ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ್ವಿ: ಲಾಕ್‌ಡೌನ್‌ ಪರಿಣಾಮ ಅಕ್ಕಿ ರಫ್ತಿಗೆ ಲಾರಿಗಳ ಕೊರತೆ, ವಹಿವಾಟು ಕುಸಿತ

Last Updated 9 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಮಾನ್ವಿ: ಭತ್ತದ ನಾಡು ಎಂದು ಹೆಸರಾಗಿರುವ ಮಾನ್ವಿ ತಾಲ್ಲೂಕಿನಲ್ಲಿ ಕೊರೊನಾ ಸೋಂಕಿನ ಭೀತಿ ರೈಸ್‍ಮಿಲ್ ಮಾಲೀಕರಿಗೂ ತಟ್ಟಿದೆ. ರಾಜ್ಯ ಸರ್ಕಾರ ಅಕ್ಕಿ, ಬೇಳೆ ಸೇರಿ ದಿನಬಳಕೆಯ ವಸ್ತುಗಳ ಸಾಗಾಣಿಕೆಗೆ ಮುಕ್ತ ಅವಕಾಶ ನೀಡಿದ್ದರೂ ಕೂಡ ಲಾರಿಗಳ ಕೊರತೆಯಿಂದಾಗಿ ಅಕ್ಕಿ ರಫ್ತು ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಸಿದಿದೆ.

ಮಾನ್ವಿ ತಾಲ್ಲೂಕಿನಲ್ಲಿ 15ಕ್ಕೂ ಹೆಚ್ಚು ರೈಸ್ ಮಿಲ್‍ಗಳಿದ್ದು, ಗುಣಮಟ್ಟದ ಅಕ್ಕಿ ವ್ಯಾಪಾರಕ್ಕೆ ಹೆಸರಾಗಿವೆ. ಇಲ್ಲಿಂದ ರಫ್ತಾಗುವ ಅಕ್ಕಿಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳು ಹಾಗೂ ಹೊರರಾಜ್ಯಗಳಲ್ಲಿ ಭಾರೀ ಬೇಡಿಕೆಯಿದೆ.

ಮಾನ್ವಿ ತಾಲ್ಲೂಕಿನ ರೈಸ್ ಮಿಲ್‍ಗಳಿಂದ ಅಕ್ಕಿಯನ್ನು ರಾಜ್ಯದ ಬೆಂಗಳೂರು, ಮೈಸೂರು, ಕೋಲಾರ, ಚಿಂತಾಮಣಿ, ಹುಬ್ಬಳ್ಳಿ, ಧಾರವಾಡ, ಮಹಾರಾಷ್ಟ್ರದ ಪುಣೆ, ನಾಸಿಕ್, ಸಾಂಗ್ಲಿ, ಸೋಲಾಪುರಗಳಿಗೆ ರಫ್ತು ಮಾಡಲಾಗುತ್ತದೆ. ಈ ಸ್ಥಳಗಳಿಗೆ ಸೇರಿದ ಲಾರಿಗಳಲ್ಲಿಯೇ ಅಕ್ಕಿಯನ್ನು ಸಾಗಾಣಿಕೆ ಮಾಡಲಾಗುತ್ತದೆ.

ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್‌ಡೌನ್ ಘೋಷಣೆಯಾದ ನಂತರ ಆ ಸ್ಥಳಗಳಿಂದ ಲಾರಿಗಳ ಮಾಲೀಕರು, ಚಾಲಕರು ಅಕ್ಕಿ ಸಾಗಾಣಿಕೆಗೆ ಜಿಲ್ಲೆ ಹಾಗೂ ತಾಲ್ಲೂಕಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕಾರಣ ತಾಲ್ಲೂಕಿನ ರೈಸ್ ಮಿಲ್‍ಗಳಿಂದ ಅಕ್ಕಿ ರಫ್ತಿಗೆ ಲಾರಿಗಳ ಕೊರತೆ ಉಂಟಾಗಿ ವ್ಯಾಪಾರ ಕುಸಿಯುವಂತಾಗಿದೆ. ಇದರಿಂದ ರೈಸ್‍ಮಿಲ್ ಮಾಲೀಕರು ಕೂಡ ಆರ್ಥಿಕವಾಗಿ ಸಂಕಷ್ಟ ಎದುರಿಸುವಂತಾಗಿದೆ ಎಂದು ಇಲ್ಲಿನ ರೈಸ್ ಮಿಲ್ ಮಾಲೀಕ ಆರ್.ಶ್ರೀನಿವಾಸ ಶೆಟ್ಟಿ ತಿಳಿಸಿದ್ದಾರೆ.

ಲಾಕ್‌ಡೌನ್ ಘೋಷಣೆ ಪರಿಣಾಮ ಲಾರಿಗಳ ಬಾಡಿಗೆ ದರವೂ ಹೆಚ್ಚಾಗಿದೆ. ರಾಜ್ಯದ ಸ್ಥಳಗಳಿಗೆ ಲಾರಿ ಬಾಡಿಗೆ ಈ ಹಿಂದಿನ ದರಕ್ಕಿಂತ ಶೇ 50ರಷ್ಟು ಹಾಗೂ ಹೊರರಾಜ್ಯದ ಸ್ಥಳಗಳಿಗೆ ಶೇ 35ರಷ್ಟು ಹೆಚ್ಚಾಗಿದೆ. ಆದರೂ ಅಕ್ಕಿ ಸಾಗಾಣಿಕೆಗೆ ನಿರೀಕ್ಷಿತ ಪ್ರಮಾಣದಲ್ಲಿ ಲಾರಿಗಳ ಲಭ್ಯತೆ ಮೊದಲಿನಂತೆ ಇಲ್ಲ.

ರೈಸ್ ಮಿಲ್‍ಗಳಲ್ಲಿ ಅಕ್ಕಿ ತುಂಬಲು ಖಾಲಿ ಚೀಲಗಳ ಕೊರತೆಯೂ ಉಂಟಾಗಿದೆ. ಖಾಲಿ ಚೀಲಗಳನ್ನು ತಯಾರಿಸುವ ಹೈದರಾಬಾದ್ ಮತ್ತು ದೆಹಲಿ ಕಂಪನಿಗಳು ಲಾಕ್‌ಡೌನ್ ಹಿನ್ನೆಲೆಯಲ್ಲಿ ಉತ್ಪಾದನೆ ಸ್ಥಗಿತಗೊಳಿಸಿವೆ. ಜಿಲ್ಲೆಯ ಬಹುತೇಕ ರೈಸ್‌ಮಿಲ್‍ಗಳಲ್ಲಿ ಬಿಹಾರ ರಾಜ್ಯದ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಮಾಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.

ಹೋಳಿ ಹಬ್ಬಕ್ಕಾಗಿ ತಮ್ಮ ತವರು ರಾಜ್ಯಕ್ಕೆ ಅನೇಕ ಕಾರ್ಮಿಕರು ತೆರಳಿದ್ದರು. ಲಾಕ್‌ಡೌನ್ ಘೋಷಣೆಯಿಂದ ರೈಲುಗಳ ಸಂಚಾರಕ್ಕೆ ನಿರ್ಬಂಧ ಹೇರಿದ ಕಾರಣ ಅವರು ಮರಳಿ ಬರಲು ಸಾಧ್ಯವಾಗಿಲ್ಲ. ಹೀಗಾಗಿ ರೈಸ್ ಮಿಲ್‍ಗಳಲ್ಲಿ ಕೂಲಿಕಾರ್ಮಿಕರ ಕೊರತೆ ಉಂಟಾಗಿ ಸ್ಥಳೀಯ ಕಾರ್ಮಿಕರನ್ನು ಅವಲಂಬಿಸಬೇಕಾಗಿದೆ. ರೈಸ್‍ಮಿಲ್‍ಗಳಲ್ಲಿ ಯಂತ್ರಗಳ ನಿರ್ವಹಣೆಯಲ್ಲಿ ಸಣ್ಣಪುಟ್ಟ ದುರಸ್ತಿಗೆ ತಾಂತ್ರಿಕ ಬಿಡಿಭಾಗಗಳು ದೊರಕುತ್ತಿಲ್ಲ.

ಏ.14ರ ನಂತರ ಲಾಕ್‌ಡೌನ್ ಆದೇಶ ರದ್ದಾದರೆ ಮಾತ್ರ ವಹಿವಾಟಿನಲ್ಲಿ ಹೆಚ್ಚಳವಾಗುವ ನಿರೀಕ್ಷೆಯನ್ನು ಸ್ಥಳೀಯ ರೈಸ್‍ಮಿಲ್ ಮಾಲೀಕರು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT