ಗುರುವಾರ , ಮೇ 13, 2021
38 °C
ಕೋವಿಡ್‌ ಎರಡನೇ ಅಲೆ ತಡೆಗೆ ಜಿಲ್ಲೆಯಾದ್ಯಂತ ಬಿಗಿಕ್ರಮ

ರಾಯಚೂರು: ಮಧ್ಯಾಹ್ನದೊಳಗೆ ಅಗತ್ಯ ವಸ್ತು ಖರೀದಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೋವಿಡ್ ಎರಡನೇ ಅಲೆ ತಡೆಗಟ್ಟಲು ಸರ್ಕಾರ ಪ್ರಕಟಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಬುಧವಾರ (ಏಪ್ರಿಲ್‌ 21)ರಿಂದ ಮೇ 4ರ ವರೆಗೆ ನಿಯಮಗಳು ಜಾರಿಯಲ್ಲಿರಲಿವೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಸಂವಾದ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ತಹಶೀಲ್ದಾರರು, ಕಂದಾಯ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಪೊಲೀಸರು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.

ಸರ್ಕಾರ ರಾಜ್ಯದಾದ್ಯಂತ ರಾತ್ರಿ ಕರ್ಫ್ಯೂ ಜಾರಿ ಮಾಡಿದೆ. ಅದರಂತೆ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ಅನಗತ್ಯವಾಗಿ ಸಂಚರಿಸುವಂತಿಲ್ಲ, ಗುಂಪು ಗೂಡುವಂತಿಲ್ಲ. ಅಲ್ಲದೇ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ವರೆಗೆ ಪೂರ್ತಿಯಾಗಿ ಕರ್ಫ್ಯೂ ಹೇರಲಾಗಿದೆ. ಅಗತ್ಯ ಸೇವೆಗಳು ಹೊರತುಪಡಿಸಿ ಉಳಿದೆಲ್ಲ ಅನಗತ್ಯ ಸಂಚಾರ ವ್ಯವಸ್ಥೆ ಬಂದ್ ಆಗುವಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ನಿಯಮ ಉಲ್ಲಂಘನೆಯಾಗದಂತೆ ಕ್ರಮಜರುಗಿಸಬೇಕು ಎಂದು ಸೂಚಿಸಿದರು.

ರಾತ್ರಿ ಕರ್ಫ್ಯೂ ಸಮಯದಲ್ಲಿ ತುರ್ತು ಸಂಚಾರ ಹೊರತುಪಡಿಸಿ ಉಳಿದ ಎಲ್ಲ ವಾಹನ ಸಂಚಾರ ಬಂದ್ ಮಾಡಲಾಗಿದೆ. ಹಗಲು ವೇಳೆಯಲ್ಲಿ ಮಾತ್ರ ಮದುವೆ, ಉಳಿದ ಕಾರ್ಯಕ್ರಮ ಮಾಡಿಕೊಳ್ಳಬಹುದಾಗಿದೆ. ರಾತ್ರಿ ಯಾವುದೇ ರೀತಿಯಲ್ಲಿ ಕಾರ್ಯಕ್ರಮ ನಡೆಸುವಂತಿಲ್ಲ. ಆಹಾರ, ಧವಸಧಾನ್ಯ, ಹಣ್ಣು ತರಕಾರಿ, ಹಾಲು ಉತ್ಪನ್ನಗಳನ್ನು ಖರೀದಿಸಲು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾಗೂ ವಾರಾಂತ್ಯ ಕರ್ಫ್ಯೂ ದಿನಗಳಲ್ಲಿ ಬೆಳಿಗ್ಗೆ 6 ರಿಂದ ಬೆಳಿಗ್ಗೆ 10 ಗಂಟೆಯವರೆಗೆ ಮಾತ್ರ ಅವಕಾಶವಿದೆ ಎಂದರು.

ತೆರೆದ ಪ್ರದೇಶಗಳಲ್ಲಿ ತರಕಾರಿ, ಹಣ್ಣು, ಮಾರಾಟಕ್ಕೆ ಮಾತ್ರ ಅವಕಾಶ ವಿರುತ್ತದೆ. ಮದುವೆ ಕಲ್ಯಾಣ ಮಂಟಪದಲ್ಲಿ ಹೆಚ್ಚು ಜನರು ಸೇರಿದ್ದು ಕಂಡುಬಂದಲ್ಲಿ, ಆ ಕಲ್ಯಾಣ ಮಂಟಪದ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಹಾಗೂ ಅದಕ್ಕೆ ನೀಡಲಾದ ಅನುಮತಿಯನ್ನು ರದ್ದುಗೊಳಿಸಲಾಗುವುದು. ಸಿನಿಮಾ, ಶಾಪಿಂಗ್ ಬಂದ್, ಬಾರ್, ಹೋಟೆಲ್‌ಗಳಿಂದ ಪಾರ್ಸಲ್‍ಗೆ ಅವಕಾಶವಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ ಹೋಟಲ್ ಮತ್ತು ರೆಸ್ಟೋರೆಂಟ್ ಹಾಗೂ ಬಾರ್‌ಗಳು ಎಂಆರ್‌ಪಿ ದರದಲ್ಲಿ ಪಾರ್ಸಲ್‍ಗೆ ಮಾತ್ರ ಅವಕಾಶ ನೀಡಲಾಗಿದೆ. ಲಾಡ್ಜ್‌ಳಲ್ಲಿರುವ ಅತಿಥಿಗಳಿಗೆ ಊಟ, ಉಪಹಾರ ಪೂರೈಸಬಹುದು. ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಸಭೆ ಸಮಾರಂಭ ನಡೆಸುವದನ್ನು ನಿರ್ಬಂಧಿಸಲಾಗಿದೆ.

ಸೂಗೂರೇಶ್ವರ ದೇವಸ್ಥಾನ ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲಿ ದೈನಂದಿನ ಪೂಜಾ ಕೈಂಕರ್ಯ ಮಾಡಿಕೊಳ್ಳಬಹುದಾಗಿದೆ. ಶಾಲಾ, ಕಾಲೇಜು ಆನ್‍ಲೈನ್ ತರಗತಿಗಳಿಗೆ ಅವಕಾಶವಿದೆ. ಟ್ಯೂಷನ್‍ಗಳು ಇರುವುದಿಲ್ಲ. ಕಟ್ಟಡ ನಿರ್ಮಾಣ ಕಾಮಗಾರಿ, ಕಾರ್ಖಾನೆಗಳಲ್ಲಿ ಕೆಲಸ ನಡೆಸಲು ಅನುಮತಿ ನೀಡಲಾಗಿದೆ. ಜಿಲ್ಲೆ ಮತ್ತು ರಾಜ್ಯಗಳ ನಡುವೆ ಸಂಚಾರಕ್ಕೆ ಯಾವುದೇ ರೀತಿಯ ನಿರ್ಬಂಧ ಇರುವದಿಲ್ಲ. ಆದರೆ ಶೇ 50ರಷ್ಟು ಪ್ರಯಾಣಿಕರನ್ನು ಮಾತ್ರ ಸಾಗಿಸಬಹುದಾಗಿದೆ.

ತಳ್ಳುವ ಗಾಡಿಗಳಲ್ಲಿ ತರಕಾರಿ ಮಾರಾಟಕ್ಕೆ ಪ್ರೋತ್ಸಾಹ ನೀಡಬೇಕು. ಫುಟ್‍ಬಾತ್ ಹಾಗೂ ಪಾನೀಪುರಿಯಂತಹ ಅಂಗಡಿಮುಂಗಟ್ಟುಗಳಿಗೆ ಅವಕಾಶವಿಲ್ಲ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಪಿಎಸ್‍ಐ, ಡಿವೈಎಸ್ಪಿಗಳು ಸಂಬಂಧಿಸಿದ ತಾಲ್ಲೂಕುಗಳ ತಹಶೀಲ್ದಾರರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕರ್ಫ್ಯೂ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮವಸಹಿಬೇಕು. ತೀರಾ ಅನಿವಾರ್ಯವಾಗಿ ಕಾರ್ಯನಿರ್ವಹಿಸುವವರಿಗೆ ಪಾಸುಗಳನ್ನು ನೀಡಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಚ್. ದುರುಗೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು