ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿಯಲ್ಲೂ ಕೊರೊನಾ ಎರಡು ಪಾಜಿಟಿವ್‌, ರಾಯಚೂರಿನಲ್ಲೂ ಹೆಚ್ಚಿದ ಆತಂಕ

Last Updated 12 ಮೇ 2020, 15:51 IST
ಅಕ್ಷರ ಗಾತ್ರ

ರಾಯಚೂರು: ಲಾಕ್‌ಡೌನ್‌ ಮುಕ್ತಾಯದ ದಿನ ಹತ್ತಿರ ಆಗುತ್ತಿದ್ದಂತೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರವೇಶಿಸುವ ಆತಂಕ ಹೆಚ್ಚಾಗಿದೆ.

ಯಾದಗಿರಿ ಜಿಲ್ಲೆಯಲ್ಲಿ ಮಂಗಳವಾರ ಎರಡು ಕೊರೊನಾ ಪಾಜಿಟಿವ್‌ ವರದಿಗಳು ಪತ್ತೆಯಾಗಿರುವುದು ಆತಂಕ ಗಟ್ಟಿ ಆಗುವಂತೆ ಮಾಡಿದೆ. ರಾಯಚೂರಿನೊಂದಿಗೆ ಇದುವರೆಗೂ ಅವಿನಾಭಾವವಾಗಿ ಹಸಿರು ಪಟ್ಟಿಯಲ್ಲಿ ಯಾದಗಿರಿ ಉಳಿದುಕೊಂಡಿತ್ತು. ಇದೀಗ ಯಾದಗಿರಿಗೆ ಸಂಪರ್ಕಿಸುವ ಗಡಿಭಾಗಗಳಲ್ಲೂ ನಿಗಾ ಹೆಚ್ಚಿಸುವ ನಿವಾರ್ಯತೆ ಎದುರಾಗಿದೆ. ರಾಯಚೂರು ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಎಂಟು ಜಿಲ್ಲೆಗಳ ಪೈಕಿ ಇದೀಗ ಕೆಂಪು ವಲಯದ ಜಿಲ್ಲೆಗಳ ಸಂಖ್ಯೆ ಆರರಿಂದ ಏಳಕ್ಕೆ ಏರಿಕೆಯಾಗಿದೆ. ಕೊಪ್ಪಳ ಮಾರ್ಗವೊಂದೇ ಹಸಿರಾಗಿದೆ.

ಬಳ್ಳಾರಿ ಜಿಲ್ಲೆ ಕಂಪ್ಲಿಯ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಜಿಟಿವ್‌ ಸೋಮವಾರ ದೃಢವಾಗಿದ್ದು, ಮೇ 5 ರಂದು ಈ ವ್ಯಕ್ತಿಯೊಂದಿಗೆ ಸರ್ಕಾರಿ ಬಸ್‌ನಲ್ಲಿ ರಾಯಚೂರು ಜಿಲ್ಲೆಯ ಮೂವರು ವ್ಯಕ್ತಿಗಳು ಪ್ರಯಾಣಿಸಿದ್ದರು. ಈ ಬಗ್ಗೆ ಗಂಗಾವತಿ ತಾಲ್ಲೂಕಿನ ತಹಶೀಲ್ದಾರ್‌ ಅವರು ಸೋಮವಾರ ತಡರಾತ್ರಿ ಜಿಲ್ಲೆಗೆ ಮಾಹಿತಿ ರವಾನಿಸಿದ್ದರು. ಸುಳಿವು ಆಧರಿಸಿ ಕಾರ್ಯಾಚರಣೆ ಕೈಗೊಂಡಿದ್ದ ಸಿಂಧನೂರು ತಾಲ್ಲೂಕು ಆಡಳಿತವು, ಮೂವರನ್ನು ಪತ್ತೆ ಮಾಡಿ ಐಸೊಲೇಶನ್‌ ವಾರ್ಡ್‌ಗೆ ದಾಖಲು ಮಾಡಲಾಗಿದೆ. ಸಿಂಧನೂರು ನಗರದ ಸುಕಾಲಪೇಟೆಯ ನಿವಾಸಿ, ಸಿಂಧನೂರು ತಾಲ್ಲೂಕಿನ ರಾಗಲಪರ್ವಿ ಗ್ರಾಮದ ವ್ಯಕ್ತಿ ಹಾಗೂ ಮಸ್ಕಿ ತಾಲ್ಲೂಕಿನ ಹಾಲಾಪುರ ವ್ಯಕ್ತಿಯು ಪಾಜಿಟಿವ್‌ ದೃಢವಾದ ವ್ಯಕ್ತಿಯೊಂದಿಗೆ ಪ್ರಯಾಣಿಸಿದ್ದರು. ಈ ಮೂವರ ಕುಟುಂಬದ ಸದಸ್ಯರೆಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿದೆ. ಈ ಘಟನೆ ಕೂಡಾ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.

ಹೊರಜಿಲ್ಲೆ ಮತ್ತು ರಾಜ್ಯಗಳಿಗೆ ವಲಸೆ ಹೋಗಿದ್ದ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಸಂಬಂಧಿಗಳು ಜಿಲ್ಲೆಗೆ ನಿರಂತರವಾಗಿ ಬರುತ್ತಿದ್ದಾರೆ. ರಾಜ್ಯದ ಹೊರಜಿಲ್ಲೆಗಳಿಂದ ಬರುವವರಿಗೆ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಮೌಖಿಕವಾಗಿ ಸೂಚಿಸಲಾಗುತ್ತಿದೆ. ಆದರೆ, ಮನೆ ಗೋಡೆಗೆ ಕರಪತ್ರ ಅಂಟಿಸಿ ನಿಗಾ ವಹಿಸುವುದನ್ನು ಕೈಬಿಡಲಾಗಿದೆ. ಆದರೆ, ಹೊರ ರಾಜ್ಯಗಳಿಂದ ಬರುವವರನ್ನು ಕಡ್ಡಾಯವಾಗಿ ಸರ್ಕಾರಿ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತಿದೆ. ಆದರೂ ತೆಲಂಗಾಣ ಮತ್ತು ಆಂಧಪ್ರದೇಶಗಳಿಂದ ಕಾರ್ಮಿಕರು ಕಣ್ಣುತಪ್ಪಿಸಿ ಮನೆ ಸೇರಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗಡಿಭಾಗದ ಗ್ರಾಮಗಳಲ್ಲಿ ಅರಿವು ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ.

ತೆಲಂಗಾಣದ ಹೈದರಾಬಾದ್‌, ಗದ್ವಾಲ್‌ನಿಂದ ಹಾಗೂ ಆಂಧ್ರಪ್ರದೇಶದ ಕರ್ನೂಲ್‌, ಗುಂಟೂರು, ಗುಂತ್ಕಲ್‌ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರಾಯಚೂರಿಗೆ ಕಾರ್ಮಿಕರು ಬರುತ್ತಿದ್ದಾರೆ. ಆರೋಗ್ಯ ಇಲಾಖೆಯಿಂದ ಎಲ್ಲರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಆನಂತರ ಕಡ್ಡಾಯವಾಗಿ 14 ದಿನಗಳವೆರೆಗೆ ಸರ್ಕಾರಿ ಕ್ವಾರಂಟೈನ್‌ಗೆ ಕಳುಹಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT