ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿ ತಲುಪಿದ ‘ಡಿಜಿಟಲ್‌ ಇಂಡಿಯಾ’

Last Updated 31 ಡಿಸೆಂಬರ್ 2019, 11:51 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ದೇವದುರ್ಗ ತಾಲ್ಲೂಕಿನ ಮೂರು ಗ್ರಾಮ ಪಂಚಾಯಿತಿಗಳನ್ನು ಹೊರತುಪಡಿಸಿ ಉಳಿದೆಲ್ಲ ಪಂಚಾಯಿತಿಗಳಿಗೂ ‘ಡಿಜಿಟಲ್‌ ಇಂಡಿಯಾ’ ಯೋಜನೆಯಡಿ ಓಎಫ್‌ಸಿ (ಆಪ್ಟಿಕಲ್‌ ಫೈಬರ್ ಕೇಬಲ್‌) ಹಾಗೂ ಎಫ್‌ಟಿಟಿಎಚ್‌ (ಫೈಬರ್‌ ಟು ದಿ ಹೋಂ) ಮೂಲಕ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗಿದೆ.

ಗ್ರಾಮ ಪಂಚಾಯಿತಿಗಳಿಂದ ಒದಗಿಸುವ ಸೇವೆಗಳು ಹಾಗೂ ಜನರು ದೂರುಗಳನ್ನು ಆನ್‌ಲೈನ್‌ ಮೂಲಕವೂ ಸಲ್ಲಿಸುವ ವ್ಯವಸ್ಥೆ ಸಿದ್ಧಪಡಿಸಲಾಗಿದೆ. ಆದರೆ, ಬಳಕೆ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ. ದೇಶದಲ್ಲಿ ಸಶಕ್ತ ಸಮಾಜ ಹಾಗೂ ಜಾಗೃತ ಆರ್ಥಿಕ ವ್ಯವಸ್ಥೆ ರೂಪಿಸುವ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರವು ‘ಡಿಜಿಟಲ್‌ ಇಂಡಿಯಾ’ ಯೋಜನೆ ರೂಪಿಸಿದ್ದು, ಪ್ರತಿಯೊಬ್ಬರಿಗೂ ಡಿಜಿಟಲ್‌ ಸೇವೆ ತಲುಪುವ ನಿಟ್ಟಿನಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಮಾಡುತ್ತಿದೆ.

ಜಿಲ್ಲೆಯಲ್ಲಿರುವ 21 ನೂತನ ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಂತೆ ಒಟ್ಟು 185 ಗ್ರಾಮ ಪಂಚಾಯಿತಿಗಳಲ್ಲಿ ಆಡಳಿತವೆಲ್ಲವೂ ಆನ್‌ಲೈನ್‌ ಮೂಲಕ ನಡೆಯುತ್ತಿದೆ. ಲಿಂಗಸುಗೂರು ಮತ್ತು ಮಾನ್ವಿ ತಾಲ್ಲೂಕುಗಳಲ್ಲಿ ತಲಾ 40 ಗ್ರಾಮ ಪಂಚಾಯಿತಿಗಳಿದ್ದು, ಜನರು ವಿವಿಧ ಪ್ರಮಾಣಪತ್ರಗಳನ್ನು ಪಡೆಯುತ್ತಿದ್ದಾರೆ. ರಾಯಚೂರು ಮತ್ತು ದೇವದುರ್ಗ ತಾಲ್ಲೂಕುಗಳಲ್ಲಿ ತಲಾ 34 ಗ್ರಾಮ ಪಂಚಾಯಿತಿಗಳು ಕಾರ್ಯನಿರ್ವಹಿಸುತ್ತಿವೆ. ಸಿಂಧನೂರು ತಾಲ್ಲೂಕಿನಲ್ಲಿ ಒಟ್ಟು 37 ಗ್ರಾಮ ಪಂಚಾಯಿತಿಗಳು ಇಂಟರ್‌ನೆಟ್‌ ಬಳಸಿಕೊಳ್ಳುತ್ತಿವೆ.

ದೇವದುರ್ಗ ತಾಲ್ಲೂಕಿನ ಜೇಗಟಕಲ್‌, ಮಲ್ಲೇದೇವರ ಗುಡ್ಡ ಹಾಗೂ ಅಮರಾಪುರ ಗ್ರಾಮ ಪಂಚಾಯಿತಿಗಳಿಗೆ ಸ್ವಂತ ಕಟ್ಟಡ ಇಲ್ಲದೆ ಇರುವುದಕ್ಕೆ ಓಎಫ್‌ಸಿ ಅಳವಡಿಕೆ ಇದುವರೆಗೂ ಆಗಿಲ್ಲ. ಕೇಂದ್ರ ಸರ್ಕಾರ ಸ್ವಾಮ್ಯದ ಬಿಬಿಎನ್‌ಎಲ್‌ (ಭಾರತ್‌ ಬ್ರಾಡ್‌ಬ್ಯಾಂಡ್‌ ನೆಟ್‌ವರ್ಕ್‌ ಲಿಮಿಟೆಡ್‌) ಮೂಲಕ ದೇಶದಾದ್ಯಂತ ಗ್ರಾಮ ಪಂಚಾಯಿತಿಗಳಿಗೆ ಓಎಫ್‌ಸಿ, ಎಫ್‌ಟಿಟಿಎಚ್‌ ಹಾಗೂ ವೈಫೈ ಸಂಪರ್ಕ ಕಲ್ಪಿಸುವ ಕಾರ್ಯ ನಡೆಯುತ್ತಿದೆ.

ವೈಫೈ ಸೇವೆ

ಅಂತರ್ಜಾಲ ಬಳಕೆ ವ್ಯಾಪಕಗೊಳಿಸಲು ಗ್ರಾಮ ಪಂಚಾಯಿತಿಗಳಿಗೆ ವೈಫೈ ಹಾಟ್‌ಸ್ಪಾಟ್‌ (ವೈರ್‌ಲೆಸ್‌ ಫಿಡಿಲಿಟಿ) ಉಪರಣ ಕೂಡಾ ಒದಗಿಸಲಾಗುತ್ತಿದೆ. ಇದುವರೆಗೂ 38 ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ವೈಫೈ ಸೇವೆ ಸಾಧ್ಯವಾಗಿದೆ. ದೇವದುರ್ಗ ತಾಲ್ಲೂಕಿನ ಕೊಪ್ಪರ, ಮಸರಕಲ್‌, ರಾಮದುರ್ಗ, ಬಿ.ಗಣೇಕಲ್‌ ಹಾಗೂ ಜಾಲಹಳ್ಳಿ ಐದು ಪಂಚಾಯಿತಿಗಳು, ಮಾನ್ವಿ ತಾಲ್ಲೂಕಿನ 12 ಪಂಚಾಯಿತಿಗಳು, ರಾಯಚೂರು ತಾಲ್ಲೂಕಿನಲ್ಲಿ ಕಲ್ಮಲಾ, ಮಟಮಾರಿ, ತುಂಗಭದ್ರಾ, ಹೆಗಸನಹಳ್ಳಿ, ಕಸ್ಬೆಕ್ಯಾಂಪ್‌ ಪಂಚಾಯಿತಿಗಳು, ಲಿಂಗಸುಗೂರು ತಾಲ್ಲೂಕಿನ ಗೆಜ್ಜೆಲಗಟ್ಟಾ, ಗುರುಗುಂಟಾ, ನಾಗಲಾಪುರ ಹಾಗೂ ಅನ್ವರಿ ಬಿಟಿಎಸ್‌ ಪಂಚಾಯಿತಿಗಳು ಹಾಗೂ ಸಿಂಧನೂರು ತಾಲ್ಲೂಕಿನ 10 ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ವೈಫೈ ಹಾಟ್‌ಸ್ಪಾಟ್‌ ಅಂತರ್ಜಾಲ ವ್ಯವಸ್ಥೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT