ಬುಧವಾರ, ಮಾರ್ಚ್ 29, 2023
32 °C
ಸಿಂಧನೂರು ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿ ಖರೀದಿ ಜೋರು

ಬೆಳಕಿನ ಹಬ್ಬ ಆಚರಣೆಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸಲು ಸಿಂಧನೂರು ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಜನತೆ ಭರದ ಸಿದ್ಧತೆ ನಡೆಸಿದ್ದು, ಇದಕ್ಕಾಗಿ ದೀಪಾವಳಿಯ ನರಕ ಚತುರ್ದಶಿ ದಿನವಾದ ಬುಧವಾರ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಜೋರಾಗಿತ್ತು.

ದಿನದಿಂದ ದಿನಕ್ಕೆ ದಿನಬಳಕೆ ವಸ್ತುಗಳು ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ದೀಪಾವಳಿ ಹಬ್ಬಕ್ಕಾಗಿ ಹೂವು, ಹಣ್ಣು, ಮಕ್ಕಳಿಗೆ ಪಟಾಕಿ, ಬಣ್ಣ ಬಣ್ಣದ ಆಕಾಶ ಬುಟ್ಟಿ, ದೀಪಾಲಂಕಾರ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿರುವ ನಾಗರಿಕರು ಮೂರು ದಿನ ಹಬ್ಬದ ಭರ್ಜರಿ ಆಚರಣೆಗಾಗಿ ತಮ್ಮ ಶಕ್ತಾನುಸಾರ ಖರೀದಿಸುತ್ತಿರುವುದು ನಗರದ ಕನಕದಾಸ ವೃತ್ತ, ಕಿತ್ತೂರುರಾಣಿ ಚನ್ನಮ್ಮ ವೃತ್ತ, ಮಹಾತ್ಮಗಾಂಧಿ ವೃತ್ತ, ಬಸವೇಶ್ವರ ವೃತ್ತ, ಸುಕಾಲಪೇಟೆ ರಸ್ತೆ, ಸಾರ್ವಜನಿಕ ಆಸ್ಪತ್ರೆ ಹಾಗೂ ಕೋರ್ಟ್ ಮುಂಭಾಗ ಸೇರಿದಂತೆ ಮತ್ತಿತರ ಪ್ರಮುಖ ರಸ್ತೆಗಳಲ್ಲಿ ಕಂಡು ಬಂದಿತು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೂವಿನ ಬೆಲೆ ತೀವ್ರ ದುಬಾರಿಯಾಗಿದೆ. ಕನಕಾಂಬರ, ಮಲ್ಲಿಗೆ, ಸೇವಂತಿ ಒಂದು ಮಾರಿಗೆ ₹ 100 ರಿಂದ ₹ 120ಗೆ ಮಾರಾಟವಾಗುತ್ತಿದೆ. ಗುಲಾಬಿ ಕೆ.ಜಿ ₹ 200, ಚೆಂಡು ಹೂ ಕೆ.ಜಿ.ಗೆ ₹ 180 ಮಾರಾಟವಾಗುತ್ತಿದೆ. ಒಂದು ಜೊತೆ ಬಾಳೆ ಕಂದಿಗೆ ₹ 50, ಮಾವಿನ ಸೊಪ್ಪು ಕಟ್ಟ್ಪಿಗೆ ₹ 20 ಇದ್ದರೂ ಜನ ಖರೀದಿಗೆ ಮುಗಿಬಿದ್ದಿದ್ದಾರೆ.

ಒಂದು ಡಜನ್ ಬಾಳೆಹಣ್ಣು ₹ 30 ರಿಂದ ₹ 50, ಒಂದು ಕೆಜಿ ಸೇಬು, ಮೋಸಂಬಿ, ದಾಳಿಂಬೆ, ಸೀತಾಫಲ, ಸಪೋಟಾ ₹ 100 ರಿಂದ ₹ 120, ದ್ರಾಕ್ಷಿ ₹ 80 ಹೀಗೆ ಎಲ್ಲಾ ಹಣ್ಣುಗಳ ಬೆಲೆಗಳು ದುಬಾರಿಯಾಗಿವೆ. ಸಾಮಾನ್ಯ ಬಡ ಕುಟುಂಬಗಳು ಖರೀದಿ ಮಾಡಲಾರದಂತಹ ಸ್ಥಿತಿ ಬಂದೊದಗಿದೆ.

ಇದರ ಜತೆಗೆ ದಿನಸಿ ಬೆಲೆಗಳು ದುಪ್ಪಟ್ಟಾಗಿದ್ದು, ಟೊಮೆಟೊ ಹೊರತುಪಡಿಸಿ ತರಕಾರಿ ಬೆಲೆಯೂ ಏರಿಕೆಯಾಗಿದೆ. ಈ ಬೆಲೆ ಏರಿಕೆ ನಡುವೆ ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಸಿದ್ಧತೆ ನಡೆದಿದೆ.

ಬೆಲೆ ಎಷ್ಟೇ ಏರಿಕೆಯಾದರೂ ಹಬ್ಬದ ತಯಾರಿ ಏನು ಕಡಿಮೆಯಾಗಿಲ್ಲ. ವರ್ಷಕ್ಕೊಮ್ಮೆ ಬರುವ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಲು ಗ್ರಾಹಕರು ಮಾರುಕಟ್ಟೆ ಸೇರಿದಂತೆ ಅಂಗಡಿ ಮುಗ್ಗಟ್ಟುಗಳಲ್ಲಿ ಹಬ್ಬಕ್ಕೆ ಬೇಕಿರುವ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ.

ಪಟಾಕಿಗೆ ಬೇಡಿಕೆ ಕಡಿಮೆ: ಈ ಬಾರಿ ದೀಪಾವಳಿ ಹಬ್ಬದಲ್ಲಿ ನಾಗರಿಕರು ಪಟಾಕಿ ಕೊಳ್ಳುವುದರಲ್ಲಿ ಸ್ವಲ್ಪ ಕಡಿಮೆಯಾಗಿದ್ದು, ಪರಿಸರ ಸಂರಕ್ಷಣೆಗಾಗಿ ಪಟಾಕಿ ಸಿಡಿಸಲು ಹಿಂಜರಿಕೆ ಕಂಡು ಬಂದಿದೆ. ನಗರದ ಜೈನ್ ಕಲ್ಯಾಣ ಮಂಟಪದಲ್ಲಿ ಪಟಾಕಿ ಮಾರಾಟ ಮಾಡುವ ಅಂಗಡಿಗಳನ್ನು ನಗರಸಭೆ ಅನುಮತಿ ಪಡೆದು ಹಾಕಲಾಗಿದೆ. ಆದರೆ ಪಟಾಕಿ ಖರೀದಿಸುವವರ ಸಂಖ್ಯೆ ವಿರಳವಾಗಿದೆ. ಆದರೂ ಸಹ ಕೆಲವರು ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬದಲ್ಲಿ ಪಟಾಕಿ ಹೊಡೆಯಲೇ ಬೇಕು ಎಂದು ತೀರ್ಮಾನಿಸಿದ್ದು, ಅಂತಹವರು ಪಟಾಕಿ ಕೊಳ್ಳಲು ಮುಂದಾಗಿದ್ದಾರೆ.

ಮಣ್ಣಿನ ಹಣತೆಗಳಿಗೆ ಹೆಚ್ಚಿದ ಬೇಡಿಕೆ

ಸಿಂಧನೂರು: ದೀಪಾವಳಿ ಹಬ್ಬಕ್ಕಾಗಿ ಮಣ್ಣಿನಿಂದ ಮಾಡಿದ ವಿಭಿನ್ನ ರೀತಿಯ ಅಲಂಕಾರಿಕ ದೀಪಗಳನ್ನು ನಗರದ ಪ್ರಮುಖ ಜನಸಂದಣಿ ಪ್ರದೇಶಗಳಲ್ಲಿ ಮಾರಾಟಕ್ಕಿಡಲಾಗಿದೆ.

 ಮಣ್ಣಿನ ಸಣ್ಣ ದೀಪಗಳು ₹ 10ಕ್ಕೆ ನಾಲ್ಕರಂತೆ ಮಾರಾಟವಾಗುತ್ತಿವೆ. ಕಲರ್ ಕೋಟೆಡ್ ಮಣ್ಣಿನ ದೀಪಕ್ಕೆ ಬೆಲೆ ಹೆಚ್ಚು. ಸಾಮಾನ್ಯ ಹಣತೆ ಡಜನ್‍ಗೆ  ₹ 40 ರಿಂದ ₹ 80, ವಿವಿಧ ಕಲಾಕೃತಿಯ ದೀಪಗಳಿಗೆ ₹ 100 ರಿಂದ ₹ 400 ವರೆಗೆ ಬೆಲೆ ನಿಗದಿ ಪಡಿಸಲಾಗಿದೆ. ಮಣ್ಣಿನ ದೀಪದಿಂದ ಮನೆ ಬೆಳಗಿದರೆ ಮನೆಗೆ ಶ್ರೇಯಸ್ಸು ಎಂಬ ಮಾತಿರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದ್ದು, ಸಾರ್ವಜನಿಕರು ತಮಗೆ ಬೇಕಿರುವ ಆಕಾರದ ದೀಪಗಳನ್ನು ಖರೀದಿಸಿದ್ದು ಕಂಡು ಬಂದಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು