ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು: ಕುಡಿಯುವ ನೀರು ಪೂರೈಕೆ ಸ್ಥಗಿತ; ಗ್ರಾಮಸ್ಥರ ಪರದಾಟ

ರಾಜೀವಗಾಂಧಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ನಿರ್ವಹಣೆ ವೈಫಲ್ಯ
ಅಕ್ಷರ ಗಾತ್ರ

ಲಿಂಗಸುಗೂರು: ತಾಲ್ಲೂಕಿನ ಯರಡೋಣ ಗ್ರಾಮದ ರಾಜೀವಗಾಂಧಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನಿರ್ವಹಣೆ ನಿರ್ಲಕ್ಷ್ಯದಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ. ತಾಲ್ಲೂಕಿನ ಐದು ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಚಿತ್ರಣ ಎಲ್ಲೆಡೆ ಕಾಣ ಸಿಗುತ್ತದೆ.

ಒಂದೂವರೆ ದಶಕದ ಹಿಂದೆ ಅವೈಜ್ಞಾನಿಕವಾಗಿ ಅನುಷ್ಠಾನಗೊಂಡಿರುವ ರಾಜೀವಗಾಂಧಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಆರಂಭದ ದಿನಗಳಿಂದಲು ಕುಂಟುಸುತ್ತ ಸಾಗಿದೆ. ಏಳು ಗ್ರಾಮಗಳಿಗೆ ಅನುಷ್ಠಾನಗೊಳ್ಳಬೇಕಿದ್ದ ಯೋಜನೆ ಚಿಕ್ಕಹೆಸರೂರು, ಯಲಗಲದಿನ್ನಿ ಗ್ರಾಮಗಳನ್ನು ಹೊರತು ಪಡಿಸಿ ಯರಡೋಣ, ಹೊನ್ನಳ್ಳಿ, ಗುಡದನಾಳ, ಕುಪ್ಪಿಗುಡ್ಡ, ಸರ್ಜಾಪುರ ಗ್ರಾಮಗಳಿಗೆ ಮಾತ್ರ ಅನುಷ್ಠಾನಗೊಂಡಿದ್ದು ಕೋಟ್ಯಂತರ ಹಣ ಲಪಟಾಯಿಸಿದ ಆರೋಪಗಳು ಕೇಳಿಬಂದಿವೆ.

ಅನುಷ್ಠಾನಗೊಂಡ 15 ವರ್ಷಗಳ ಅವಧಿಯಲ್ಲಿ ಹೊನ್ನಳ್ಳಿ, ಯರಡೋಣ, ಗುಡದನಾಳ, ಕುಪ್ಪಿಗುಡ್ಡ, ಸರ್ಜಾಪುರ ಗ್ರಾಮಸ್ಥರ ಪಾಲಿಗೆ ಶಾಪವಾಗಿ ಕಾಡುತ್ತಿದೆ. ಒಂದು ವರ್ಷವೂ ಕೂಡ ಶುದ್ಧ ಹಾಗೂ ಸಮರ್ಪಕ ಕುಡಿಯುವ ನೀರು ಪೂರೈಸಿದ ದಾಖಲೆಗಳು ಇಲ್ಲ. ಆರ್ಸೆನಿಕ್‍, ಫ್ಲೋರೈಡ್‍ ಯುಕ್ತ ನೀರಿನಿಂದ ಬಸವಳಿದ ಕುಪ್ಪಿಗುಡ್ಡ, ಸರ್ಜಾಪುರ, ಚಿಕ್ಕಹೆಸರೂರು ಗ್ರಾಮಸ್ಥರು ಆರಂಭಿಕ ದಿನಗಳಲ್ಲಿ ಕಂಡಿದ್ದ ಸುಂದರ ಕನಸು ನನಸಾಗದೆ ಸಂಕಷ್ಟ ಎದುರಿಸುವಂತಾಗಿದೆ.

ಹತ್ತು ದಿನಗಳಿಂದ ಕುಪ್ಪಿಗುಡ್ಡ, ಗುಡದನಾಳ ಗ್ರಾಮಗಳಲ್ಲಿ ಪರ್ಯಾಯ ವ್ಯವಸ್ಥೆ ಇಲ್ಲದೆ ಹೋಗಿದ್ದರಿಂದ ಹಣ ನೀಡಿ ಟ್ಯಾಂಕರ್‍ ಮೂಲಕ ನೀರು ತಂದುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಕುಪ್ಪಿಗುಡ್ಡದಲ್ಲಿ ಜನತೆ, ಜಾನುವಾರು ನೀರು ಸಿಗದೆ ಪರದಾಡುವಂತ ದುಃಸ್ಥಿತಿ ಬಂದಿದೆ. ಸಮಸ್ಯಾತ್ಮಕ ಹಳ್ಳಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡದೆ ಹೋದಲ್ಲಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಕುಪ್ಪಿಗುಡ್ಡ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

‘ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಲೇ ಬಂದಿರುವ ಕುಪ್ಪಿಗುಡ್ಡ ಗ್ರಾಮಸ್ಥರಿಗೆ ಶಾಶ್ವತ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ತಾರತಮ್ಯ ನಡೆದಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತಾಂತ್ರಿಕ ದೋಷ ಸರಿಪಡಿಸಿ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಆಡಳಿತ ಯಂತ್ರ ವಿಫಲವಾಗಿದೆ. ಪಂಚಾಯಿತಿ ಅಡಳಿತ ಮಂಡಳಿ, ಅಧಿಕಾರಿಗಳ ಹೊಂದಾಣಿಕೆ ಕೊರತೆ ಶಾಶ್ವತವಾಗಿ ಸಮಸ್ಯೆಯಾಗಿ ಕಾಡುತ್ತಿದೆ’ ಎಂದು ಸಮಾಜ ಸೇವಕ ಹನುಮಂತರಾಯ ನೆಲೊಗಿ ಆರೋಪಿಸುತ್ತಾರೆ.

ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‍ ಸಹಾಯಕ ಎಂಜಿನಿಯರ್ವಾಸೀಮ್‍ ಮಾತನಾಡಿ, ‘ಯರಡೋಣ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೆರೆಯಿಂದ ಪಂಪ್ ಮಾಡುವ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಶನಿವಾರ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದರು ಕೂಡ ಮತ್ತೊಮ್ಮೆ ದುರಸ್ತಿಗೆ ಬಂದಿದೆ. ಹೀಗಾಗಿ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಒಂದೆರಡು ದಿನಗಳಲ್ಲಿ ಶಾಶ್ವತ ದುರಸ್ತಿ ಪೂರ್ಣಗೊಳ್ಳಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT