ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದರೆ ಕ್ರಮ: ಸಚಿವ ಶಂಕರ ಪಾಟೀಲ ಸೂಚನೆ

Last Updated 23 ಮೇ 2022, 13:09 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ರೈತರಿಗೆ ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಕಾಳಸಂತೆಯಲ್ಲಿ ಕೃತಕ ಅಭಾವ ಸೃಷ್ಟಿಸುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಬ.ಪಾಟೀಲ ಮುನೇನಕೊಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಮಳೆಯಿಂದ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ಮತ್ತು ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಕುರಿತು ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ, ಮಾತನಾಡಿದರು.

ಜಿಲ್ಲೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಮಳೆಯಾಗಿದ್ದು, ಮಳೆಯಿಂದ ಜಿಲ್ಲೆಯಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಸ್ಪಂದಿಸುವಂತೆ ಕೆಲಸ ಮಾಡಬೇಕು. ಒಂದು ವೇಳೆ ಸಮಸ್ಯೆ ಇದ್ದಲ್ಲಿ ನನ್ನ ಗಮನಕ್ಕೆ ಕೂಡಲೇ ತರಬೇಕು ಎಂದು ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪರವಾನಿಗೆ ಹೊಂದಿದ ಬಿತ್ತನೆ ಬೀಜ ಮಾರಾಟಗಾರರ ಜೊತೆ ಜಿಲ್ಲಾಧಿಕಾರಿ ಹಾಗೂ ಜಂಟಿ ಕೃಷಿ ಅಧಿಕಾರಿ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಬೇಕು. ನಿರ್ದೇಶನ ನೀಡಿದ ಮೇಲೂ ಹೆಚ್ಚಿನ ಬೆಲೆಗೆ ಬೀಜ ಮಾರಾಟ ಮಾಡಿದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಮಳೆಯ ನೆಪ ಹೇಳಿ ವಿದ್ಯುತ್ ತೆಗೆಯುವುದು ಸರಿಯಲ್ಲ. ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜೆಸ್ಕಾಂ ಎಂಜಿನಿಯರುಗಳಿಗೆ ತಿಳಿಸಿದರು.

ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳು ಸರಿಯಾಗಿ ರೈತರಿಗೆ ಸಿಗುತ್ತಿಲ್ಲ ಎಂಬ ದೂರು ಕೇಳಿಬರುತ್ತಿದ್ದು, ಮುಂದಿನ ಮೂರು ದಿನಗಳಲ್ಲಿ ರೈತರಿಗೆ ಸರಿಯಾಗಿ ಬಿತ್ತನೆ ಬೀಜಗಳ ಪೂರೈಕೆಗೆ ಕ್ರಮ ಕೈಕೊಳ್ಳಬೇಕು ಎಂದು ಸೂಚಿಸಿದರು.

ಚೆಕ್ ವಿತರಣೆ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಸಿಡಿಲು ಬಡಿದು ಮೃತಪಟ್ಟ ರೈತರ ಜಾನುವಾರುಗಳಿಗೆ ಜಿಲ್ಲಾಡಳಿತದಿಂದ ಚೆಕ್ ವಿತರಿಸಲಾಯಿತು.

ದೇವಸೂಗೂರು ಗ್ರಾಮದ ಜಂಬಣ್ಣ ಪೂಜಾರಿ ಅವೆ ಎರಡು ಟಗರುಗಳಿಗೆ ₹6 ಸಾವಿರ, ಮಾಮಡದೊಡ್ಡಿಯ ಹನುಮಂತ ಪಾಲಪ್ಪ ಅವರ ಹಸು ₹30 ಸಾವಿರ, ಅರಸಿಗೇರಾ ಗ್ರಾಮದ ಗೋವಿಂದ ತಂದೆ ತಿಮ್ಮಪ್ಪ ಅವರ ಎರಡು ಎತ್ತುಗಳಿಗೆ ₹50ಸಾವಿರ, ಆತ್ಕೂರು ಗ್ರಾಮದ ದತ್ತುಸ್ವಾಮಿ ಜಂಬಣ್ಣ ಅವರ ಒಂದು ಎಮ್ಮೆ ₹30ಸಾವಿರ ಪರಿಹಾರದ ಚೆಕ್‌ಗಳನ್ನು ನೀಡಲಾಯಿತು.

ಶಾಸಕರಾದ ಬಸನಗೌಡ ದದ್ದಲ್, ಡಿ.ಎಸ್. ಹುಲಿಗೇರಿ, ಬಸನಗೌಡ ತುರ್ವಿಹಾಳ, ರಾಜಾ ವೆಂಕಟಪ್ಪ ನಾಯಕ, ವೆಂಕಟರಾವ್ ನಾಡಗೌಡ, ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೂರ್ ಜಹಾರ ಖಾನಂ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್.ದುರುಗೇಶ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಶಿಕಾಂತ ಶಿವಪೂರೆ, ತಹಶೀಲ್ದಾರ್‌ ಡಾ.ಹಂಪಣ್ಣ ಸಜ್ಜನ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT