ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು: ದಾಳಿಂಬೆ ಬೆಳೆಗೆ ದುಂಡಾಣು ರೋಗ, ಸಂಕಷ್ಟಕ್ಕೆ ಸಿಲುಕಿದ ಬೆಳೆಗಾರರು

ಅಕ್ಷರ ಗಾತ್ರ

ಲಿಂಗಸುಗೂರು: ತಾಲ್ಲೂಕಿನಾದ್ಯಂತ ದಾಳಿಂಬೆ, ಪಪ್ಪಾಯಿ, ದ್ರಾಕ್ಷಿ ಇತರೆ ಬೆಳೆ ಬೆಳೆಯಲು ಪೈಪೋಟಿ ಏರ್ಪಟ್ಟಿದೆ. ಇಂತಹ ಸಂದರ್ಭದಲ್ಲಿ ದಾಳಿಂಬೆ ಬೆಳೆಗೆ ದುಂಡಾಣು ಮತ್ತು ಕಾಯಿ ಕೊರಕ ರೋಗ ಕಾಣಿಸಿಕೊಂಡಿದ್ದು, ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ತೋಟಗಾರಿಕೆ, ಕೃಷಿ, ರೇಷ್ಮೆ ಇಲಾಖೆ ವಿವಿಧ ಯೋಜನೆಗಳಡಿ ಸೌಲಭ್ಯ ಕಲ್ಪಿಸುತ್ತಿದೆ. ರಿಯಾಯಿತಿ ಸೌಲಭ್ಯಗಳು ಹೆಚ್ಚಿನ ಪ್ರಮಾಣದಲ್ಲಿ ನೀಡುವ ಜೊತೆ ತಾಂತ್ರಿಕ ಸಲಹೆಗಳನ್ನು ನೀಡಿ ರೈತರಲ್ಲಿ ಆತ್ಮಸ್ಥೈರ್ಯ ಮೂಡಿಸುತ್ತ ಬಂದಿವೆ. ತಾಲ್ಲೂಕಿನಲ್ಲಿ 750ಕ್ಕೂ ಹೆಚ್ಚು ರೈತರು 5480 ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆ ಮಾಡಿಕೊಂಡಿದ್ದು ವಿಶೇಷ.

ತಾಲ್ಲೂಕಿನ ನೀರಲಕೇರಿ, ಈಚನಾಳ, ಜಾವೂರು, ಗುಂತಗೋಳ, ಗುರುಗುಂಟಾ, ಗೌಡೂರು, ಆನ್ವರಿ, ಹಟ್ಟಿ, ಪಾಮನಕಲ್ಲೂರು, ಕಸಬಾಲಿಂಗಸುಗೂರು, ಸೇರಿದಂತೆ ನಡುಗಡ್ಡೆ ಪ್ರದೇಶಗಳಲ್ಲಿ ಸಾಕಷ್ಟು ಹಣ ಖರ್ಚು ಮಾಡಿ ದಾಳಿಂಬೆ ಬೆಳೆ ನಾಟಿ ಮಾಡಿದ್ದಾರೆ. ಆದರೆ, ರೋಗದಿಂದಾಗಿ ಬೆಳೆ ಹಾಳಾಗುತ್ತಿದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.

ದಾಳಿಂಬೆ ಗಿಡದ ಎಲೆ ಮತ್ತು ಕಾಯಿಗಳ ಮೇಲೆ ಕಪ್ಪು ಚುಕ್ಕೆ ಆಕಾರದಲ್ಲಿ ಕಾಣಿಸುವ ದುಂಡಾಣು ರೋಗ ದಿನದಿಂದ ದಿನಕ್ಕೆ ವ್ಯಾಪಿಸುತ್ತಿದೆ. ಅತಿಯಾದ ಮಳೆ, ಬಿಸಿಲು ರೈತರಿಗೆ ಶಾಪವಾಗಿ ಪರಿಣಮಿಸಿದೆ. ದುಂಡಾಣು ರೋಗದ ಜೊತೆಗೆ ಈ ಬಾರಿ ಕಾಯಿ ಕೊರಕ ರೋಗ ಕಾಣಿಸಿಕೊಂಡಿದ್ದು ಬಹುತೇಕ ರೈತರು ನೂರಾರು ಕ್ವಿಂಟಾಲ್‌ ದಾಳಿಂಬೆ ಹಣ್ಣು ಕಿತ್ತು ತಿಪ್ಪೆಗೆ ಹಾಕಿ ಬೆಂಕಿ ಇಟ್ಟಿದ್ದಾರೆ.

‘ದುಂಡಾಣು ಮತ್ತು ಕಾಯಿಕೊರಕ ರೋಗ ತಡೆಗಟ್ಟಲು ಕೃಷಿ ವಿಜ್ಞಾನಿಗಳು ಹಾಗೂ ವೈದ್ಯರು ನೀಡುವ ಸಲಹೆ ಆಧರಿಸಿ ಸಾಕಷ್ಟು ಕ್ರಿಮಿನಾಶಕ ಸಿಂಪಡಣೆ ಮಾಡಿದ್ದೇವೆ. ಆದರೂ ನೂರಾರು ಟನ್‌ ದಾಳಿಂಬೆ ಹಾನಿಗೀಡಾಗಿದೆ. ಸರ್ಕಾರ ರೈತರಿಗೆ ಅಗತ್ಯ ಪರಿಹಾರ ನೀಡಿ ಆರ್ಥಿಕ ಸಂಕಷ್ಟದಿಂದ ದೂರ ಮಾಡಬೇಕು’ ಎಂದು ಗೌಡಪ್ಪ ನೀರಲಕೇರಿ ಕೋರಿದರು.

‘ದುಂಡಾಣು ಮತ್ತು ಕಾಯಿಕೊರ ತರೋಗ ತಡೆಯಲು ರೈತರಿಗೆ ಇಲಾಖೆ ತಾಂತ್ರಿಕ ಸಲಹೆಗಳನ್ನು ನೀಡುತ್ತ ಬಂದಿದೆ. ಹವಾಮಾನ ಆಧರಿಸಿ ಬರುವ ಈ ರೋಗಾಣು ನಿಯಂತ್ರಣ ಸವಾಲಾಗಿ ಪರಿಣಮಿಸಿದೆ. ಸರ್ಕಾರ ಇಂತಹ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ನೆರವು ನೀಡಲು ಯಾವುದೇ ಯೋಜನೆ ರೂಪಿಸಿಲ್ಲ’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಯೋಗೇಶ್ವರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT