ಸೈನಿಕರ ಪ್ರಾಮಾಣಿಕತೆ ಪ್ರಶ್ನಿಸಬೇಡಿ: ಮಂತ್ರಾಲಯ ಶ್ರೀ

ಶನಿವಾರ, ಮಾರ್ಚ್ 23, 2019
28 °C

ಸೈನಿಕರ ಪ್ರಾಮಾಣಿಕತೆ ಪ್ರಶ್ನಿಸಬೇಡಿ: ಮಂತ್ರಾಲಯ ಶ್ರೀ

Published:
Updated:
Prajavani

ರಾಯಚೂರು: ‘ಗಡಿಯಲ್ಲಿ ದೇಶ ಕಾಯುವ ಸೈನಿಕರ ಪ್ರಾಮಾಣಿಕತೆ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಉಗ್ರರನ್ನು ಸೈನಿಕರು ದಮನ ಮಾಡಿದ ವಿಷಯದ ವಿರುದ್ಧ ಮಾತನಾಡುವುದು ಒಳಿತಲ್ಲ’ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶೀ ಸುಬುಧೇಂದ್ರ ತೀರ್ಥರು ಹೇಳಿದರು.

ಶ್ರೀ ಗುರು ರಾಯರ 398ನೇ ಪಟ್ಟಾಭಿಷೇಕ ಮತ್ತು 494 ನೇ ವರ್ಧಂತಿ ನಿಮಿತ್ತ ಶುಕ್ರವಾರದಿಂದ ಆರಂಭವಾದ ಆರು ದಿನಗಳ ಶ್ರೀ ಗುರು ವೈಭವೋತ್ಸವ ಕಾರ್ಯಕ್ರಮ ಪೂರ್ವ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಸೈನಿಕರು ಉಗ್ರರಿಗೆ ಸರಿಯಾದ ಉತ್ತರ ನೀಡಿ, ದಮನ ಮಾಡಿರುವುದು ಸತ್ಯ ಸಂಗತಿ. ಈ ವಿಷಯದಲ್ಲಿ ಯಾವುದೇ ಪಕ್ಷಗಳು ರಾಜಕೀಯ ಮಾಡಬಾರದು. ದೇಶದ ಭದ್ರತೆ ಹಾಗೂ ಏಕತೆಗಾಗಿ ಎಲ್ಲರೂ ಜೊತೆಗೂಡಬೇಕು. ಪಕ್ಷಬೇಧ ಮಾಡಿಕೊಂಡು ಸಂಕುಚಿತ ಮನೋಭಾವ ತೋರಿಸಬಾರದು. ಯೋಧರಿಗೆ ಮಾನಸಿಕ ಸ್ಥೈರ್ಯ ತುಂಬಬೇಕು. ಸಾಧ್ಯವಾದ ಸಲಹೆಗಳನ್ನು ನೀಡಬೇಕು’ ಎಂದರು.

’ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶದ ರಕ್ಷಣೆಗಾಗಿ ಎದೆಕೊಟ್ಟು ನಿಂತವರ ಪರವಾಗಿ ಎಲ್ಲರೂ ನಿಲ್ಲಬೇಕು. ಮಂತ್ರಾಲಯ ಮಠದಿಂದ ಈಗಾಗಲೇ ಯೋಧರ ಕ್ಷೇಮಾಭಿವೃದ್ಧಿಗಾಗಿ ₹10 ಲಕ್ಷ ದೇಣಿಗೆ ನೀಡಲಾಗಿದೆ. ಈ ಮೊತ್ತವನ್ನು ಆಶೀರ್ವಾದ ರೂಪದಲ್ಲಿ ಕೊಡಲಾಗಿದೆ’ ಎಂದು ತಿಳಿಸಿದರು.

‘ರಾಮಮಂದಿರ ನಿರ್ಮಾಣ ವಿಷಯವಾಗಿ ಸುಪ್ರೀಂಕೋರ್ಟ್‌ ಹೇಳಿದ ರೀತಿಯಲ್ಲಿಯೇ ನಡೆದುಕೊಳ್ಳಬೇಕು. ರಾಮನು ಹುಟ್ಟಿದ ಈ ದೇಶದಲ್ಲಿ ರಾಮಮಂದಿರ ನಿರ್ಮಾಣ ಆಗಲೇ ಬೇಕು. ಆದರೆ, ಎಲ್ಲರ ಮನವೊಲಿಸಿ ಮಂದಿರ ನಿರ್ಮಾಣ ಶಾಂತಿ, ಸೌಹಾರ್ದದಿಂದ ಆಗಬೇಕು’ ಎಂದು ಹೇಳಿದರು.

12 ರಂದು ಮಹಾರುದ್ರಯಾಗ
ದೇಶಕ್ಕೆ ಮತ್ತು ಗಡಿಭಾಗದಲ್ಲಿರುವ ಸೈನಿಕರಿಗೆ ಒಳಿತು ಬಯಸಿ ಈ ವರ್ಷ ಮಹಾರುದ್ರ ಯಾಗವನ್ನು ಮಾರ್ಚ್‌ 12 ರಂದು ಏರ್ಪಡಿಸಲಾಗಿದೆ. ವಿವಿಧ ರಾಜ್ಯಗಳಿಂದ ಆಗಮಿಸುವ 200 ಕ್ಕೂ ಹೆಚ್ಚು ಋತ್ವಿಕರಿಂದ ಯಾಗ ಮಾಡಿಸಲಾಗುತ್ತಿದೆ. ಸೈನಿಕರಿಗೆ ಆತ್ಮಸ್ಥೈರ್ಯ, ಮನೋಧೈರ್ಯ ಬರಬೇಕು ಎನ್ನುವ ಉದ್ದೇಶ ಹೊಂದಲಾಗಿದೆ ಎಂದು ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !