ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಸಕಾಲದಲ್ಲಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ’

ಪಶು ಸಂಗೋಪನೆ, ರೇಷ್ಮೆ ಸಚಿವ ಕೆ.ವೆಂಕಟೇಶ ತಾಕೀತು
Published 28 ಜೂನ್ 2024, 16:23 IST
Last Updated 28 ಜೂನ್ 2024, 16:23 IST
ಅಕ್ಷರ ಗಾತ್ರ

ರಾಯಚೂರು: ‘ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಸಕಾಲದಲ್ಲಿ ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ನೆಪಗಳನ್ನು ಹೇಳುತ್ತ ಕುಳಿತುಕೊಳ್ಳಬಾರದು‘ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ ತಾಕೀತು ಮಾಡಿದರು.

ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕಲಬುರಗಿ ವಿಭಾಗದ ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

‘ರೇಷ್ಮೆಗೂಡುಗಳ ಬೆಲೆ ಮೊಬೈಲ್‌ನಲ್ಲೇ ಸುಲಭವಾಗಿ ದೊರಕುತ್ತದೆ. ಯಾವ ಜಿಲ್ಲೆಯಲ್ಲಿ ಯಾವ ಪ್ರದೇಶದಲ್ಲಿ ರೇಷ್ಮೆಗೆ ಉತ್ತಮ ಬೆಲೆ ದೊರೆಯುತ್ತಿದೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳು ಪ್ರತಿನಿತ್ಯ ತಿಳಿದುಕೊಳ್ಳಬೇಕು. ಸಾಧಕ ರೇಷ್ಮೆ ಬೆಳೆಗಾರರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಿ ರೈತರು ರೇಷ್ಮೆ ಬೆಳೆಯಲು ಉತ್ತೇಜಿಸಬೇಕು. ರಾಮನಗರ, ಕೋಲಾರ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ರೈತರು ಹೆಚ್ಚಾಗಿ ರೇಷ್ಮೆ ಬೆಳೆಯುತ್ತಿದ್ದಾರೆ. ಕಲಬುರಗಿ ವಿಭಾಗದ ಜಿಲ್ಲೆಯಲ್ಲಿ ಮಾತ್ರ ಮಾಹಿತಿ ಕೊರತೆಯಿಂದ ರೇಷ್ಮೆ ಬೆಳೆಗಳ ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳು ರೈತರಿಗೆ ಮಾರ್ಗದರ್ಶನ ನೀಡಬೇಕು’ ಎಂದು ಸಚಿವರು ಸೂಚಿಸಿದರು.

‘ರಾಯಚೂರು ಜಿಲ್ಲೆಯಲ್ಲಿ ಕೃಷಿಯೇ ಪ್ರದಾನವಾಗಿದೆ. ಗುಣಮಟ್ಟದ ರೇಷ್ಮೆ ಉತ್ಪಾದನೆ ಮಾಡಲು ಸಾಧ್ಯವಿದೆ. ಈ ದಿಸೆಯಲ್ಲಿ ರೈತರಲ್ಲಿ ಜಾಗೃತಿ ಮೂಡಿಸಬೇಕು‘ ಎಂದು ಸೂಚನೆ ನೀಡಿದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ‘ಜಿಲ್ಲೆಯಲ್ಲಿ ರೇಷ್ಮೆ ಬೆಳೆಗೆ ಪೂರಕವಾದ ವಾತಾವರಣವಿದೆ. ನರೇಗಾದಲ್ಲಿ ರೈತರಿಗೆ ಅನುಕೂಲ ಕಲ್ಪಿಸಲು ಅವಕಾಶಗಳು ಇವೆ. ಆದರೆ, ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ಮಾಡದ ಕಾರಣ ಯೋಜನೆಗಳು ಜನರಿಗೆ ತಲುಪುತ್ತಿಲ್ಲ. ಅಧಿಕಾರಿಗಳು ಕೇವಲ ಕಚೇರಿಗೆ ಬಂದು ಹೋಗುವುದಲ್ಲ. ಸರ್ಕಾರದ ಋಣ ತೀರಿಸಲಾದರೂ ರೈತರಿಗೆ ಯೋಜನೆಗಳ ಮಾಹಿತಿ ನೀಡಬೇಕು‘ ಎಂದು ಹೇಳಿದರು.

‘ಸೆಪ್ಟೆಂಬರ್‌ ಅಂತ್ಯಕ್ಕೆ ಜಾನುವಾರು ಲಸಿಕೆ ಪೂರ್ಣಗೊಳಿಸಿ’: ‘ಪಶು ಸಂಗೋಪನೆ ಇಲಾಖೆಯ ಎಲ್ಲ ಅಧಿಕಾರಿಗಳು ಸೆಪ್ಟೆಂಬರ್‌ ಅಂತ್ಯಕ್ಕೆ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯವನ್ನು ಪೂರ್ಣಗೊಳಿಸಬೇಕು‘ ಎಂದು ರೇಷ್ಮೆ ಸಚಿವ ಕೆ.ವೆಂಕಟೇಶ ನಿರ್ದೇಶನ ನೀಡಿದರು.

‘ಕಲಬುರಗಿ ವಿಭಾಗದ ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಜಾನುವಾರುಗಳ ಲಸಿಕಾ ಕಾರ್ಯಕ್ರಮಗಳನ್ನು ತೀವ್ರಗೊಳಿಸಬೇಕು. ಶೇ 100 ರಷ್ಟು ಸಾಧನೆ ಮಾಡಬೇಕು‘ ಎಂದು ಸೂಚಿಸಿದರು.

‘ಜಾನುವಾರುಗಳಿಗೆ ಔಷಧಿ ಲಭ್ಯತೆ, ವೈದ್ಯಕೀಯ ಸೌಲಭ್ಯ, ಸಂಚಾರಿ ಪಶು ಚಿಕಿತ್ಸಾ ವಾಹನಗಳ ನಿರ್ವಹಣೆ, ಲಸಿಕೆ, ಮೇವು ಸಂಗ್ರಹಣೆ ಸೇರಿದಂತೆ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು‘ ಎಂದು ಹೇಳಿದರು.

ಪಶು ಪಾಲನೆ ಇಲಾಖೆಯ ಆಯುಕ್ತೆ ರೂಪಾ, ನಿರ್ದೇಶಕ ಡಾ.ಮಂಜುನಾಥ ಪಾಳೆಗಾರ, ಹೆಚ್ಚುವರಿ ನಿರ್ದೇಶಕ ಡಾ.ಪ್ರಸಾದ ಮೂರ್ತಿ, ಪ್ರಭಾರ ಜಂಟಿ ನಿರ್ದೇಶಕ ಡಾ.ಅಶೋಕ ಕೋಲಕಾರ, ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ, ರೇಷ್ಮೆ ಇಲಾಖೆಯ ಹೆಚ್ಚುವರಿ ನಿರ್ದೇಶಕ ವೈ.ಟಿ.ತಿಮ್ಮಯ್ಯ, ಕಲಬುರಗಿ ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ನಾಗಪ್ಪ ಬಿರಾದಾರ್, ಯಾದಗಿರಿ ಅಬ್ದುಲ್ ನಹೀಂ, ಬೀದರ್‌ನ ರಾಜೇಂದ್ರ ದೇವದುರ್ಗ, ರಾಯಚೂರಿನ ಎನ್.ಸಿ.ಚಂದ್ರಪ್ಪ, ಕೊಪ್ಪಳದ ಡಾ.ಎಸ್.ಸುಂದರಾಜ್, ವಿಜಯನಗರ ಹಾಗೂ ಬಳ್ಳಾರಿ ವಿ.ಸುಧೀರ್, ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರು, ರೇಷ್ಮೆ ಇಲಾಖೆಯ ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರು ಉಪಸ್ಥಿತರಿದ್ದರು.

ರಾಯಚೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕಲಬುರಗಿ ವಿಭಾಗದ ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಅಧಿಕಾರಿಗಳು ಪಾಲ್ಗೊಂಡಿದ್ದರು.
ರಾಯಚೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕಲಬುರಗಿ ವಿಭಾಗದ ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಅಧಿಕಾರಿಗಳು ಪಾಲ್ಗೊಂಡಿದ್ದರು.
ರಾಯಚೂರು ನಗರದಲ್ಲಿ ಬೀದಿ ದನಗಳು ನಾಯಿ ಹಾಗೂ ಹಂದಿಗಳ ಹಾವಳಿ ತಡೆಯಲು ಕ್ರಮ ಕೈಗೊಳ್ಳಬೇಕು.
– ಡಾ.ಶಿವರಾಜ ಪಾಟೀಲ, ರಾಯಚೂರು ನಗರ ಶಾಸಕ

ಜಂಟಿ ನಿರ್ದೇಶಕರಿಗೆ ತರಾಟೆ

‘ಅತಿ ಹೆಚ್ಚು ಕೃಷಿ ಕ್ಷೇತ್ರವನ್ನು ಹೊಂದಿರುವ ಜಿಲ್ಲೆಗಳಲ್ಲಿ ರೇಷ್ಮೆ ಇಲಾಖೆ ಯೋಜನೆಗಳ ಪ್ರಚಾರ ಕಾರ್ಯವನ್ನು ತೀವ್ರಗೊಳಿಸಬೇಕು. ಆದರೆ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕರಿಗೆ ಸರಿಯಾಗಿ ಮಾಹಿತಿ ಇಲ್ಲ. ಹೀಗಾದರೆ ಕೆಳ ಹಂತದ ಅಧಿಕಾರಿಗಳು ಹೇಗೆ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಸಾಧ್ಯ‘ ಎಂದು ಜಂಟಿ ನಿರ್ದೇಶಕರನ್ನೇ ತರಾಟೆಗೆ ತೆಗೆದುಕೊಂಡರು.

‘ಪಶು ವೈದ್ಯರ ನೇಮಕಾತಿ’

‘ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಇಲಾಖೆಯಲ್ಲಿ ಹಂತ ಹಂತವಾಗಿ 10000 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಪ್ರಸ್ತುತ 400 ಪಶು ವೈದ್ಯರ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ’ ಎಂದು ತಿಳಿಸಿದರು.

‘ಡಿ-ದರ್ಜೆ ನೌಕರರಿಂದ ಹಿಡಿದು ಅಧಿಕಾರಿಗಳವರೆಗೆ 18000ಸಿಬ್ಬಂದಿ ಬೇಕಿದೆ. ಪ್ರಸ್ತುತ 9000 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಶು ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳ ಕೊರತೆ ವೈದ್ಯರ ಕೊರತೆ ಇದ್ದರೆ ತಕ್ಷಣ ಪ್ರಸ್ತಾವ ಸಲ್ಲಿಸಬೇಕು. ಯಾವುದಕ್ಕೂ ಸುಮ್ಮನೆ ಕುಳಿತುಕೊಳ್ಳಬಾರದು’ ಎಂದರು.

‘ಕೆಲವು ಗ್ರಾಮಗಳಲ್ಲಿ ಜಾನುವಾರಗಳ ಸಂಖ್ಯೆ ಬಹಳ ಕಡಿಮೆ ಇದೆ. ಪಶು ಆಸ್ಪತ್ರೆ ಅಗತ್ಯವಿಲ್ಲವೆಂದಾದರೆ ತಿಳಿಸಬೇಕು. ಅಧಿಕ ಜಾನುವಾರುಗಳು ಇರುವ ಪ್ರದೇಶದಲ್ಲಿ ಪಶು ಆಸ್ಪತ್ರೆಗಳನ್ನು ಸ್ಥಳಾಂತರ ಮಾಡಲು ಶಿಫಾರಸು ಮಾಡಬೇಕು. ಇದರಿಂದ ಜಾನುವಾರು ಮಾಲೀಕರಿಗೂ ಅನುಕೂಲವಾಗಲಿದೆ‘ ಎಂದು ತಿಳಿಸಿದರು.

‘ಆಶಾ ಕಾರ್ಯಕರ್ತೆಯರ ರೀತಿ ನಮ್ಮ ಇಲಾಖೆಯಿಂದ ಪಶು ಸಖಿಯರನ್ನು ನೇಮಿಸಿಕೊಳ್ಳಲಾಗಿದೆ. ಇಲಾಖೆ ಮತ್ತು ರೈತರ ನಡುವೆ ಇರುವ ಅಂತರವನ್ನು ಕಡಿಮೆ ಮಾಡಿ ವಿಸ್ತರಣಾ ಚಟುವಟಿಕೆಗಳನ್ನು ಸಮರ್ಪಕವಾಗಿ ತಲುಪಿಸಲು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳಿಗೆ ಒಬ್ಬರಂತೆ ಅವರಿಗೆ ಅಗತ್ಯ ತರಬೇತಿ ನೀಡಲಾಗುವುದು. ಬಳಿಕ ಅವರನ್ನು ಕೆಲಸಕ್ಕೆ ನಿಯೋಜಿಸಲಾಗುವುದು. ರಾಯಚೂರು ಜಿಲ್ಲೆಯಲ್ಲಿ ಒಟ್ಟು 151 ಪಶು ಸಖಿಯರನ್ನು ಆಯ್ಕೆ ಮಾಡಲಾಗಿದೆ’ ಎಂದು ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಅಶೋಕ ಕೊಲಕಾರ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT