ರಾಯಚೂರು: ಬೋಗಸ್ ಕಾರ್ಡ್ ತಡೆಯಲು ಕಟ್ಟಡ ಕಾರ್ಮಿಕರ ಗುರುತಿನ ಚೀಟಿ, ನವೀಕರಣಕ್ಕೆ ವಿಧಿಸಿದ ಕಠಿಣ, ಅವೈಜ್ಞಾನಿಕ ನಿಯಮಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ಜಿಲ್ಲಾ ಘಟಕದ ವತಿಯಿಂದ ಆಗಸ್ಟ್ 5ರಂದು ‘ಮುಖ್ಯಮಂತ್ರಿ ಮನೆ ಚಲೋ’ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಶಬ್ಬೀರ್ ಜಾಲಹಳ್ಳಿ ತಿಳಿಸಿದರು.
2007ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಮಿಕರಿಗಾಗಿ 19 ಯೋಜನೆಗಳು ಜಾರಿಗೊಳಿಸಿದ್ದು ಈ ಪೈಕಿ ಕೇವಲ 11 ಜಾರಿಯಲ್ಲಿದೆ. ಕಟ್ಟಡ ಕಾರ್ಮಿಕ ಮಕ್ಕಳ ಶೈಕ್ಷಣಿಕ, ಮದುವೆ ಸಹಾಯಧನ, ಆರೋಗ್ಯ, ಅಪಘಾತ ಸಹಜ ಮರಣಕ್ಕೆ ಪರಿಹಾರ ಸೇರಿ ಹಲವು ಯೋಜನೆಗಳು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮಂಡಳಿಯಿಂದ ಬೋಗಸ್ ಕಾರ್ಡ್ ನಿಯಂತ್ರಣದ ನೆಪದಲ್ಲಿ ಬಿಗಿಯಾದ ನಿಯಮ ಜಾರಿಗೊಳಿಸಿದ್ದ ಪರಿಣಾಮ ಶೇ 80 ರಷ್ಟು ಕಾರ್ಮಿಕರು ತಮ್ಮ ಕಾರ್ಡ್ ನವೀಕರಿಸಲು ಸಾಧ್ಯವಾಗಿಲ್ಲ ಎಂದು ದೂರಿದರು.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರ್ಮಿಕರಿಗೆ ಆಹಾರ ಕಿಟ್ ನೀಡುವಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರವಾಗಿತ್ತು. ಇದಕ್ಕೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಕಾರಣ ಈ ಬಗ್ಗೆ ತನಿಖೆ ನಡೆಸಬೇಕು. ಮಂಡಳಿಯ ಅನುದಾನ ಇತರೆ ಯೋಜನೆಗಳಿಗೆ ಬಳಸುವುದನ್ನು ತಡೆಯಬೇಕು. ಶೈಕ್ಷಣಿಕ ಧನ ಸಹಾಯ ಕಡಿತಗೊಳಿಸಿರುವ ಆದೇಶ ಹಿಂಪಡೆದು ಹೈಕೋರ್ಟ್ ಆದೇಶದಂತೆ ಧನ ಸಹಾಯ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.