ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿರೇತಕ ಅಭಿವೃದ್ಧಿಯಿಂದ ಅಸಹಿಷ್ಣುತೆ: ಚಿಂತಕ ಪ್ರಸನ್ನ

ಸಂವಾದದಲ್ಲಿ ಕೇಳಲಾದ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದ ಚಿಂತಕ
Last Updated 8 ಸೆಪ್ಟೆಂಬರ್ 2018, 12:08 IST
ಅಕ್ಷರ ಗಾತ್ರ

ರಾಯಚೂರು: ‘ಅಭಿವೃದ್ಧಿಗೆ ಅನುದಾನದ ಕೊರತೆಯಿಲ್ಲ. ಆದರೆ, ಅತಿರೇತಕ ಅಭಿವೃದ್ಧಿಯಿಂದ ಅಸಹಿಷ್ಣುತೆ ಹೆಚ್ಚುತ್ತಿದೆ’ ಎಂದು ಚಿಂತಕ ಪ್ರಸನ್ನ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಶುಕ್ರವಾರ ಸಂಜೆ ಏರ್ಪಡಿಸಿದ್ದ ‘ಉತ್ತರ ಕರ್ನಾಟಕದ ಅಭಿವೃದ್ಧಿ ಹೇಗಿರಬೇಕು’ ವಿಷಯ ಕುರಿತ ಸಂವಾದದಲ್ಲಿ ಮಾತನಾಡಿದರು.

‘ನಿಜವಾದ ಅಭಿವೃದ್ಧಿ ಎಂದರೆ; ಉದ್ಯೋಗಕ್ಕಾಗಿ ಗುಳೆ ಹೋಗುವ ಪರಿಸ್ಥಿತಿ ಇರಬಾರದು. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು, ಸ್ಥಳೀಯರನ್ನು ಒಳಗೊಂಡು ಅಭಿವೃದ್ಧಿ ಸಾಧಿಸುವುದು ನಿಜವಾದ ಅಭಿವೃದ್ಧಿ. ಒಂದು ಕಡೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇನ್ನೊಂದು ಕಡೆ ನಿರುದ್ಯೋಗದ ಸಮಸ್ಯೆ ಬೆಳೆಯುತ್ತಿದೆ. ಒಂದಕ್ಕೊಂದು ಸಂಬಂಧವಿಲ್ಲದಂತಿದ್ದರೆ ಅಸಹಿಷ್ಣುತೆ ಹೆಚ್ಚಾಗುತ್ತಾ ಹೋಗುತ್ತದೆ’ ಎಂದರು.

‘ಅತಿಹೆಚ್ಚು ಉದ್ಯೋಗ ಒದಗಿಸುವುದಕ್ಕೆ ಕುಲ ಕಸುಬುಗಳಲ್ಲಿ ಸಾಧ್ಯವಿದೆ. ಒಂದು ಕುಲದವರು ಇಂಥದ್ದೇ ಕೆಲಸ ಮಾಡಬೇಕು ಎನ್ನುವ ವ್ಯವಸ್ಥೆ ಮೊದಲಿತ್ತು. ಅದೇ ಕುಲದವರಷ್ಟೆ ಇಂಥದ್ದೆ ವೃತ್ತಿ ಮುಂದುವರಿಸಬೇಕು ಎನ್ನುವುದು ಸರಿಯಲ್ಲ. ಹಿಂದಿನ ಹಿರಿಯರು ಮಾಡುತ್ತಿದ್ದ ಕಸುಬುಗಳನ್ನು ಯಾರೂ ಬೇಕಾದರೂ ಮುಂದುವರಿಸಬಹುದು. ಅದರಲ್ಲೆ ಹೊಸತನ ರೂಢಿಸಿ, ಜನಪ್ರಿಯಗೊಳಿಸುವ ಕೆಲಸ ಮಾಡಬೇಕಿದೆ. ಹಳೇ ಕಸುಬುಗಳಲ್ಲಿ ಗುಣಮಟ್ಟತೆ ಇದ್ದು, ಇದನ್ನು ಜನರಿಗೆ ಮನವರಿಕೆ ಮಾಡಬೇಕು. ಅದರಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡಬೇಕು. ಇದರಿಂದ ನಿಸರ್ಗಕ್ಕೂ ಹಾನಿಯಾಗುವುದಿಲ್ಲ’ ಎಂದು ಹೇಳಿದರು.

‘ಒಳ್ಳೆಯದು ಮತ್ತು ಕೆಟ್ಟದರ ಬಗೆಗೆ ಜನರಿಗೆ ಅರಿವಿದೆ. ಆದರೆ, ಕೆಟ್ಟದ್ದನ್ನು ಆಯ್ಕೆ ಮಾಡಿಕೊಂಡು ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿರುವುದರಿಂದ ಮನುಕುಲ ಸಮಸ್ಯೆ ಎದುರಿಸಬೇಕಾಗಿದೆ. 20 ನೇ ಶತಮಾನವು ಒಳ್ಳೆಯ ವಿಚಾರಗಳನ್ನು ತೆರೆದಿಟ್ಟಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿಯಾಗಿದ್ದು, ವಿಪುಲ ಅವಕಾಶಗಳನ್ನು ನಿರ್ಮಿಸಿದೆ. ವಿಜ್ಞಾನವನ್ನು ಕೈಬಿಟ್ಟು, ತಂತ್ರಜ್ಞಾನದೊಂದನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದರಿಂದ ಸಮಸ್ಯೆಗಳು ಉದ್ಭವಿಸುತ್ತಿವೆ’ ಎಂದು ತಿಳಿಸಿದರು.

ಯಂತ್ರಗಳ ಆವಿಷ್ಕಾರದಿಂದ ಒಳ್ಳೆಯದಕ್ಕಿಂತ ಹೆಚ್ಚಾಗಿ ಕೆಟ್ಟ ಪರಿಣಾಮಗಳು ಆಗುತ್ತಿವೆ. ಅಭಿವೃದ್ಧಿಯ ಗುರಿ ಯಾವಾಗಲೂ ಒಳ್ಳೆಯದಾಗಿರಬೇಕು. ಈ ಒಳ್ಳೆಯತನ ಕಾಪಾಡಲು ಶಾಂತವಾದ ಜನಪರ ಚಳವಳಿ ನಡೆಸುವುದು ಅಗತ್ಯ. ಹೈದರಾಬಾದ್‌ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ಜನಪರ ಚಳವಳಿ ಆರಂಭವಾಗಬೇಕು. ಬೆಂಗಳೂರಿನ ರಾಜಕಾರಣ ಹೈದರಾಬಾದ್‌ ಕರ್ನಾಟಕದತ್ತ ಮುಖ ಮಾಡುವಂತಾಗಬೇಕು ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಬಸವಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸಿದ್ದರು. ಬಂಡಾಯ ಸಾಹಿತಿ ಬಾಬು ಭಂಡಾರಿಗಲ್‌, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ನಾಗಡದಿನ್ನಿ ಇದ್ದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ದಸ್ತಗೀರಸಾಬ್‌ ದಿನ್ನಿ ಸ್ವಾಗತಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ಜೆ.ಎಲ್‌. ಈರಣ್ಣ ಪ್ರಾಸ್ತಾವಿಕ ಮಾತನಾಡಿ, ನಿರೂಪಿಸಿದರು. ಆಕಾಶವಾಣಿ ಅಧಿಕಾರಿ ವೆಂಕಟೇಶ ಬೆವಿನಬೆಂಚಿ ವಂದಿಸಿದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಭೀಮನಗೌಡ ಇಟಗಿ, ಕೋಶಾಧ್ಯಕ್ಷ ಮಹಾದೇವಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT