ಶನಿವಾರ, ಏಪ್ರಿಲ್ 4, 2020
19 °C
ಬೆಂಗಳೂರು ಮಾರ್ಗದಲ್ಲಿ ವಾರಾಂತ್ಯ ಮಾತ್ರ ಬಸ್‌ ಸಂಚಾರ

ಕೋವಿಡ್‌–19 ಭೀತಿ: ಎನ್‌ಇಕೆಆರ್‌ಟಿಸಿಗೆ ಭಾಗಶಃ ನಷ್ಟ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಎಲ್ಲೆಡೆಯಲ್ಲೂ ಕೋವಿಡ್‌–19 ಭೀತಿ ಆವರಿಸುವುದರಿಂದ ಸರ್ಕಾರಿ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿದ್ದು ರಾಯಚೂರು ವಿಭಾಗವು ಭಾಗಶಃ ನಷ್ಟ ಅನುಭವಿಸುವಂತಾಗಿದೆ.

ಮುಖ್ಯವಾಗಿ ಸ್ಲೀಪರ್‌ ಬಸ್‌ಗಳಿಗೆ ಆನ್‌ಲೈನ್, ಆಫ್‌ಲೈನ್‌ ಬುಕಿಂಗ್‌ ಆಗುತ್ತಿಲ್ಲ. ಶೇ 30 ಕ್ಕಿಂತ ಪ್ರಯಾಣಿಕರ ಸಂಖ್ಯೆ ಕಡಿಮೆಯಾದರೆ, ಬಸ್‌ ಸಂಚಾರ ರದ್ದುಗೊಳಿಸುವ ಅನಿವಾರ್ಯತೆ ನಿರ್ಮಾಣವಾಗುತ್ತಿದೆ. ಬೆಂಗಳೂರಿಗೆ ಶನಿವಾರ ಮತ್ತು ಭಾನುವಾರ ವಾರಾಂತ್ಯದ ದಿನಗಳಲ್ಲಿ ಮಾತ್ರ ಬುಕಿಂಗ್‌ ಆಗುತ್ತಿವೆ. ಇನ್ನುಳಿದ ದಿನಗಳಲ್ಲಿ ಜನರು ಬೆಂಗಳೂರಿನತ್ತ ಹೋಗುತ್ತಿಲ್ಲ.

‘ಬೆಂಗಳೂರು ಮಾರ್ಗದಲ್ಲಿ ಹೋಗುತ್ತಿದ್ದ ಬಸ್‌ಗಳಿಂದಾಗಿ ಕಳೆದ ಒಂದು ವಾರದಲ್ಲಿ ₹6 ಲಕ್ಷ ನಷ್ಟವಾಗಿದೆ. ಎಂಟು ಡಿಪೋಗಳನ್ನು ಒಳಗೊಂಡಿರುವ ರಾಯಚೂರು ವಿಭಾಗದಲ್ಲಿ ಪ್ರತಿದಿನ ₹50 ಲಕ್ಷ ಆದಾಯ ಸಂಗ್ರಹ ಆಗುತ್ತಿತ್ತು. ಈಗ ₹3 ರಿಂದ ₹4 ಲಕ್ಷ ಆದಾಯ ಸಂಗ್ರಹ ಕಡಿಮೆ ಆಗಿದೆ. ಕೆಂಪು ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಅಷ್ಟೊಂದು ಕಡಿಮೆ ಆಗಿಲ್ಲ’ ಎನ್ನುವುದು ಎನ್‌ಇಕೆಆರ್‌ಟಿಸಿ ಅಧಿಕಾರಿಗಳ ವಿವರಣೆ.

ಮುನ್ನಚ್ಚರಿಕೆ

ಸದಾ ಜನಜಂಗುಳಿ ಮಧ್ಯೆ ಕಾರ್ಯನಿರ್ವಹಿಸುವ ಎನ್‌ಇಕೆಆರ್‌ಟಿಸಿ ಚಾಲಕರು, ನಿರ್ವಾಹಕರು, ನಿಲ್ದಾಣದ ಅಧಿಕಾರಿಗಳು ಹಾಗೂ ಡಿಪೋ ಸಿಬ್ಬಂದಿಯ ಆರೋಗ್ಯ ಸುರಕ್ಷತೆಗಾಗಿ ‘ಕೋವಿಡ್‌–19’ ತಡೆಗಾಗಿ ಎನ್‌ಇಕೆಆರ್‌ಟಿಸಿ ರಾಯಚೂರು ವಿಭಾಗವು ಮುನ್ನಚ್ಚರಿಕೆ ಕ್ರಮ ಕೈಗೊಂಡಿದೆ.

ಬಸ್‌ ನಿಲ್ದಾಣಗಳಲ್ಲಿ, ಬಸ್‌ಗಳಲ್ಲಿ ಮತ್ತು ಕಚೇರಿಗಳಲ್ಲಿ ವ್ಯಾಪಕ ಶುಚಿತ್ವ ಅಭಿಯಾನ ಆರಂಭಿಸಿದೆ. ರಾಯಚೂರು ಕೇಂದ್ರ ಬಸ್‌ ನಿಲ್ದಾಣದಲ್ಲಿ ಶುಕ್ರವಾರ ಸ್ವಚ್ಛತೆ ಕಾರ್ಯ ಭರದಿಂದ ನಡೆಯಿತು. ಶುಚಿತ್ವ ಕಾಪಾಡಿಕೊಂಡು ‘ವೈರಸ್‌’ ಮುಕ್ತರಾಗಿ ಕರ್ತವ್ಯ ನಿರ್ವಹಿಸುವ ಕುರಿತು ವಿಶೇಷ ಜಾಗೃತಿ ಸಭೆಗಳನ್ನು ನಡೆಸಲಾಗಿದೆ. ಕಳೆದ ವಾರ ರಾಯಚೂರು ವಿಭಾಗೀಯ ಕಚೇರಿಯಿಂದ ಚಾಲಕರು, ನಿರ್ವಾಹಕರು ಹಾಗೂ ಅಧಿಕಾರಿಗಳಿಗೆಲ್ಲ ಒಟ್ಟು ಒಂದು ಸಾವಿರ ‘ಮುಖಗವುಸು’ಗಳನ್ನು ಉಚಿತವಾಗಿ ವಿತರಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು