ಶನಿವಾರ, ಮೇ 28, 2022
24 °C
ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಭೂಮಿ ದಾಖಲೆ ಜಾಗೃತಿಯಿಂದ ಪರಿಶೀಲಿಸಿ: ಡಾ.ಅವಿನಾಶ ಮೆನನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಯಲ್ಲಿ ವಾಸಿಸುತ್ತಿರುವ ಹಾಗೂ ಸಾಗುವಳಿ ಮಾಡುತ್ತಿರುವವರ ದಾಖಲೆಗಳನ್ನು ಜಾಗೃತಿಯಿಂದ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ್‌ ಮೆನನ್‌ ಸೂಚಿಸಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಭೂಮಿ ಮತ್ತು ವಸತಿ ರಹಿತರಿಗೆ ಪಟ್ಟಾ ಹಾಗೂ ಹಕ್ಕುಪತ್ರ ವಿತರಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರಿ ಜಮೀನುಗಳಲ್ಲಿ ಇರುವವರಿಗೆ ಪಟ್ಟಾ ನೀಡುವುದಕ್ಕೆ ದಾಖಲೆಗಳನ್ನು ಪರಿಶೀಲಿಸುವಾಗ ಅಧಿಕಾರಿಗಳು ಸೂಕ್ಷ್ಮವಾಗಿರಬೇಕು. ಯಾವುದೇ ತಪ್ಪುಗಳು ಆಗದಂತೆ ಪರಿಶೀಲನೆ ಕೈಗೊಂಡು ಹಕ್ಕುಪತ್ರ ಸಿದ್ಧಪಡಿಸಬೇಕಾಗುತ್ತದೆ ಎಂದು ಹೇಳಿದರು.

ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದವರಿಗೆ ವಸತಿ ಉದ್ದೇಶ ಮತ್ತು ಸಾಗುವಳಿ ಮಾಡುತ್ತಿರುವ ಜಮೀನಿನ ಖಾತಾ ದಾಖಲಾತಿಗಳು ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಖಾತಾ ಹೊಂದಿರದ ಜಮೀನುಗಳಿಗೆ ಪಟ್ಟಾ ನೀಡುವಂತಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಗೋಮಾಳ, ಪರಂಪೋಕು, ಇನಾಂ, ಅರಣ್ಯ ಮತ್ತಿತರೆ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿದ್ದಾರೆ, ನಿವೇಶನ ರಹಿತರಿದ್ದಾರೆ. ಇಂಥವರ ಅರ್ಜಿಗಳನ್ನು ಕೂಲಂಕಷ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು