ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ರಾಯಚೂರು ಜಿಲ್ಲೆಯಲ್ಲಿ ತಗ್ಗಿದ ಸಾವು, ಹೆಚ್ಚಿದ ಚೇತರಿಕೆ

ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬರುತ್ತಿದೆ ಮಹಾಮಾರಿ ಸೋಂಕು
Last Updated 15 ಅಕ್ಟೋಬರ್ 2020, 12:38 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಸೋಂಕು ಅಕ್ಟೋಬರ್‌ನಲ್ಲಿ ನಿಯಂತ್ರಣಕ್ಕೆ ಬರುತ್ತಿದ್ದು, ಸಾವುಗಳ ಸಂಖ್ಯೆ ಇಳಿಮುಖವಾಗಿವೆ. ಕೋವಿಡ್‌ನಿಂದ ಚೇತರಿಸಿಕೊಳ್ಳುವವರ ಸಂಖ್ಯೆ ಏರಿಕೆಯಾಗಿದೆ.

ಸೋಂಕು ತಡೆಗಾಗಿ ಸರ್ಕಾರವು ಸೂಚಿಸುವ ಮುನ್ನಚ್ಚರಿಕೆ ಕ್ರಮಗಳನ್ನು ಪಾಲನೆ ಮಾಡುವವರ ಸಂಖ್ಯೆ ಹೆಚ್ಚಳವಾಗಿದೆ. ಮಾಸ್ಕ್‌ ಧರಿಸದಿದ್ದರೆ ದಂಡ ವಿಧಿಸುವಂತೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡ ಬಳಿಕ, ಅಕ್ಟೋಬರ್‌ನಲ್ಲಿ ಕೋವಿಡ್‌ ದೃಢಪಟ್ಟವರ ಸಂಖ್ಯೆಯೂ ಕಾಕತಾಳೀಯ ಎನ್ನುವಂತೆ ಇಳಿಮುಖವಾಗಿದೆ. ಕೋವಿಡ್‌ನಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ರಿಮ್ಸ್‌, ಓಪೆಕ್‌ನಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತಿದ್ದು, ಗುಣಮುಖವಾಗುವವರ ಸಂಖ್ಯೆ ಏರಿಕೆಯಾಗಿದೆ. ಯಾವುದೇ ನಿಟ್ಟಿನಲ್ಲಿ ಪರಿಶೀಲಿಸಿದರೂ ಸದ್ಯ ಕೋವಿಡ್‌ ಸೋಂಕು ನಿಯಂತ್ರಣಕ್ಕೆ ಬರುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ.

ಜಿಲ್ಲೆಯಲ್ಲಿ ಪ್ರತಿದಿನ ಕೋವಿಡ್‌ ದೃಢ ವರದಿಗಳ ಸಂಖ್ಯೆ ಮೂರಂಕಿಗಳಷ್ಟಿತ್ತು. ಅಕ್ಟೋಬರ್‌ನಲ್ಲಿ ಕ್ರಮೇಣ ಕಡಿಮೆಯಾಗಿದ್ದು, ಸದ್ಯ 50 ಕ್ಕಿಂತಲೂ ಕಡಿಮೆ ಪಾಜಿಟಿವ್‌ ಪ್ರಕರಣಗಳು ಪತ್ತೆಯಾಗುತ್ತಿವೆ. ಇದೇ ವೇಳೆ ಕೋವಿಡ್‌ನಿಂದ ಗುಣಮುಖವಾಗುವವರ ಸಂಖ್ಯೆ ಪ್ರತಿದಿನ ಮೂರಂಕಿಯಷ್ಟಿದೆ ಎಂಬುದು ಶುಭ ಸೂಚಕ.

ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 800 ಕ್ಕಿಂತಲೂ ಕಡಿಮೆ ಇದೆ. ಅದರಲ್ಲಿ ರೋಗ ಲಕ್ಷಣಗಳಿರುವ ಜನರು ಶೇ 10 ಕ್ಕಿಂತಲೂ ಕಡಿಮೆ ಇದ್ದಾರೆ. ಇತರೆ ರೋಗಗಳಿಂದ ಬಳಲುವವರನ್ನು ಹಾಗೂ ಉಸಿರಾಟ ತೊಂದರೆ ಕಾಣಿಸಿಕೊಂಡವರನ್ನು ಮಾತ್ರ ರಿಮ್ಸ್‌ ಹಾಗೂ ಓಪೆಕ್‌ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ರೋಗದ ಲಕ್ಷಣಗಳಿಲ್ಲದ ಕೋವಿಡ್‌ ದೃಢವಾದ ಜನರನ್ನು ಆಯಾ ತಾಲ್ಲೂಕುಗಳ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ದಾಖಲು ಮಾಡಿಕೊಳ್ಳಲಾಗುತ್ತದೆ.

ಜೂನ್‌ನಿಂದ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿಕೊಳ್ಳಲಾರಂಭಿಸಿತ್ತು. ಸೋಂಕಿನ ಕುರಿತು ಜನಜಾಗೃತಿ ಕೊರತೆ ಎದ್ದು ಕಾಣುತ್ತಿತ್ತು. ಆದರೆ, ಈಗ ಜನರು ಜಾಗೃತರಾಗಿದ್ದರೂ ಸೋಂಕು ಹರಡುವಿಕೆ ಸೆಪ್ಟೆಂಬರ್‌ನಲ್ಲಿಯೂ ವ್ಯಾಪಕವಾಯಿತು. ಇದೇ ವೇಳೆ, ಸೋಂಕು ಪತ್ತೆ ಕಾರ್ಯಾಚರಣೆಯನ್ನು ಜಿಲ್ಲೆಯಲ್ಲಿ ಮೂರು ಪಟ್ಟು ಹೆಚ್ಚಿಸಲಾಗಿದೆ. ಇದರಿಂದ ಗಂಟಲು ದ್ರವ ಮಾದರಿಗಳ ಸಂಗ್ರಹ, ಪಾಜಿಟಿವ್‌ ಪ್ರಕರಣಗಳು ಹಾಗೂ ಸಾವುಗಳ ಸಂಖ್ಯೆಯೂ ನಿರೀಕ್ಷೆ ಮೀರಿ ಅಧಿಕವಾಗಿದೆ. ಪ್ರತಿಯೊಂದು ಹಂತಗಳಲ್ಲಿ ಕೋವಿಡ್‌ ನಿಯಂತ್ರಣದ ಕ್ರಮಗಳು ಜಾರಿಯಾಗುತ್ತಿವೆ. ವ್ಯಾಪಕ ಕಾರ್ಯಾಚರಣೆಯ ಫಲದಿಂದಾಗಿ ಅಕ್ಟೋಬರ್‌ 1 ರಿಂದ 14 ರವರೆಗೂ ಜಿಲ್ಲೆಯಲ್ಲಿ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಗಣನೀಯ ಕಡಿಮೆಯಾಗಿದೆ. ಸಾವುಗಳು ಇಳಿಮುಖವಾಗಿದ್ದು, ಕೋವಿಡ್‌ ಆಸ್ಪತ್ರೆಗೆ ದಾಖಲಾದವರು ಗುಣಮುಖವಾಗಿ ವಾಪಸಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT