ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವು– ಹಣ್ಣುಗಳ ಮಾರಾಟ ಜೋರು

ಅಂಗಡಿ, ಮನೆಗಳಲ್ಲಿ ಮಹಾಲಕ್ಷ್ಮಿ ದೇವಿ ಪೂಜೆಗೆ ಸಿದ್ಧತೆ
Last Updated 4 ನವೆಂಬರ್ 2021, 10:25 IST
ಅಕ್ಷರ ಗಾತ್ರ

ಮಸ್ಕಿ: ಕೋವಿಡ್‌ನಿಂದ ಎರಡು ವರ್ಷದಿಂದ ಮಹತ್ವ ಕಳೆದುಕೊಂಡಿದ್ದ ಬೆಳಕಿನ ಹಬ್ಬ ದೀಪಾವಳಿ ಕೋವಿಡ್ ನಿಯಮ ಸಡಿಲಿಕೆ ಹಾಗೂ ಬೆಲೆ ಏರಿಕೆಯ ನಡುವೆಯೂ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲು ಪಟ್ಟಣದಲ್ಲಿ ಸಕಲ ಸಿದ್ಧತೆಗಳು ನಡೆಯತೊಡಗಿವೆ.

ದೀಪಾವಳಿ ಅಮಾವಾಸ್ಯೆ ಹಾಗೂ ಪಾಡ್ಯದಂದು ತಮ್ಮ ತಮ್ಮ ವ್ಯವಹಾರದ ಅಂಗಡಿಗಳಲ್ಲಿ ಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಮಾಡುವ ಮೂಲಕ ದೀಪಾವಳಿ ಆಚರಿಸಲು ವ್ಯಾಪಾರಸ್ಥರು ಹಾಗೂ ವಾಣಿಜ್ಯೋದ್ಯಮಿಗಳು ತಯಾರಿ ನಡೆಸಿದ್ದಾರೆ.

ಅಂಗಡಿಗಳಿಗೆ ಸುಣ್ಣ ಬಣ್ಣ ಬಳಿದು, ತಳೀರು ತೋರಣ ಕಟ್ಟುವ ಮೂಲಕ ಮಹಾಲಕ್ಷ್ಮಿ ದೇವಿ ಪೂಜೆಗೆ ಸಿದ್ಧತೆ ನಡೆಸಿದ್ದಾರೆ.

ದೀಪಾವಳಿ ಆಚರಣೆ ಹಿನ್ನೆಲೆಯಲ್ಲಿ ಪಟ್ಟಣದ ಮಾರುಕಟ್ಟೆಯಲ್ಲಿ ಈಗಾಗಲೇ ಬಗೆ ಬಗೆ ಹೂವು– ಹಣ್ಣುಗಳು, ಬಾಳೆ ದಿಂಡು ಸೇರಿದಂತೆ ಅನೇಕ
ಪೂಜಾ ಸಾಮಾಗ್ರಿಗಳ ಮಾರಾಟ ಜೋರಾಗಿದೆ.

ಹಳೆ ಬಸ್ ನಿಲ್ದಾಣದಲ್ಲಿ ಹಣ್ಣು ಹಾಗೂ ಹೂವಿನ ಮಾರುಕಟ್ಟೆ ಅಂಗಡಿಗಳು ಅಲಂಕಾರ ಮಾಡಿಕೊಂಡು ಗ್ರಾಹಕರ ಬೇಡಿಕೆಗೆ ತಕ್ಕಂತೆ ಪೂರೈಸಲು ಸಿದ್ಧಗೊಂಡಿವೆ.

ಚೆಂಡು ಹೂವು, ಸೇವಂತಿಗೆ, ಮಲ್ಲಿಗೆ, ಕನಕಾಂಬರಿ ಹೂವು ಸೇರಿದಂತೆ ವಿವಿಧ ತಳಿಯ ಹೂವುಗಳು ಮಾರಾಟದ ಅಂಗಡಿಯಲ್ಲಿ ಕಂಡು ಬರುತ್ತಿವೆ. ಪ್ರತಿ ಕೆಜಿ ಚೆಂಡು ಹೂವಿಗೆ ₹ 80 ರಿಂದ ₹ 100 ಕ್ಕೆ ಮಾರಾಟ ಮಾಡಲಾಗುತ್ತಿದೆ.

ಅಲಂಕಾರಕ್ಕಾಗಿ ಬಾಳೆ ದಿಂಡು ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದರೆ, ಅಂಗಡಿ ಹಾಗೂ ವಾಹನಗಳ ಮುಂದೆ ಹೊಡೆಯಲು ಕರಿ ಕುಂಬಳಕಾಯಿ ಮಾರಾಟ ಭರ್ಜರಿಯಾಗಿ ನಡೆದಿದೆ. ಒಂದು ಕುಂಬಳಕಾಯಿ ಬೆಲೆ ₹ 100 ರಿಂದ ₹ 150 ರವರೆಗೆ ಮಾರಾಟ ಮಾಡುತ್ತಿದೆ.

ಬಾಳೆ ಹಣ್ಣು ಸೇರಿದಂತೆ ವಿವಿಧ ಹಣ್ಣುಗಳು ಕೂಡಾ ಮಾರುಕಟ್ಟೆಗೆ ಪ್ರವೇಶ ಮಾಡಿವೆ.

ಎರಡು ವರ್ಷಗಳ ಕೋವಿಡ್‌ನಿಂದ ಲಾಕ್ ಆಗಿದ್ದ ದೀಪಾವಳಿ ಈ ಸಾರಿ ಸಡಗರ ಸಂಭ್ರಮದಿಂದ ನಡೆಯುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ.

‘ಕೊರೊನಾ ನಿಯಮ ಸಡಿಲಿಕೆಯಿಂದಾಗಿ ಈ ಸಾರಿ ದೀಪಾವಳಿ ದಿನದಂದು ಲಕ್ಷ್ಮೀ ಪೂಜೆ ಸಡಗರದಿಂದ ನಡೆಯಲಿದೆ ಎಂಬ ವಿಶ್ವಾಸ ಇದೆ. ಇದರಿಂದ ನಮ್ಮ ವ್ಯಾಪಾರ ಕೂಡಾ ಚೆನ್ನಾಗಿ ಆಗಬಹುದು‘ ಎಂದು ಹಣ್ಣಿನ ವ್ಯಾಪಾರಿ ರವಿಕುಮಾರ ಹೇಳುತ್ತಾರೆ.

ಜೂಜಾಟ ನಿಷೇಧ

ಮಸ್ಕಿ: ದೀಪಾವಳಿ ಆಚರಣೆ ಸಂದರ್ಭದಲ್ಲಿ ತಾಲ್ಲೂಕಿನಾದ್ಯಂತ ಜೂಜಾಟವನ್ನು ನಿಷೇಧಿಸಲಾಗಿದೆ ಎಂದು ಸಿಪಿಐ ಸಂಜೀವ್ ಬಳಿಗಾರ ತಿಳಿಸಿದ್ದಾರೆ.

ಅಂಗಡಿ, ಹೊಟೇಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜೂಜಾಟ ಕಂಡು ಬಂದರೆ ಅಂತವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಈಗಾಗಲೇ ತಾಲ್ಲೂಕಿನಾದ್ಯಂತ ಜೂಜಾಟ ನಿಷೇಧಿಸಿರುವ ಬಗ್ಗೆ ಸಾರ್ವಜನಿಕರಿಗೆ ಡಂಗೂರ ಬಾರಿಸುವ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದರು.

ದೀಪಾವಳಿ ಆಚರಣೆ ಸಂದರ್ಭದಲ್ಲಿ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT