ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳಿತಕ್ಕೆ ಒಳಗಾದವರೆಲ್ಲರೂ ದಲಿತರು: ಸಾಹಿತಿ ಬಾಬು ಭಂಡಾರಿಗಲ್‌ ಹೇಳಿಕೆ

Last Updated 7 ಡಿಸೆಂಬರ್ 2019, 14:22 IST
ಅಕ್ಷರ ಗಾತ್ರ

ರಾಯಚೂರು: ಸಾವಿರಾರು ವರ್ಷಗಳಿಂದ ತುಳಿತಕ್ಕೆ ಒಳಗಾದ ಜನರೆಲ್ಲರೂ ದಲಿತರು ಎಂದು ಸಾಹಿತಿ ಬಾಬು ಭಂಡಾರಿಗಲ್ ಹೇಳಿದರು.

ನಗರದ ನಂದಿನಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನವದೆಹಲಿ ಸಾಹಿತ್ಯ ಅಕಾಡೆಮಿ, ರಾಯಚೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಡಾ.ನರಸಿಂಹಲು ನಂದಿನಿ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ‘ದಲಿತ ಚೇತನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಲಿತ ಎನ್ನುವುದು ಕೇವಲ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸಿಮೀತವಾಗಿಲ್ಲ. ಎಲ್ಲ ಜಾತಿ, ಧರ್ಮಗಳಲ್ಲೂ ದಲಿತರಿದ್ದಾರೆ. ಎಲ್ಲ ರೀತಿಯಿಂದಲೂ ಶೋಷಣೆಗೆ ಒಳಗಾಗಿರುವ ದಲಿತರಿಗೆ ನ್ಯಾಯ ಸಿಗಬೇಕು. ಶೋಷಣೆ ಕೊನೆಯಾಗುವವರೆಗೂ ವಿಶೇಷ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕಾಗುತ್ತದೆ. ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಸಂವಿಧಾನಬದ್ಧವಾಗಿ ನೀಡಿರುವ ಹಕ್ಕುಗಳು ಜಾರಿಯಾಗುವವರೆಗೂ ಮೀಸಲಾತಿ ಮುಂದುವರಿಯಲಿದೆ ಎಂದು ತಿಳಿಸಿದರು.

ದಲಿತ ಸಂಘಟನೆಗಳು ಬ್ರಾಹ್ಮಣರನ್ನು ವಿರೋಧಿಸುವುದಿಲ್ಲ. ಆದರೆ, ಬ್ರಾಹ್ಮಣ್ಯವನ್ನು ವಿರೋಧಿಸುತ್ತಾರೆ. ಮೇಲು–ಕೀಳು ಎನ್ನುವ ಮನುಸ್ಮೃತಿ ವಾದ ಪಾಲನೆ ಮಾಡುವುದಕ್ಕೆ ವಿರೋಧವಿದೆ. ಸಮಾಜದಲ್ಲಿ ಸಮಾನತೆ ಬರಬೇಕು. ಮಾನವೀಯತೆ ಮೇಲುಗೈ ಸಾಧಿಸಬೇಕು. ಸಂವಿಧಾನದ ಆಶಯಗಳು ಜಾರಿಯಾಗಬೇಕು ಎಂದು ಹೇಳಿದರು.

ಸಾಹಿತಿ ವೀರಹನುಮಾನ ಮಾತನಾಡಿ, ಅಂಬೇಡ್ಕರ್ ಕೂಡಾ ಬ್ರಾಹ್ಮಣರ ವಿರೋಧಿಗಳಲ್ಲ, ಬ್ರಾಹ್ಮಣಶಾಹಿತ್ವದ ಮನುಸ್ಮೃತೀಯ ವಿರೋಧಿಗಳು. ಪ್ರಶಿಕ್ಷಣಾರ್ಥಿಗಳು ಹಿಂದಿನ ಇತಿಹಾಸ ಓದಿ ದಲಿತರ ಸ್ಥಿತಿ ಗತಿಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಇತಿಹಾಸದ ಅರಿವಿಲ್ಲದೆ ಯುವಜನಾಂಗ ತಪ್ಪು ಗ್ರಹಿಕೆಗಳನ್ನು ಇಟ್ಟುಕೊಳ್ಳಬಾರದು ಎಂದು ತಿಳಿಸಿದರು.

ಕವಿ ವಿ.ಹರಿನಾಥ ಬಾಬು ಮಾತನಾಡಿ, ದೇಶ ಸ್ವಾತಂತ್ರ್ಯ ಪಡೆದು 70 ವರ್ಷ ಗತಿಸಿದರೂ, ಈ ದೇಶ ಆರ್ಥಿಕ, ಸಾಮಾಜಿಕ ಸಮಾನತೆ ಕಂಡಿಲ್ಲ. ದೇಹದ ಬಣ್ಣ, ಧರಿಸಿದ ವಸ್ತ್ರ, ತಿನ್ನುವ ಆಹಾರ ನೋಡಿ ಜಾತಿ ಭೇದ ಮಾಡುತ್ತಾರೆ. ಮನುಷ್ಯರ ಜೊತೆ ಬದುಕುವುದಕ್ಕಿಂತ ಮನುಷ್ಯತ್ವ ಇರುವವರ ಜೊತೆಗೆ ಬದುಕಬೇಕಿದೆ. ದೇಶದಲ್ಲಿ ಜ್ಯಾತ್ಯತೀತ ಮದುವೆಗಳು ನಡೆಯಲಿ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಶಿಖರಮಠ ಮಾತನಾಡಿದರು.

ಡಾ.ಈರಣ್ಣ ಕೋಸಗಿ, ತಾಯರಾಜ್ ಮರ್ಚಟ್ಹಾಳ್, ಕೋರೆನಲ್, ಈರಣ್ಣ ಬೆಂಗಾಲಿ, ವೇಣು ಜಾಲಿಬೆಂಚಿ ಕಾವ್ಯ ವಾಚನ ಮಾಡಿದರು. ಬಿ.ಇಡಿ ಪ್ರಶಿಕ್ಷಾಣಾರ್ಥಿಗಳು ದಲಿತ ಚೇತನ ವಿಷಯದ ಕುರಿತು ಹಿರಿಯ ಸಾಹಿತಿಗಳೊಂದಿಗೆ ಚರ್ಚೆ ನಡೆಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷ ಚಿದಾನಂದ ಸಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ನರಸಿಂಹಲು ನಂದಿನಿ ಶಿಕ್ಷಣ ಟ್ರಸ್ಟ್ ವ್ಯವಸ್ಥಾಪಕ ಡಾ.ಬಿ.ಮಹಾಲಿಂಗ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT