ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವದುರ್ಗ: ಪಾಳು ಬಿದ್ದ ಶುದ್ಧ ನೀರಿನ ಘಟಕ

ಚಿಕ್ಕಬುದೂರು: ಅಧಿಕಾರಿಗಳ ನಿರ್ಲಕ್ಷ್ಯ, ಕುಡಿಯುವ ನೀರಿಗೆ ಪರದಾಟ
Published 3 ಜೂನ್ 2023, 12:17 IST
Last Updated 3 ಜೂನ್ 2023, 12:17 IST
ಅಕ್ಷರ ಗಾತ್ರ

ದೇವದುರ್ಗ: ತಾಲ್ಲೂಕಿನ ಚಿಕ್ಕಬುದೂರು ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಇಲ್ಲದೆ ಗಿಡ–ಕಂಟೆಗಳು ಬೆಳೆದು ಪಾಳು ಬಿದ್ದಿದೆ.

ಗ್ರಾಮದ ಅಗಸಿ ಕಟ್ಟೆಯ ಹತ್ತಿರ 5 ವರ್ಷಗಳ ಹಿಂದೆ ₹10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಶುದ್ಧ ಕುಡಿವ ನೀರಿನ ಘಟಕವು ನಿರ್ವಹಣೆ ಕೊರತೆಯಿಂದ ಹಾಳಾಗಿದ್ದು ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಪ್ಲೋರೈಡ್ ಮತ್ತು ಕಬ್ಬಿಣದ ಅಂಶವುಳ್ಳ ನೀರಿನ ಸೇವನೆಯಿಂದ ಆರೋಗ್ಯಕ್ಕೆ ಹಾನಿಕಾರಕ ಎನ್ನುವುದನ್ನು ಮನಗಂಡ ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕ ಸ್ಧಾಪಿಸಿದೆ. ₹5ಗೆ 20 ಲೀಟರ್ ನೀರು ಪೂರೈಕೆ ಮಾಡಬೇಕಿತ್ತು. ಆದರೆ ನಿರ್ವಹಣೆ ಕೊರತೆಯಿಂದ ಹಾಳಾಗಿದೆ. ಸಮಸ್ಯೆ ಬಗ್ಗೆ ಹಲವು ಸಲ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ, ಪಿಡಿಒ ಅವರನ್ನು ಕೇಳಿದರೆ ನಿರ್ವಹಣೆ ನಮಗೆ ಇಲ್ಲ ಎನ್ನುತ್ತಾರೆ. ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿಗಳಿಗೆ ಕೇಳಿದರೆ ಏಜೆನ್ಸಿ ಅವರು ನಿರ್ವಹಣೆ ಮಾಡುತ್ತಾರೆ ಎನ್ನುವುದು ಜನರ ದೂರು. 

2 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ 400ಕ್ಕೂ ಅಧಿಕ ಮನೆಗಳಿವೆ. ಎಲ್ಲ ವರ್ಗದ ಜನರು ವಾಸವಾಗಿದ್ದಾರೆ. ಘಟಕವು ಪಾಳು ಬಿದ್ದಿರುವುದರಿಂದ ನೀರಿನ ಸಮಸ್ಯೆ ಎದುರಿಸುವಂತಾಗಿದೆ ಎನ್ನುತ್ತಾರೆ ಗ್ರಾಮದ ಮಹಿಳೆಯರು.

ಗ್ರಾಮದಲ್ಲಿ 1 ವರ್ಷದ ಹಿಂದೆ ಜಲಜೀವನ್ ಯೋಜನ ಅಡಿ ಮನೆಮನೆಗಳಿಗೆ ನಲ್ಲಿ ಅಳವಡಿಸಲಾಗಿದೆ. ಆದರೆ ಒಂದುವರೆ ವರ್ಷ ಕಳೆದರೂ ನೀರು ಹರಿದಿಲ್ಲ. ಹಲವು ಕಡೆ ನಲ್ಲಿಗಳನ್ನು ಕಿತ್ತೆಸೆಯಲಾಗಿದೆ.

ವರ್ಷದ ಹಿಂದೆ ಯಾಟಗಲ ಗ್ರಾಮದಿಂದ ಕೃಷ್ಣಾ ನದಿಯ ನೀರು ಕುಡಿಯಲು ಸರಬರಾಜು ಆಗುತ್ತಿತ್ತು ಕಳೆದ 8 ತಿಂಗಳ ಹಿಂದೆ ಈ ನೀರು ಸಹ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಪಕ್ಕದ ಗ್ರಾಮವಾದ ಜೇರಬಂಡಿ ಗ್ರಾಮದಿಂದ ಬೋರ್ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಶೇಕಡ 70 ಜನರಿಗೆ ಈ ನೀರು ತಲುಪುವ ಮುಂಚೆ ಕಾಲಿಯಾಗುತ್ತದೆ ಎನ್ನುತ್ತಾರೆ ಗ್ರಾಮದ ಮಹಿಳೆಯರು.

ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಿಗಳು ಪ್ರತಿ ವರ್ಷ ಕುಡಿಯುವ ನೀರಿಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದಾರೆ. ಕುಡಿಯುವ ನೀರು ಎಲ್ಲಿ ಒದಗಿಸಿದ್ದಾರೆ ಎಂದು ತೋರಿಸಲಿ’ ಎಂದು ಹೆಸರು ಹೇಳಲಿಚ್ಚಿಸದ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರೊಬ್ಬರು ದೂರಿದರು.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸಿ ಸಮರ್ಪಕವಾಗಿ ನೀರು ಸರಬರಾಜು ಮಾಡಬೇಕೆಂಬುದು ಗ್ರಾಮಸ್ಧರ ಒತ್ತಾಯವಾಗಿದೆ.

ದೇವದುರ್ಗ ತಾಲ್ಲೂಕಿನ ಚಿಕ್ಕಬುದೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಜನರು
ದೇವದುರ್ಗ ತಾಲ್ಲೂಕಿನ ಚಿಕ್ಕಬುದೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಜನರು

40 ವರ್ಷದಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಶುದ್ಧ ಕುಡಿಯುವ ನೀರು ಘಟಕ ದುರಸ್ತಿಗೊಳಿಸುವಂತೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ

-ಮಹಾದೇವಪ್ಪಗೌಡ ಪಾಟೀಲ ಚಿಕ್ಕಬುದೂರು

ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸಲು ಪಿಡಿಒ ಅವರಿಗೆ ತಿಳಿಸುತ್ತೇವೆ. ಯಾಟಗಲ್ ಗ್ರಾಮದಿಂದ ಕೃಷ್ಣ ನದಿಯ ನೀರು ಸಂಪರ್ಕ ಕಲ್ಪಿಸುವ ಪೈಪ್ ಲೈನ್ ಸ್ಥಗಿತಗೊಂಡ ಬಗ್ಗೆ ಮಾಹಿತಿ ಇಲ್ಲ ಮಾಹಿತಿ ಪಡೆದು ಕ್ರಮಕ್ಕೆ ಸೂಚಿಸಿವೆ

-ಪಂಪಾಪತಿ ಹಿರೇಮಠ ಇಒ ತಾಲ್ಲೂಕು ಪಂಚಾಯಿತಿ ದೇವದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT