ಶುಕ್ರವಾರ, ನವೆಂಬರ್ 27, 2020
22 °C
ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಇಳಿಮುಖ

ಕೊರೊನಾ ಸೋಂಕು ತಡೆಗೆ ಹೆಚ್ಚಿದ ಜಾಗೃತಿ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ದೃಢವಾಗುವ ವರದಿಗಳ ಸಂಖ್ಯೆ ಎರಡಂಕಿಯಿಂದ ಒಂದಂಕಿಗೆ ಇಳಿಮುಖವಾಗಿದ್ದು, ಬಹುತೇಕ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ.

ಜಿಲ್ಲೆಗೆ ಮಹಾರಾಷ್ಟ್ರದಿಂದ ಬಂದಿದ್ದ ಆರು ಜನರಿಗೆ ಮೇ 18 ರಂದು ಕೋವಿಡ್‌ ದೃಢವಾಗಿರುವ ಬಗ್ಗೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಮಾಹಿತಿ ನೀಡಿದ್ದರು. ಆನಂತರ ನಿರಂತರವಾಗಿ ಕೋವಿಡ್‌ ಸೋಂಕಿತರ ಸಂಖ್ಯೆ ಏರುಗತಿಯಾಯಿತು. ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಸಾವುಗಳ ಸಂಖ್ಯೆಯೂ ಗಣನೀಯ ಏರಿಕೆ ಆಗಿತ್ತು. ದಿನವೊಂದಕ್ಕೆ 200 ಕ್ಕೂ ಜನರಿಗೆ ಕೋವಿಡ್‌ ದೃಢವಾದ ವರದಿಗಳು ಬಂದಿದ್ದವು. ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತವು ನಿರಂತರ ಕ್ರಮ ವಹಿಸಿದ್ದರಿಂದ ಏರುಮುಖವಾಗಿದ್ದ ಪ್ರಕರಣಗಳು ಇದೀಗ ನಿಯಂತ್ರಣಕ್ಕೆ ಬಂದಿವೆ.

ಜಿಲ್ಲೆಯಲ್ಲಿ ಇದುವರೆಗೂ 13,375 ಜನರಿಗೆ ಕೋವಿಡ್‌ ದೃಢವಾಗಿದೆ. ಅದರಲ್ಲಿ 13,069 ಜನರು ಗುಣಮುಖರಾಗಿದ್ದಾರೆ. ಇದುವರೆಗೂ ಕೋವಿಡ್‌ನಿಂದ 151 ಜನರು ಮೃತಪಟ್ಟಿದ್ದಾರೆ. ಕೋವಿಡ್‌ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದ ಇಬ್ಬರನ್ನು ಶನಿವಾರ ಓಪೆಕ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಒಟ್ಟು 27 ಜನರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ಪರೀಕ್ಷೆಗಾಗಿ ಗಂಟಲು ದ್ರವ ಮಾದರಿಗಳನ್ನು ಮೊದಲಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಲಾಗುತ್ತಿದೆ. ಈಚೆಗೆ ನೆಗೆಟಿವ್‌ ವರದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಗಮನಾರ್ಹ.

ಸೋಂಕು ನಿಯಂತ್ರಣದಲ್ಲಿ ಇರಿಸಲು ಜಿಲ್ಲಾಡಳಿತವು ಹಲವು ಕ್ರಮಗಳನ್ನು ಮುಂದುವರಿಸಿದೆ. ಜನದಟ್ಟಣೆ ಕಾರ್ಯಕ್ರಮಗಳಿಗೆ ಅನುಮತಿ ನೀಡುತ್ತಿಲ್ಲ. ಅಂತರ ಪಾಲನೆ, ಮಾಸ್ಕ್‌ ಧರಿಸುವುದು ಹಾಗೂ ಸೈನಿಟೈಜೇಷನ್‌ ಮಾಡುವ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಕೊರೊನಾ ಸೋಂಕಿನ ಕಾರಣದಿಂದ ಜಿಲ್ಲೆಯಲ್ಲಿ ಸಾಕಷ್ಟು ಸಾವುಗಳು ಆಗಿರುವುದು ಮತ್ತು ಸೋಂಕಿತರು ಅನುಭವಿಸುವ ಸಂಕಷ್ಟದ ಬಗ್ಗೆ ಜನರಲ್ಲಿ ತಿಳಿವಳಿಕೆ ವ್ಯಾಪಕವಾಗಿದೆ. ಹೀಗಾಗಿ ಸ್ವಯಂ ಪ್ರೇರಣೆಯಿಂದ ಕೋವಿಡ್‌ ನಿಯಮಗಳ ಪಾಲನೆಯೂ ವ್ಯಾಪಾಕವಾಗಿದೆ.

ಜಿಲ್ಲಾ ಪೊಲೀಸರು ಕೂಡಾ ಕೋವಿಡ್‌ ನಿಯಮಗಳನ್ನು ಪಾಲನೆ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೆ, ಮಾಸ್ಕ್‌ ಧರಿಸದೆ ಸಂಚರಿಸುವ ಜನರಿಗೆ ದಂಡ ವಿಧಿಸುತ್ತಿದ್ದಾರೆ. ಸ್ವಯಂ ಕಾಳಜಿ ಇಲ್ಲದಿದ್ದರೂ ಇನ್ನೊಬ್ಬರ ಹಿತದೃಷ್ಟಿಯಿಂದಲಾದರೂ ಮಾಸ್ಕ್‌ ಧರಿಸಬೇಕು ಎನ್ನುವ ತಿಳಿವಳಿಕೆಯು ಮೊದಲಿಗಿಂತಲೂ ಈಗ ಹೆಚ್ಚಾಗಿದೆ. ಆದರೆ, ನೂರಕ್ಕೆ ನೂರರಷ್ಟು ಜನರು ಮಾಸ್ಕ್‌ ಧರಿಸುತ್ತಿಲ್ಲ ಎಂಬುದು ಕೂಡಾ ಸತ್ಯ.

‘ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ ಎನ್ನುವ ಸುದ್ದಿಯಿಂದ ಮೈಮರೆವು ಹೆಚ್ಚಾಗುತ್ತಿದೆ. ಮಾಸ್ಕ್‌ ಧರಿಸುವುದಕ್ಕಿಂತ ಅದೊಂದು ಪ್ರದರ್ಶನ ವಸ್ತುವಾಗಿ ಮಾರ್ಪಡುತ್ತಿದೆ. ಪೊಲೀಸರು ವಿಧಿಸುವ ದಂಡದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕೆಲವರು ಮಾಸ್ಕ್‌ ಧರಿಸುತ್ತಿದ್ದಾರೆ. ಕೊರೊನಾ ಸೋಂಕು ಗುಣಪಡಿಸುವ ಔಷಧಿ ಎಲ್ಲ ಕಡೆಯಲ್ಲೂ ಲಭ್ಯವಾಗುವವರೆಗೂ ನಿಯಮಗಳ ಪಾಲನೆಯನ್ನು ಮುಂದುವರಿಸಲು ಜಿಲ್ಲಾಡಳಿತವು ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ರಾಯಚೂರಿನ ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕ ರಾಘವೇಂದ್ರ ಅವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.