ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಭೂಮಿ ಹಾಗೇ ಬಿಡಬೇಡಿ

ಕಂದಾಯ ಸಚಿವ ಆರ್‌.ಅಶೋಕ್‌ ಅಧ್ಯಕ್ಷತೆಯಲ್ಲಿ ಸಭೆ
Last Updated 16 ಸೆಪ್ಟೆಂಬರ್ 2020, 14:07 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಎಲ್ಲೆಲ್ಲಿ ಸರ್ಕಾರಿ ಜಾಗ ಇದೆಯೋ ಅದನ್ನೆಲ್ಲ ಸದುಪಯೋಗ ಮಾಡಿಕೊಂಡು ಯಾವುದಕ್ಕಾದರೂ ಬಳಸಿಕೊಳ್ಳಬೇಕು. ಇಲ್ಲದಿದ್ದರೆ ಒತ್ತುವರಿ ಮಾಡಿಕೊಳ್ಳುತ್ತಾರೆ. ಈಗಾಗಲೇ ಸರ್ಕಾರಿ ಜಮೀನು ಒತ್ತುವರಿ ಆಗಿರುವುದನ್ನು ಬಿಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಭೂಮಿಯನ್ನು ಹಾಗೇ ಇರಲು ಬಿಡಬೇಡಿ’ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಜಿಲ್ಲಾಡಳಿತಕ್ಕೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಸ್ಮಶಾನ ಮಾಡುವುದಕ್ಕೂ ಸರ್ಕಾರಿ ಭೂಮಿ ಸಿಗುವುದಿಲ್ಲ. ಖಾಸಗಿ ಜಮೀನು ಖರೀದಿಸಲು ಹಲವು ತೊಡಕುಗಳು ಎದುರಾಗುತ್ತವೆ. ಪ್ರತಿಯೊಂದು ಗ್ರಾಮದಲ್ಲಿ ಸ್ಮಶಾನ ಇರಬೇಕು. ನದಿಗಳ ಪಕ್ಕದಲ್ಲಿ, ರಸ್ತೆಗಳ ಪಕ್ಕದಲ್ಲಿ ಹೆಣ ಹೂಳುವ ಪರಿಸ್ಥಿತಿ ಇರಬಾರದು ಎಂದರು.

ಸರ್ಕಾರಿ ಜಮೀನಿನಲ್ಲಿ ಸ್ಮಶಾನಭೂಮಿ ಮಾಡಿಕೊಟ್ಟರೆ, ಅವುಗಳಿಗೆ ‘ಸರ್ಕಾರಿ ಸ್ಮಶಾನ ಭೂಮಿ’ ಎಂದು ಫಲಕ ಹಾಕಬೇಕು. ಖಾಸಗಿಯವರ ಜಮೀನಿನಲ್ಲಿ ಸ್ಮಶಾನಗಳಿದ್ದರೆ ಮಾತ್ರ ಅವರಿಗೆ ಬೇಕಾದಂತೆ ಫಲಕ ಹಾಕಿಕೊಳ್ಳಲಿ ಎಂದು ತಿಳಿಸಿದರು.

ಪ್ರವಾಹ ಪರಿಹಾರ: ಈ ವರ್ಷ ದೇವದುರ್ಗ, ಮಾನ್ವಿ, ಲಿಂಗಸುಗೂರು, ಸಿಂಧನೂರು ಹಾಗೂ ರಾಯಚೂರು ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಲಾಗಿದೆ. ರಾಜ್ಯದಲ್ಲಿ ಕೇಂದ್ರ ಸರ್ಕಾರ ಯಾವುದೇ ತಾರತಮ್ಯ ಮಾಡಿಲ್ಲ. ಕೇಂದ್ರವು ₹395 ಕೋಟಿ ಎರಡನೇ ಕಂತನ್ನು ಎರಡು ತಿಂಗಳು ಪೂರ್ವದಲ್ಲಿಯೇ ಕೊಟ್ಟಿದೆ. ಇದಕ್ಕಾಗಿ ಕೇಂದ್ರಕ್ಕೆ ಧನ್ಯವಾದ ಅರ್ಪಿಸುತ್ತೇನೆ. ರಾಜ್ಯಕ್ಕೆ ನಾಲ್ಕು ಎನ್‌ಡಿಆರ್‌ಎಫ್‌ ತಂಡಗಳನ್ನು ನಾಲ್ಕು ಕೇಳಲಾಗಿತ್ತು. 9 ತಂಡಗಳನ್ನು ಕೇಂದ್ರ ಕಳುಹಿಸಿತ್ತು. ಅದರಲ್ಲಿ ಒಂದು ತಂಡ ರಾಯಚೂರಿಗೂ ಬಂದಿತ್ತು ಎಂದು ಹೇಳಿದರು.

ಕೋವಿಡ್‌ ಹಾಗೂ ಪ್ರವಾಹದ ಪರಿಹಾರ ಕಾರ್ಯಕ್ಕೆ ಹಣದ ಕೊರತೆಯಿಲ್ಲ. ಕೋವಿಡ್‌ಗೆ ಸಂಬಂಧಿಸಿದಂತೆ ರಾಯಚೂರು ಜಿಲ್ಲೆಗೆ ₹8.34 ಕೋಟಿ ಬಿಡುಗಡೆ ಆಗಿತ್ತು. ವಸತಿ ಯೋಜನೆಗಳಿಗೆ ಅನುದಾನ ಕೊರತೆಯಿಲ್ಲ. ರಾಯಚೂರು ಜಿಲ್ಲೆಯಲ್ಲಿ 20 ಎಕರೆ ಜಮೀನನ್ನು ಸರ್ಕಾರಿ ಉದ್ದೇಶಕ್ಕಾಗಿ ಮಂಜೂರಿ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಸ್ಮಶಾನ ಭೂಮಿಗಳನ್ನು ಅಭಿವೃದ್ಧಿ ಮಾಡುವುದಕ್ಕೆ ಅವಕಾಶವಿದೆ. ಈ ಯೋಜನೆಯಡಿ ಆವರಣ ಗೋಡೆ, ಶೆಡ್‌ ಹಾಕುವುದಕ್ಕೆ ಸಾಧ್ಯವಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಆಧ್ಯತೆಯಿಂದ ಸ್ಮಶಾನ ಭೂಮಿ ಮಾಡಿಕೊಡಲಾಗುವುದು ಎಂದು ಹೇಳಿದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ರಾಯಚೂರು ನಗರ ವ್ಯಾಪ್ತಿಯಲ್ಲಿಯೂ ಸ್ಮಶಾನಗಳ ಸಮಸ್ಯೆ ಇದೆ. ಇನ್ನಷ್ಟು ಜಾಗ ಒದಗಿಸುವ ಅಗತ್ಯವಿದೆ. ಈಗಾಗಲೇ ಎಂಟು ಸ್ಮಶಾನಗಳಿಗಾಗಿ ಬೇಡಿಕೆ ಸಲ್ಲಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಎಂಟು ಸ್ಮಶಾನ ಭೂಮಿ ಅಭಿವೃದ್ಧಿ ಮಾಡುವುದಕ್ಕೆ ಸಾಧ್ಯವಿದ್ದರೆ, ಮಾಡಿಸಬೇಕು ಎಂದು ತಿಳಿಸಿದರು.

ಶಾಸಕ ರಾಜಾ ವೆಂಕಟಪ್ಪ ನಾಯಕ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ್‌ ನಿಕ್ಕಂ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT