ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಸುಳ್ಳು ಗ್ಯಾರಂಟಿಗೆ ಮಾರುಹೋಗದಿರಿ: ಶಾಸಕ ಗಾಲಿ ಜನಾರ್ಧನ ರೆಡ್ಡಿ

Published 18 ಏಪ್ರಿಲ್ 2024, 14:28 IST
Last Updated 18 ಏಪ್ರಿಲ್ 2024, 14:28 IST
ಅಕ್ಷರ ಗಾತ್ರ

ರಾಯಚೂರು: ‘ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ತಾತ್ಕಾಲಿಕ. ಕಾಂಗ್ರೆಸ್ ಸುಳ್ಳು ಗ್ಯಾರಂಟಿ ನೀಡಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಗ್ಯಾರಂಟಿಗೆ ಮಾರು ಹೋಗದೇ ದೇಶದ ಸಮಗ್ರ ಅಭಿವೃದ್ಧಿಗೆ, ರಾಷ್ಟ್ರದ ರಕ್ಷಣೆಗೆ ಬಿಜೆಪಿಗೆ ಮತ ಹಾಕಬೇಕು. ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು‘ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.

ನಗರದ ಅತ್ತನೂರು ಫಂಕ್ಷನ್ ಹಾಲ್ ನಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬಿಜೆಪಿ–ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಇದು ಲೋಕಸಭಾ ಚುನಾವಣೆ ಹೊರತು ಸ್ಥಳೀಯ ಚುನಾವಣೆಯಲ್ಲ. ದೇಶದ ಸಮಗ್ರತೆ, ರಕ್ಷಣೆಗೆ ನರೇಂದ್ರ ಮೋದಿ ಸರಿಯಾದ ನಾಯಕ. ದೇಶದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲ್ಲಿಸಿದರೆ ಮಾತ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವರು. ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದರೆ ಕಸದ ಪುಟ್ಟಿಗೆ ಮತಹಾಕಿದಂತೆ, ಬಿಜೆಪಿ ಅಭ್ಯರ್ಥಿಗೆ ಹಾಕಿದರೆ ದೇಶದ ರಕ್ಷಣೆಗೆ ಹಾಕಿದಂತೆ’ ಎಂದು ಹೇಳಿದರು.

‘ರಾಯಚೂರು ಹಿಂದುಳಿದ ಕ್ಷೇತ್ರವಾಗಿದ್ದು ಇಲ್ಲಿ ಏಮ್ಸ್ ಸ್ಥಾಪನೆಯಾಗಬೇಕು. ಮಹಾನಗರ ಪಾಲಿಕೆಯಾಗಬೇಕು. ವಿಮಾನ ನಿಲ್ದಾಣ ಪೂರ್ಣವಾಗಬೇಕು. ರಾಜಾ ಅಮರೇಶ್ವರ ನಾಯಕ ಸಜ್ಜನ ರಾಜಕಾರಣಿ. ಬದ್ಧತೆಯಿಂದ ಕೆಲಸ ಮಾಡುತ್ತಾರೆ. ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಮನೆಮನೆಗೆ ತೆರಳಿ ಮತ ಯಾಚನೆ ಮಾಡಬೇಕು. ರಾಜಾ ಅಮರೇಶ್ವರ ನಾಯಕ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ‘ಕಾಂಗ್ರೆಸ್ ದಲಿತ ವಿರೋಧಿಯಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ‌ ರದ್ದು ಮಾಡುತ್ತಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ’ ಎಂದರು.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ‌ ಮಾಡಿದೆ. ಜಮ್ಮು ಕಾಶ್ಮೀರದಲ್ಲಿ ಸಂವಿಧಾನ ಜಾರಿಯಾಗಿರಲಿಲ್ಲ. ಎನ್ ಡಿಎ ಸರ್ಕಾರ 370 ಅಡಿಯಲ್ಲಿನ ವಿಶೇಷ ಸ್ಥಾನಮಾನ ರದ್ದುಪಡಿಸಿ ಸಂವಿಧಾನ ಜಾರಿ ಮಾಡಿದ್ದಾರೆ. ಇದು ಬಿಜೆಪಿಯ ಬದ್ಧತೆ. ಇಂಡಿಯಾ ಒಕ್ಕೂಟದಿಂದ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗಲಿ ಎಂದು ಮಮತಾ‌ ಬ್ಯಾನರ್ಜಿ ಹೇಳಿದರೆ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅದನ್ನು ವಿರೋಧಿಸಿ ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದು ಹೇಳುತ್ತಾರೆ. ಇದು ಅವರ ದಲಿತ ವಿರೋಧಿ ನೀತಿಗೆ ಸಾಕ್ಷಿ’ ಎಂದರು.

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ‘ಪಕ್ಷದಲ್ಲಿನ ಸಣ್ಣಪುಟ್ಟ ಗೊಂದಲ ನಿವಾರಣೆಯಾಗಲಿದೆ. ಜೆಡಿಎಸ್ ಮೈತ್ರಿಯಿಂದಾಗಿ ಆನೆಬಲ ಬಂದಿದೆ. ಕಳೆದ ಬಾರಿ 1ಲಕ್ಷ ಮತಗಳ ಅಂತರದಿಂದ ಗೆದ್ದಿದ್ದೆ ಈ ಬಾರಿ ಇನ್ನಷ್ಟು ಮತಗಳ ಅಂತರದಿಂದ ಗೆಲ್ಲುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕರ್ತ ಮೂರ್ಚೆ: ಅತ್ತನೂರು ಫಂಕ್ಷನ್ ಹಾಲ್ ನಲ್ಲಿ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ 12.30 ಆದರೂ ಕಾರ್ಯಕ್ರಮ ಶುರುವಾಗಿರಲಿಲ್ಲ. ಪಕ್ಷದ ಮುಖಂಡರು ವಿವಿಧ ಬಡಾವಣೆಗಳ ಜನರನ್ನು ಕರೆ ತಂದಿದ್ದರು. ಬಿಜೆಪಿ ಕಾರ್ಯಕರ್ತರು ಬಿಸಿಲನ್ನು ಲೆಕ್ಕಿಸದೇ ಜೈ ಶ್ರೀರಾಮ,  ಜೈ ಮೋದಿ, ಶಿವರಾಜ ಪಾಟೀಲ ಕೀ ಜೈ ಎನ್ನುತ್ತ ಪಂಕ್ಷನ್ ಹಾಲ್ ಹೊರಗೆ ತಿರುಗಾಡುತ್ತಿದ್ದರು.

ಈ ವೇಳೆಯಲ್ಲಿ ಕಾರ್ಯಕರ್ತನೊಬ್ಬ ಬಿಸಿಲಿಗೆ ತಲೆ ಸುತ್ತಿ ಬಿದ್ದ ಆಗ ಅಲ್ಲಿಯೇ ಇದ್ದ ಶಾಸಕ ಡಾ.ಶಿವರಾಜ ಪಾಟೀಲ ಕಾರು ತರಿಸಿ ಖಾಸಗಿ ಆಸ್ಪತ್ರೆಗೆ ಕಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ನಗರ ಶಾಸಕ ಡಾ.ಶಿವರಾಜ ಪಾಟೀಲ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿರೂಪಾಕ್ಷಿ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಜೆಡಿಎಸ್ ಶಾಸಕ ನೇಮಿರಾಜ್ ನಾಯ್ಕ್ ಸೇರಿದಂತೆ ಮೈತ್ರಿ ಪಕ್ಷದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT