ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೃದ್ಧ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು: ಶಾಸಕ ಬಸನಗೌಡ

Published 5 ಸೆಪ್ಟೆಂಬರ್ 2023, 14:00 IST
Last Updated 5 ಸೆಪ್ಟೆಂಬರ್ 2023, 14:00 IST
ಅಕ್ಷರ ಗಾತ್ರ

ರಾಯಚೂರು: ‘ಸುಸಂಸ್ಕೃತ ಹಾಗೂ ಸಮೃದ್ಧ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ’ ಎಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾ ಗೃಹದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ವತಿಯಿಂದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 136ನೇ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಿದ್ದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

‘ಬ್ರಹ್ಮ, ವಿಷ್ಣು, ಮಹೇಶ್ವರರಿಗಿಂತ ಮಿಗಿಲಾದ ದೇವರೆಂದರೆ ಶಿಕ್ಷಕರು. ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳದರೂ ಶಿಕ್ಷಣ ನೀಡಿದ ಗುರುಗಳನ್ನು ಗೌರವದಿಂದ ಕಾಣಬೇಕು’ ಎಂದರು.

‘ತಂದೆ, ತಾಯಿ ಮಗುವಿಗೆ ಜೀವನದ ಪಾಠಗಳನ್ನು ಕಲಿಸಿದರೆ, ಶಿಕ್ಷಕರು ಶಿಕ್ಷಣದ ಜತೆಗೆ ಸಂಸ್ಕಾರ ಬೋಧಿಸುತ್ತಾರೆ. ಮಕ್ಕಳ ವ್ಯಕ್ತಿತ್ವ ರೂಪಿಸಲು ಶ್ರಮಿಸುತ್ತಾರೆ’ ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿನ ಶಾಲೆಗಳಿಗೆ ತೆರಳಿ ಶೈಕ್ಷಣಿಕ ಸೇವೆ ಸಲ್ಲಿಸುವ ಶಿಕ್ಷಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರದ ಮಟ್ಟದಲ್ಲಿ ಶಿಕ್ಷಕರ ಸಮಸ್ಯೆ ಚರ್ಚಿಸಿ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ಗುರು ಭವನ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ನಗರ ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ‘ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಕರು ಮಕ್ಕಳನ್ನು ದಿಟ್ಟಿಸಿ ನೋಡುವ ಹಾಗೂ ಇಲ್ಲ ಮಕ್ಕಳಿಗೆ ಯಾವುದೇ ಬುದ್ಧಿ ಮಾತುಗಳನ್ನು ಹೇಳುವ ಹಾಗಿಲ್ಲ. ಇದರಿಂದ ಮಕ್ಕಳು ದಾರಿ ತಪ್ಪುವ ಸಾಧ್ಯತೆ ಹೆಚ್ಚುತ್ತಿದೆ’ ಎಂದರು.

ನಿವೃತ್ತ ಪ್ರಾಚಾರ್ಯ ಹಾಗೂ ಸಾಹಿತಿ ವೆಂಕಟರಾವ್ ಕುಲಕರ್ಣಿ ಉಪನ್ಯಾಸ ನೀಡಿ, ‘ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರಾಮಾಣಿಕ, ಶ್ರದ್ಧೆ–ನಿಷ್ಠೆ ಮತ್ತು ಶಾಂತಿಯುತವಾಗಿ ಮಾಡಿದ್ದಲ್ಲಿ ಸಮೃದ್ಧ ದೇಶ ನಿರ್ಮಾಣ ಮಾಡಬಹುದಾಗಿದೆ’ ಎಂದು ಹೇಳಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಉಪಾಧ್ಯಕ್ಷ ಬಷೀರ್ ಅಹ್ಮದ್, ಜಿಲ್ಲಾ ಸಮಗ್ರ ಶಿಕ್ಷಣ ಕರ್ನಾಟಕದ ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ಇಂದಿರಾ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸುರೇಶ ಹುಗ್ಗಿ, ಡಯಟ್ ಅಧಿಕಾರಿ ಮಲ್ಲಿಕಾರ್ಜುನ, ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಭಂಡಾರಿ, ಮಾನವಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ ಇದ್ದರು.

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕ ಶಿಕ್ಷಕರನ್ನು ಸನ್ಮಾನಿಸಲಾಯಿತು
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕ ಶಿಕ್ಷಕರನ್ನು ಸನ್ಮಾನಿಸಲಾಯಿತು
ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತ ಶಿಕ್ಷಕರು
ರಾಯಚೂರು ತಾಲ್ಲೂಕಿನ ಇಡಪನೂರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಓದಿ ಸೋಮರ ಚನ್ನಬಸಯ್ಯ ಸೀತನಗರ ಕ್ಯಾಂಪ್ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಪ್ರಭಾವತಿ ದೇಸಾಯಿ ದೇವದುರ್ಗ ತಾಲ್ಲೂಕಿನ ಗುಡೇಲರದೊಡ್ಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗುರುಸ್ವಾಮಿ ಕೆಇಬಿ ಕಾಲೊನಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಅಂಬಮ್ಮ. ಲಿಂಗಸುಗೂರಿನ ಬಗಡಿ ತಾಂಡಾದ ಕಿರಿಯ ಪ್ರಾಥಮಿಕ ಶಾಲೆಯ ವಿಷ್ಣುಕುಮಾರ ಚೆಳ್ಳಿಗೇರಿ ಶೀಲಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಈರಣ್ಣ (ವೀರೇಶ) ಅಮರೇಶ್ವರ ಬಾಲಕಿಯರ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಗಂಗಮ್ಮ. ಮಾನ್ವಿ ತಾಲ್ಲೂಕಿನ ಮುಚ್ಳಗುಡ್ಡ ಕ್ಯಾಂಪ್‍ನ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಮೇಶ ಭಂಡಾರಿ ಕೋನಾಪುರ ಪೇಟೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮೂಕಪ್ಪ ಕಟ್ಟಿಮನಿ ಮಾನ್ವಿಯ ಬಾಲಕರ ಪ್ರೌಢ ಶಾಲೆಯ ಶಿಕ್ಷಕ ಮೆಹಬೂಬ್ ಪಾಷಾ ದಿನ್ನಿ ಆರ್.ಎಂಎಸ್.ಎ ಪ್ರೌಢ ಶಾಲೆಯ ಶಿಕ್ಷಕಿ ರಶ್ಮಿ. ಸಿಂಧನೂರು ತಾಲ್ಲೂಕಿನ ಎಪಿಎಂಸಿ ಯಾರ್ಡ್ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಭೀರಪ್ಪ ದಢೇಸುಗೂರು ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಮುತ್ತಕ್ಕ ತುರ್ವಿಹಾಳ ಪ್ರೌಢ ಶಾಲೆಯ ಶಿಕ್ಷಕ ಬಸವರಾಜ ಹಾಗೂ ಗೋನವಾಟ್ಲಿ ತಾಂಡಾದ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಈಶ್ವರಪ್ಪ. ಅರಕೇರಾ ಬಾಲಕಿಯರ ಪ್ರೌಢ ಶಾಲೆಯ ಶಿಕ್ಷಕ ಶಾಮೀದ್ ಅಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT