿಸಲಾಗಿದ್ದು, ರಾಜ್ಯ ಸರ್ಕಾರದ ಒಪ್ಪಿಗೆಗಾಗಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಗರಸಭೆ ವಿಶೇಷ ಅನುದಾನ ₹20 ಕೋಟಿ, ನಗರ ಯೋಜನಾ ಪ್ರಾಧಿಕಾರದ ಅನುದಾನ ₹ 6.5 ಕೋಟಿ ಹಾಗೂ ನಗರಸಭೆ ನಿಧಿ ₹3.5 ಕೋಟಿ ಸೇರಿ ₹30 ಕೋಟಿ ವೆಚ್ಚದಲ್ಲಿ ಸಿಂಧನೂರು ನಗರಕ್ಕೆ ಕುಡಿಯುವ ನೀರು ಪೂರೈಕೆಗಾಗಿ ಕೆರೆ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಕೆರೆಗಾಗಿ ತುರ್ವಿಹಾಳ ಬಳಿ 259 ಎಕರೆ ಭೂಮಿ ಖರೀದಿ ಮಾಡಲಾಗಿತ್ತು. ಈಗಾಗಲೇ 119 ಎಕರೆಯಲ್ಲಿ ಮೊದಲನೇ ಹಂತದ ಕೆರೆ ನಿರ್ಮಿಸಲಾಗಿದ್ದು, 6 ಮೀಟರ್ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಎರಡನೇ ಹಂತದ ಕೆರೆ ನಿರ್ಮಾಣಕ್ಕಾಗಿ ₹ 30 ಕೋಟಿ ವೆಚ್ಚದ ಡಿಪಿಆರ್ ತಯಾರಿಸಿದ್ದು, 64 ಎಕರೆಯಲ್ಲಿ 4 ಮೀಟರ್ ನೀರಿನ ಸಂಗ್ರಹವಾಗಲಿದೆ. ₹120 ಕೋಟಿ ಡಿಪಿಆರ್ ತಯಾರಿಸಿದ್ದು, ಒಟ್ಟು 92 ಎಕರೆಯಲ್ಲಿ 12 ಮೀಟರ್ ನೀರಿನ ಸಂಗ್ರಹವಾಗಲಿದೆ. ಮುಂದಿನ 50 ವರ್ಷಗಳವರೆಗೆ ನಗರದ ಜನ ಕುಡಿಯುವ ನೀರಿನ ಸಮಸ್ಯೆ ಆಗಬಾರದೆಂಬ ದೂರದೃಷ್ಟಿಯಿಂದ ಡಿಪಿಆರ್ ತಯಾರಿಸಲಾಗಿದೆ. ರಾಜ್ಯ ಸರ್ಕಾರದ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದರೆ ಆದಷ್ಟು ಶೀಘ್ರ ಕೆರೆ ಕಾಮಗಾರಿ ಆರಂಭಿಸಲಾಗುವುದು ಎಂದರು.

ಬೇಸಿಗೆಯಲ್ಲಿ ನಗರದ ಜನರಿಗೆ ಕುಡಿಯುವ ನೀರಿನ ತೊಂದರೆಯಾಗಿತ್ತು. ಈ ಕುರಿತು ಜಿಲ್ಲೆಯ ಶಾಸಕರು ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರ ಗಮನ ಸೆಳೆದು ಸಿಂಗಟಾಲೂರು ಜಲಾಶಯದಿಂದ ತುಂಗಭದ್ರಾ ಜಲಾಶಯಕ್ಕೆ 1 ಟಿಎಂಸಿ ನೀರು ಹರಿಸಿ, ನಂತರ ಎಡದಂಡೆ ನಾಲೆಗೆ ನೀರು ಬಿಡಿಸಿ, 350 ಎಚ್‍ಪಿ 2 ಪಂಪ್‍ಸೆಟ್, 400 ಎಚ್‍ಪಿ 2 ಪಂಪ್‍ಸೆಟ್ ಸೇರಿ ಹೆಚ್ಚುವರಿ ಮೋಟರ್‌ಗಳನ್ನು ಕೂರಿಸಿ ನಗರ 3 ಕೆರೆಗಳು ಸೇರಿದಂತೆ ತಾಲ್ಲೂಕಿನ 165 ಕೆರೆಗಳನ್ನು ತುಂಬಿಸಲಾಗಿದೆ. ಆದ್ದರಿಂದ ತುರ್ವಿಹಾಳ ಕೆರೆಯಲ್ಲಿ 6 ಮೀಟರ್, ದೊಡ್ಡ ಕೆರೆಯಲ್ಲಿ 3 ಮೀಟರ್, ಸಣ್ಣ ಕೆರೆಯಲ್ಲಿ 2.8 ಮೀಟರ್ ಒಟ್ಟು 1710 ಎಂಎಲ್‍ಡಿ ನೀರು ಸಂಗ್ರಹವಾಗಿದೆ. ಪ್ರತಿದಿನ 16 ಎಂಎಲ್‍ಡಿ ನೀರು ಖರ್ಚಾಗಲಿದ್ದು, ಸೆಪ್ಟೆಂಬರ್‍ವರೆಗೆ ಕುಡಿಯುವ ನೀರು ಸರಬರಾಜು ಮಾಡಬಹುದಾಗಿದೆ ಎಂದು ಹೇಳಿದರು.

6 ದಿನಕ್ಕೊಮ್ಮೆ ನೀರು: ಮಳೆಯ ಅಭಾವ ಹಾಗೂ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕೊರತೆ ನಡುವೆ 6 ತಿಂಗಳಲ್ಲಿ 3 ಬಾರಿ ಜಲಾಶಯದಿಂದ ನೀರು ಬಿಡಿಸಲಾಗಿದೆ. ಈ ಬಾರಿ ನಗರಸಭೆ, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ತಂಡ ರಚಿಸಿಕೊಂಡು ಸಂಚರಿಸಿ ನಿಗಾವಹಿಸಿ ಆನ್-ಆಫ್ ಪದ್ದತಿ ಮೂಲಕ ನೀರು ಹರಿಸಿ ಕೆರೆಗಳನ್ನು ತುಂಬಿಸಿಕೊಳ್ಳುವಲ್ಲಿ ಶ್ರಮ ಪಟ್ಟಿದ್ದಾರೆ. ಕೆರೆಗಳಲ್ಲಿ ನೀರಿನ ಕೊರತೆಯಿದ್ದ ಇಷ್ಟು ದಿನ 10 ದಿನಕ್ಕೊಮ್ಮೆ ನೀರು ಹರಿಸಲಾಗುತ್ತಿತ್ತು. ಆದರೆ ಈಗ ಕೆರೆಗಳು ತುಂಬಿರುವುದರಿಂದ 6 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಮಳೆಯಾಗಿ ಹೊಸ ನೀರು ಬಂದಿರುವುದರಿಂದ ನೀರನ್ನು ಕಾಯಿಸಿ, ಆರಿಸಿ, ಸೋಸಿ ಕುಡಿಯಬೇಕು ಎಂದು ಮನವಿ ಮಾಡಿದರು.

ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‍ನಲ್ಲಿ ಪ್ರಕರಣ ವಿಚಾರಣೆಯಲ್ಲಿದೆ. ಆದೇಶ ಬರುವವರೆಗೂ ಕಾಯಬೇಕಿದೆ ಎಂದರು.

ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಮಾತನಾಡಿ, ತುರ್ವಿಹಾಳನಿಂದ ಸಿಂಧನೂರುವರೆಗಿನ 18 ಕಿ.ಮೀ ವ್ಯಾಪ್ತಿಯಲ್ಲಿ ಗುಂಜಳ್ಳಿ ಮತ್ತು ಕೋಲ್ಡ್ ಸ್ಟೋರೆಜ್ ಬಳಿ ರೈಸಿಂಗ್ ಪೈಪ್ ಒಡೆದಿತ್ತು. ಅದರಲ್ಲಿ ಗುಂಜಳ್ಳಿ ಬಳಿ ದುರಸ್ತಿ ಮಾಡಲಾಗಿದೆ. ಕೋಲ್ಡ್ ಸ್ಟೋರೆಜ್ ಬಳಿಯೂ ಶೀಘ್ರ ದುರಸ್ತಿ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಮಾಜಿ ಉಪಾಧ್ಯಕ್ಷ ಮುರ್ತುಜಾ ಹುಸೇನ್ ಸೇರಿದಂತೆ ಸರ್ವ ಸದಸ್ಯರು, ಅಧಿಕಾರಿಗಳು ಇದ್ದರು.

ಮಠಾಧೀಶರು ರಾಜಕೀಯ ಹೇಳಿಕೆ ನೀಡುವುದು ತರವಲ್ಲ’ ‘

ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ತೀರ್ಮಾನವಾಗಿತ್ತು. ಅದಕ್ಕೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ. ಮಠ ಮಾನ್ಯಗಳ ಬಗ್ಗೆ ಎಲ್ಲರಿಗೂ ಅಪಾರ ಗೌರವವಿದೆ. ಹೀಗಾಗಿ ಮಠಾಧೀಶರು ರಾಜಕೀಯ ವಿಚಾರವಾಗಿ ಹೇಳಿಕೆ ನೀಡುವುದು ಸೂಕ್ತವಲ್ಲ. ಮುಖ್ಯಮಂತ್ರಿ ಆಯ್ಕೆ ಆಡಳಿತ ಪಕ್ಷದ ಹೈಕಮಾಂಡ್ ತೀರ್ಮಾನ. ರಾಜ್ಯದಲ್ಲಿಯೇ ಇನ್ನೆರೆಡು ಉಪಮುಖ್ಯಮಂತ್ರಿ ಮಾಡಿದರೂ ತಪ್ಪೇನೂ ಇಲ್ಲ’ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು. ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಶಾಸಕರು ಚುನಾವಣೆ ನಿಂತು ಜನರಿಂದ ಆಯ್ಕೆಯಾಗಿ ಬಂದವರು. ಆದರೆ ಎಂಎಲ್‍ಸಿ ಸ್ಥಾನ ಸೀಮಿತವಾದದ್ದು. ಶಾಸಕಾಂಗಕ್ಕೂ ಅದಕ್ಕೂ ಸಂಬಂಧ ಇಲ್ಲ. ಅವುಗಳ ಕರ್ತವ್ಯವೂ ಬೇರೆ ಬೇರೆಯಾಗಿದೆ. ಜಿಲ್ಲೆಗೆ 3 ಎಂಎಲ್‍ಸಿ ಬಂದಿರುವುದು ಸಂತಸದ ಸಂಗತಿ. ಸಿಂಧನೂರಿನಲ್ಲಿ ಎಂಎಲ್‍ಸಿ ಆದವರಿಂದ ಕೆಲಸಗಳಿಗೆ ಅಡಚಣೆ ಆಗುವುದಿಲ್ಲ ಎಂದು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT