ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ: ಆಮೆಗತಿಯ ಕುಡಿಯುವ ನೀರಿನ ಕಾಮಗಾರಿ

ನಗರೋತ್ಥಾನ ಇಲಾಖೆಯ ₹ 4.25 ಕೋಟಿ ವಿಶೇಷ ಅನುದಾನ
Last Updated 3 ಜುಲೈ 2021, 19:30 IST
ಅಕ್ಷರ ಗಾತ್ರ

ಮಸ್ಕಿ: ನಗರೋತ್ಥಾನ ಇಲಾಖೆಯ ವಿಶೇಷ ಅನುದಾನದಲ್ಲಿ ಆರಂಭವಾದ ಪಟ್ಟಣದ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್ ಕಾಮಗಾರಿ ಅಮೆಗತಿಯಲ್ಲಿ ಸಾಗಿದೆ.

2018-19 ಸಾಲಿನ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್‌ಗಳ ಬದಲಾವಣೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕದ ದುರಸ್ತಿಗಾಗಿ ಸರ್ಕಾರ ನಗರೋತ್ಥಾನ ಇಲಾಖೆ ಮೂಲಕ ₹ 4.25 ಕೋಟಿ ವಿಶೇಷ ಅನುದಾನ ನೀಡಿತ್ತು.

ಯೋಜನೆಯ ಗುತ್ತೆಗೆ ವಹಿಸಿಕೊಂಡ ಗುತ್ತಿಗೆದಾರರು ಒಂದು ವರ್ಷದ ಹಿಂದೆಯೇ ಪೈಪ್‌ಗಳನ್ನು ತಂದು ಪಟ್ಟಣದ ಪೈಪ್‌ಲೈನ್ ಹಾದು ಹೋಗುವಲ್ಲಿ ಹಾಕಿದ್ದಾರೆ. ಆದರೆ, ತಾಂತ್ರಿಕ ತೊಂದರೆ ಹಾಗೂ ಅಡ್ಡಿ ಆತಂಕಗಳ ನೆಪ ಹೇಳಿ ಗುತ್ತಿಗೆದಾರರು ಕಾಮಗಾರಿ ಚುರುಕುಗೊಳಿಸದೆ ನಿಧಾನಗತಿಯಲ್ಲಿ ಮಾಡುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೈಪ್‌ಲೈನ್ ಗುತ್ತಿಗೆ ವಹಿಸಿಕೊಂಡಿರುವ ಗುತ್ತಿಗೆದಾರರು ಅರೆಬರೆಯಾಗಿ ಪೈಪ್ ಅಳವಡಿಸುವ ಕೆಲಸ ಮಾಡಿದ್ದಾರೆ. ಪರಾಪೂರ ರಸ್ತೆ, ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತೆರಳುವ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳನ್ನು ಪೈಪ್ ಹಾಕಲು ಗುಂಡಿ ತೆಗೆದು ಹಾಗೆಯೇ ಬಿಟ್ಟಿದ್ದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಸುಗಮ ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ.

ಪೈಪ್‌ಲೈನ್ ಕಾಮಗಾರಿ 9 ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂಬ ಷರತ್ತು ಇದ್ದರೂ ಸಹ ಪುರಸಭೆಯ ಕುಡಿಯುವ ನೀರಿನ ಯೋಜನೆ ಜವಾಬ್ದಾರಿ ವಹಿಸಿಕೊಂಡಿರುವ ಅಧಿಕಾರಿಗಳು ಈ ಯೋಜನೆಯ ಗುತ್ತಿಗೆದಾರರಿಗೆ ಕೆಲಸ ಬೇಗ ಪೂರ್ಣಗೊಳಿಸಿ ಎಂದು ಸೂಚನೆ ನೀಡಿ ಕೈ ತೊಳೆದುಕೊಂಡಿದ್ದಾರೆ.

ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂಬ ಉದ್ದೇಶದಿಂದ ಸರ್ಕಾರ ಕೋಟ್ಯಾಂತರ ರೂಪಾಯಿ ಹಣ ಬಿಡುಗಡೆ ಮಾಡಿದ್ದರೂ ಸಹ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಯೋಜನೆ ಹಳ್ಳ ಸೇರುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

*
ಪೈಪ್‌ಲೈನ್ ಕಾಮಗಾರಿ ಚುರುಕುಗೊಳಿಸುವಂತೆ ಈಗಾಗಲೇ ಯೋಜನೆಯ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತೇವೆ.
-ಪಂಚಮುಖಿ, ಎಂಜಿನಿಯರ್, ಜಲ ಮಂಡಳಿ ರಾಯಚೂರು

*
ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಬೇಗ ಪೂರ್ಣಗೊಳಿಸಿ ಪುರಸಭೆಗೆ ಹಸ್ತಾಂತರಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
-ಹನುಮಂತಮ್ಮ ನಾಯಕ, ಮುಖ್ಯಾಧಿಕಾರಿ, ಪುರಸಭೆ, ಮಸ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT