ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಚಾರಿ ಮಾರ್ಗದಲ್ಲಿ ಕಾದಿದೆ ಅಪಾಯ!

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದೆ ಮಕ್ಕಳ ಕೈಗೆ ಎಟಕುವ ವಿದ್ಯುತ್ ಪರಿವರ್ತಕ
Last Updated 1 ಜುಲೈ 2018, 17:26 IST
ಅಕ್ಷರ ಗಾತ್ರ

ರಾಯಚೂರು: ನಗರದಿಂದ ಮಂತ್ರಾಲಯ ಮಾರ್ಗದ ರಾಮಲಿಂಗೇಶ್ವರ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿಯ ಪಾದಚಾರಿ ಮಾರ್ಗದಲ್ಲಿ ವಿದ್ಯುತ್ ಪರಿವರ್ತಕವೊಂದು ಅಪಾಯ ಅಹ್ವಾನಿಸುವಂತಿದೆ.

ಐಬಿ ಕಾಲೋನಿಯಲ್ಲಿ ಲೋಕೋಪಯೋಗಿ ಇಲಾಖೆಯು ಸರ್ಕಾರಿ ಅಧಿಕಾರಿಗಳಿಗಾಗಿ ನಿರ್ಮಿಸಿರುವ ಬಡಾವಣೆಯು ಈ ಅಪಾಯಕಾರಿ ವಿದ್ಯುತ್ ಪರಿವರ್ತಕಕ್ಕೆ ಹೊಂದಿಕೊಂಡಿದೆ. ಹೆದ್ದಾರಿಯ ಇನ್ನೊಂದು ಭಾಗದಲ್ಲಿ ಬಡವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಇಂದಿರಾ ನಗರವಿದೆ. ಈ ಪಾದಚಾರಿ ಮಾರ್ಗದಲ್ಲಿ ಮಕ್ಕಳು ಸೇರಿದಂತೆ ಸದಾ ಜನನಿಬಿಡ ಇರುತ್ತದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮಾಡುವಾಗ ಪಾದಚಾರಿ ಮಾರ್ಗದಲ್ಲಿ ವಿದ್ಯುತ್ ಪರಿವರ್ತಕ ಉಳಿದುಕೊಂಡಿದೆ. ಕಳೆದ ಫೆಬ್ರುವರಿಯಲ್ಲಿ ರಸ್ತೆ ಉದ್ಘಾಟನೆ ಮಾಡಲಾಗಿದ್ದರೂ ಈ ಅಪಾಯಕಾರಿ ಪರಿವರ್ತಕ ಸ್ಥಳಾಂತರಿಸುವ ಕೆಲಸ ಮಾತ್ರ ಹಾಗೇ ಉಳಿದುಕೊಂಡಿದೆ.

ನೆಲದಿಂದ ಕೇವಲ ಮೂರು ಅಡಿ ಎತ್ತರದಲ್ಲಿ ವಿದ್ಯುತ್ ಪರಿವರ್ತಕವಿದ್ದು, ದೊಡ್ಡವರು ಅಥವಾ ಮಕ್ಕಳು ಸ್ವಲ್ಪ ಮೈಮರೆತು ಅದರ ಪಕ್ಕದಲ್ಲಿ ನಡೆದುಕೊಂಡು ಹೋದರೆ; ಜೀವ ಕಳೆದುಕೊಳ್ಳಬೇಕಾಗುತ್ತದೆ. ಮಳೆಗಾಲದಲ್ಲಿ ಅಪಾಯವು ಇನ್ನೂ ಹೆಚ್ಚಿಗಿರುತ್ತದೆ.

ಹೆದ್ದಾರಿ ಪಕ್ಕ ರಾಮಲಿಂಗೇಶ್ವರ ದೇವಸ್ಥಾನ ಮೈದಾನದ ಒಂದು ಮೂಲೆಯಲ್ಲಿ ವಿದ್ಯುತ್ ಪರಿವರ್ತಕ ಸ್ಥಳಾಂತರ ಮಾಡಿಕೊಡುತ್ತೇವೆ. ಇದಕ್ಕಾಗಿ ನಗರಸಭೆಯಿಂದ ಅನುಮತಿ ಪಡೆಯಲಾಗುವುದು ಎಂದು ಜೆಸ್ಕಾಂ ಅಧಿಕಾರಿಗಳು ಭರವಸೆ ನೀಡಿ ಅನೇಕ ತಿಂಗಳುಗಳಾಗಿದೆ. ಅಪಾಯ ತಪ್ಪಿಸಲು ಕನಿಷ್ಠ ವಿದ್ಯುತ್ ಪರಿವರ್ತಕಕ್ಕೆ ಸುರಕ್ಷತಾ ಬೇಲಿ ಅಳವಡಿಸುತ್ತಿಲ್ಲ.

'ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಪರಿವರ್ತಕ ಬಳಿ ಮಕ್ಕಳು ಹಾಗೂ ದೊಡ್ಡವರು ತಿರುಗಾಡುತ್ತಾರೆ. ಆಕಸ್ಮಿಕವಾಗಿ ಕೈ ಸ್ಪರ್ಶವಾದರೆ ಜೀವ ಕಳೆದುಕೊಳ್ಳಬೇಕಾಗುತ್ತದೆ. ಮಳೆಗಾಲದಲ್ಲಿ ಈ ರೀತಿಯ ಅಪಾಯ ಹೆಚ್ಚಾಗಿದೆ. ಯಾರಾದರೂ ಜೀವ ಕಳೆದುಕೊಳ್ಳುವ ತನಕ ಕಾಯಬಾರದು.

ತುರ್ತಾಗಿ ವಿದ್ಯುತ್ ಪರಿವರ್ತಕ ಸ್ಥಳಾಂತರಿಸಿ, ಅಪಾಯ ತಪ್ಪಿಸಬೇಕು. ಈ ಬಗ್ಗೆ ದೂರು ಬರೆದು ಐಬಿ ಕಾಲೋನಿಯಲ್ಲಿರುವ ನ್ಯಾಯಾಧೀಶರೊಬ್ಬರ ಸಹಿ ಹಾಕಿಸಿ, ಜೆಸ್ಕಾಂ ಕಚೇರಿಗೆ ಕೊಟ್ಟಿದ್ದೇವೆ. ಆದರೂ ಜೆಸ್ಕಾಂ ಅಧಿಕಾರಿಗಳು ಕಣ್ಣು ತೆರೆಯುತ್ತಿಲ್ಲ' ಎಂದು ವಿದ್ಯುತ್ ಪರಿವರ್ತಕದ ಬಳಿ ಪ‌ಂಕ್ಚರ್ ಶಾಪ್ ಇಟ್ಟಿರುವ ಖಾಜಾ ಮೊಯಿನುದ್ದೀನ್ ಆರೋಪಿಸಿದರು.

ವಿದ್ಯುತ್ ಪರಿವರ್ತಕ ಸ್ಥಳಾಂತರ ಮಾಡುವಂತೆ ಜೆಸ್ಕಾಂ ಕಚೇರಿಗೆ ಮನವಿ ಕೊಡುವಾಗ ಸಕಾರಾತ್ಮಕವಾಗಿ ಮಾತನಾಡಿದ್ದರು. ಅನೇಕ ತಿಂಗಳಾದರೂ ಕೆಲಸ ಮಾಡಿಸಿಲ್ಲ.
- ಖಾಜಾ ಮೊಯಿನುದ್ದೀನ್,ಪಂಕ್ಚರ್ ಶಾಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT