ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿಯಂತ್ರಣ: ಜಿಲ್ಲೆಯಲ್ಲಿ ವ್ಯಾಪಾರ ಮಳಿಗೆಗಳು ಬಂದ್‌

ಕ್ರಮಗಳಿಗೆ ವ್ಯಾಪಾರಿಗಳಿಂದ ಸಹಕಾರ
Last Updated 23 ಏಪ್ರಿಲ್ 2021, 14:17 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಕೋವಿಡ್‌ ಎರಡನೇ ಅಲೆ ತಡೆಗಾಗಿ ಗುರುವಾರದಿಂದ ಜಿಲ್ಲೆಯಲ್ಲಿ ಭಾಗಶಃ ಲಾಕ್‌ಡೌನ್‌ ಜಾರಿಯಾಗಿತ್ತು. ಇದೀಗ ವ್ಯಾಪಾರಿಗಳೆಲ್ಲ ಸಹಕಾರ ನೀಡಿದ್ದು, ಶುಕ್ರವಾರ ಮಧ್ಯಾಹ್ನದಿಂದ ಸಂಪೂರ್ಣ ಮಳಿಗೆಗಳೆಲ್ಲ ಬಂದ್‌ ಆಗಿವೆ.

ರಾಯಚೂರು ನಗರದಲ್ಲಿ ಔಷಧಿ, ಆಸ್ಪತ್ರೆ ಹಾಗೂ ಕೆಲವು ಕಿರಾಣಿ ಅಂಗಡಿಗಳನ್ನು ಹೊರತುಪಡಿಸಿ ಎಲ್ಲ ಅಂಗಡಿಗಳನ್ನು ಪೊಲೀಸರು ಬಂದ್‌ ಮಾಡಿಸಿದರು. ಪೊಲೀಸರ ಸೀಟೆ ಸದ್ದು ಮೊಳಗುತ್ತಿದ್ದಂತೆ ವ್ಯಾಪಾರಿಗಳೆಲ್ಲ ಮಳಿಗೆಗಳ ಶಟರ್‌ ಎಳೆದುಕೊಂಡರು. ವಾರಾಂತ್ಯ ಶನಿವಾರ ಮತ್ತು ಭಾನುವಾರ ಕರ್ಪ್ಯೂ ಇರುವುದರಿಂದ ಜಿಲ್ಲೆಯಲ್ಲಿ ಲಾಕ್‌ಡೌನ್‌ ವಿಧಿಸಿದಂತಾಗಿದೆ.

ಅಗತ್ಯ ಸರಕು ಮಾರಾಟಕ್ಕೆ ಅವಕಾಶವಿದೆ ಎಂದು ತಿಳಸಲಾಗಿತ್ತು. ಆದರೆ, ಜಿಲ್ಲೆಯ ಕೊರೊನಾ ಸೋಂಕು ತ್ವರಿತವಾಗಿ ವ್ಯಾಪಿಸುತ್ತಿರುವುದರಿಂದ ಜಿಲ್ಲಾಡಳಿತವು ಬಿಗಿಕ್ರಮ ಕೈಗೊಂಡಿದೆ. ಜನರು ಗುಂಪಾಗಿ ನಿಲ್ಲುವುದಕ್ಕೆ ಆಸ್ಪದ ನೀಡುತ್ತಿಲ್ಲ. ಯಾವುದಾದರೂ ಮಳಿಗೆ ಎದುರು ಜನರ ಗುಂಪು ಗೋಚರಿಸಿದರೆ, ಮಳಿಗೆ ಮಾಲೀಕರಿಗೆ ದಂಡ ವಿಧಿಸಲಾಗುವುದು ಎಂದು ಸೂಚಿಸಲಾಗಿದೆ.

ಹೊಟೇಲ್‌, ರೆಸ್ಟೊರೆಂಟ್‌, ಖಾನಾವಳಿ ಹಾಗೂ ಮದ್ಯದ ಅಂಗಡಿಗಳು ಪಾರ್ಸಲ್‌ ಕೊಡುವುದಕ್ಕೆ ಮಧ್ಯಾಹ್ನದವರೆಗೂ ಅವಕಾಶ ನೀಡಲಾಗಿತ್ತು. ಖಾಸಗಿ ವಾಹನ, ಸರ್ಕಾರಿ ಬಸ್ಸುಗಳು ಹಾಗೂ ಆಟೋಗಳ ಸಂಚಾರ ಇದ್ದರೂ ಸಾಕಷ್ಟು ಜನರು ಇರಲಿಲ್ಲ. ಕೇಂದ್ರ ಬಸ್‌ ನಿಲ್ದಾಣದಲ್ಲಿ ಸಂಚಾರ ಹೊರಡಲು ಬಸ್ಸುಗಳು ಸಜ್ಜಾಗಿದ್ದರೂ ಪ್ರಯಾಣಿಕರಿಲ್ಲದೆ, ಕಾಯುತ್ತಿದ್ದ ದೃಶ್ಯ ಕಂಡುಬಂತು.

ಬೈಕ್‌, ಕಾರುಗಳಲ್ಲಿ ಸಂಚರಿಸುವ ಜನರು ಮಾಸ್ಕ್‌ ಧರಿಸಿರುವುದನ್ನು ಪೊಲೀಸರು ಅಲ್ಲಲ್ಲಿ ತಪಾಸಣೆ ಮಾಡಿದರು. ಮಾಸ್ಕ್‌ ಧರಿಸದವರಿಗೆ ತಲಾ ₹ 100 ದಂಡ ವಿಧಿಸಿದರು. ಜನರು ವ್ಯಾಪಕವಾಗಿ ಮಾಸ್ಕ್‌ ಬಳಕೆ ಮಾಡುತ್ತಿದ್ದು, ಅಂತರ ಪಾಲನೆ ಆಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT