ಶುಕ್ರವಾರ, ಸೆಪ್ಟೆಂಬರ್ 17, 2021
22 °C
ದಲಿತ ಸಂರಕ್ಷ ಸಮಿತಿ ಪದಾಧಿಕಾರಿಗಳಿಂದ ಜಿಲ್ಲೆಯಾದ್ಯಂತ ಪ್ರತಿಭಟನೆ: ಅಧಿಕಾರಿಗಳಿಗೆ ಮನವಿ ಸಲ್ಲಿಕೆ

ರಾಯಚೂರು: ಸದಾಶಿವ ವರದಿ ಜಾರಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನ್ಯಾ. ಎ.ಜೆ.ಸದಾಶಿವ ವರದಿ ಜಾರಿಗೊಳಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿ ದಲಿತ ಸಂರಕ್ಷ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಪರಿಶಿಷ್ಟ ಜಾತಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು. ಎಲ್ಲಾ ಜಾತಿಗಳು ಶೈಕ್ಷಣಿಕ, ಸಾಮಾಜಿಕ ಸಮಾನ ಮಿಸಲಾತಿ ಪಡೆಯುವುದು ಸಂವಿಧಾನದ ಆಶಯ. ಎಸ್.ಎಂ.ಕೃಷ್ಣ ಅವರ ಆಡಳಿತ ಅವಧಿಯಲ್ಲಿ ಸಮಿತಿ ರಚಿಸಲಾಗಿತ್ತು. ಪರಿಶಿಷ್ಟ ಜಾತಿಯ ಎಲ್ಲಾ ಸಮುದಾಯದ ಶೈಕ್ಷಣಿಕ, ಆರ್ಥಿಕ ಸಾಮಾಜಿಕ ಅಧ್ಯಯನ ನಡೆಸಿ ಸರ್ಕಾರಕ್ಕೆ ಸಮಿತಿ ವರದಿ ಸಲ್ಲಿಸಿದರೂ ವರದಿ ಜಾರಿಮಾಡದೇ ಕಾಲಹರಣ ಮಾಡಲಾಗುತ್ತಿದೆ ಎಂದು ದೂರಿದರು.

ಕೂಡಲೇ ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಾಲಸ್ವಾಮಿ ಜಿನ್ನಾಪುರ, ಪೌಲ್ ರಾಜ್, ಮೌನೇಶ ಹಾಗೂ ಶೇಖರ ಇದ್ದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
ಲಿಂಗಸುಗೂರು:
ನಡುಗಡ್ಡೆಗಳ ಶಾಶ್ವತ ಸ್ಥಳಾಂತರ, ಡಾ.ಸದಾಶಿವ ವರದಿ ಅನುಷ್ಠಾನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂರಕ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸೋಮವಾರ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿ ರಾಹುಲ್‍ ಸಂಕನೂರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಕಾಂಗ್ರೆಸ್‍, ಜೆಡಿಎಸ್‍ ಹಾಗೂ ಬಿಜೆಪಿ ಪಕ್ಷಗಳು ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಸಾಮೂಹಿಕ ಬೆಂಬಲ ವ್ಯಕ್ತಪಡಿಸಬೇಕು ಎಂದು ಒತ್ತಾಯಿಸಿದರು.

ಮೂರು ದಶಕಗಳಿಂದ ಮಳೆಗಾಲದಲ್ಲಿ ಕೃಷ್ಣಾ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕುತ್ತಿರುವ ಮ್ಯಾದರಗಡ್ಡಿ, ಕರಕಲಗಡ್ಡಿ, ವೆಂಕಮ್ಮನಗಡ್ಡಿ ಹಾಗೂ ಕಡದರಗಡ್ಡಿಯ ಪರಿಶಿಷ್ಟ ಜನಾಂಗದವರನ್ನು ಶಾಶ್ವತವಾಗಿ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಮೀಸಲಾತಿ ಕ್ಷೇತ್ರದಲ್ಲಿ ಬಾಬು ಜಗಜೀವನರಾಂ ಹೆಸರಲ್ಲಿ ಮೀಸಲಿಟ್ಟಿದ್ದ ನಿವೇಶನವನ್ನು ರೈತ ಸಂಪರ್ಕ ಕೇಂದ್ರಕ್ಕೆ ಹಸ್ತಾಂತರ ಮಾಡಲಾಗಿದೆ. ಕೂಡಲೇ ನಿವೇಶನ ನೀಡುವ ಜತೆಗೆ ಅನುದಾನ ಬಿಡುಗಡೆಗೊಳಿಸಬೇಕು ಎಂದು ಹೇಳಿದರು.

ಮೋಹನ್‍ ಗೋಸ್ಲೆ, ಮರಿಸ್ವಾಮಿ ಚಿಕ್ಕಹೆಸರೂರ, ಹನುಮಂತ ಬಡಿಗೇರ, ರಮೇಶ ಮ್ಯಾಗಳಮನಿ, ನಾಗರಾಜ ಯರಡೋಣಿ, ಸರುಣ್‍ ಸಿಕ್ಕಹೆಸರೂರ, ಕುಪ್ಪಣ್ಣ ಹೊಸಮನಿ, ಅನಿಲಕುಮಾರ, ಲಿಂಗಣ್ಣ ಹಟ್ಟಿ, ರಮೇಶ ಗೋಸ್ಲೆ, ಪ್ರೇಮಜೀವಿ, ಅಮರೇಶ ಮುದಗಲ್‍, ಶ್ರೀನಿವಾಸ ಭಂಡಾರಿ, ಲಕ್ಕಪ್ಪ ಕಮಲದಿನ್ನಿ, ದೇವೇಂದ್ರಪ್ಪ, ಸಂಗಪ್ಪ ಹಾಗೂ ಬಸವರಾಜ ಇದ್ದರು.

‘ಸಮಾನ ನ್ಯಾಯ ಒದಗಿಸಿ’
ಸಿಂಧನೂರು:
ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿ ಯಥಾವತ್ತಾಗಿ ಅಂಗೀಕರಿಸಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿ ದಲಿತ ಸಂರಕ್ಷ ಸಮಿತಿ ಕರ್ನಾಟಕ ತಾಲ್ಲೂಕು ಘಟಕ ಸೋಮವಾರ ಸ್ಥಳೀಯ ಮಿನಿವಿಧಾನಸೌಧ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಸಿತು.

ಪರಿಶಿಷ್ಟ ಜಾತಿಗಳಲ್ಲಿರುವ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆಯಾಗಿ ಎಲ್ಲರಿಗೂ ಸಮಾನ ಅವಕಾಶ ದೊರಕಿಸಿ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು ಎನ್ನುವುದು ಸಂವಿಧಾನದ ಆಶಯವಾಗಿದೆ. ಈ ಹಿಂದೆ ಎಸ್.ಎಂ.ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ನೇತೃತ್ವದಲ್ಲಿ ಆಯೋಗ ರಚಿಸಿ, ಪರಿಶಿಷ್ಟ ಜಾತಿಗೆ ಸೇರಿದ ಎಲ್ಲ ವರ್ಗಗಳ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಕೂಲಂಕುಶವಾಗಿ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆದರೆ ಸರ್ಕಾರಗಳು ವಿಧಾನಸಭೆಯಲ್ಲಿ ಮಂಡಿಸಿ ಜಾರಿಗೆ ಮಂದಾಗದೆ ಕಾಲಹರಣ ಮಾಡುತ್ತಿರುವುದು ಸಂವಿಧಾನ ವಿರೋಧಿಯಾಗಿದೆ ಎಂದು ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಮೌಲಪ್ಪ ಐಹೊಳೆ ಅವರು
ದೂರಿದರು.

ಈ ಹಿಂದೆ ಕಾಂಗ್ರೆಸ್ ಪಕ್ಷ ಸದಾಶಿವ ವರದಿಯನ್ನು ಜಾರಿಗೆ ತರುತ್ತೇವೆಂದು ಮಾದಿಗರ ಮತಗಳನ್ನು ಪಡೆದು ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ನಂತರ ವರದಿಯತ್ತ ತಿರುಗಿಯೂ ನೋಡಲಿಲ್ಲ. ಅದೇ ರೀತಿ ಬಿಜೆಪಿ ಸರ್ಕಾರ ಮಾತು ಕೊಟ್ಟಿದೆ. ಆದಾಗ್ಯೂ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಹಿಂದೇಟು ಹಾಕುತ್ತಿರುವ ಧೋರಣೆ ಖಂಡನೀಯ. ಆದಷ್ಟು ಶೀಘ್ರ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಭಂಗ ಚಳವಳಿ ಅನಿವಾರ್ಯವಾಗುತ್ತದೆ ಎಂದು ಸಮಿತಿ ಗೌರವಾಧ್ಯಕ್ಷ ಶ್ರೀನಿವಾಸ ರೈತನಗರ ಎಚ್ಚರಿಕೆ ನೀಡಿದರು.

ಶಿರಸ್ತೇದಾರ್ ಮನವಿ ಪತ್ರ ಸ್ವೀಕರಿಸಿದರು.

ತಾಲ್ಲೂಕು ಘಟಕದ ಉಪಾಧ್ಯಕ್ಷ ಬಸವರಾಜ ಯಾಪಲಪರ್ವಿ, ಪ್ರಧಾನ ಕಾರ್ಯದರ್ಶಿ ಮೌಲಪ್ಪ ಯಾಪಲಪರ್ವಿ, ಸಹಕಾರ್ಯದರ್ಶಿ ಹನುಮಂತ ರೈತನಗರ, ಸದಸ್ಯರಾದ ದೇವರಾಜ, ನಾಗೇಶ ವಲ್ಕಂದಿನ್ನಿ, ಬಸವರಾಜ ವಲ್ಕಂದಿನ್ನಿ, ಶರಣಪ್ಪ ಹಂಚಿನಾಳಕ್ಯಾಂಪ್, ಗಣೇಶ ದಿದ್ದಿಗಿ, ಮರಿಯಪ್ಪ ಚಿರು ಸೇರಿದಂತೆ ಹಲವರು ಇದ್ದರು.

‘ಯಥಾವತ್ತಾಗಿ ಜಾರಿ ಮಾಡಿ’
ಮಾನ್ವಿ: 
ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗಾಗಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ದಲಿತ ಸಂರಕ್ಷ ಸಮಿತಿಯ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಸೋಮವಾರ ತಹಶೀಲ್ದಾರ್ ಅಬ್ದುಲ್ ವಾಹಿದ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ನೀಡಿರುವ ಶಿಫಾರಸ್ಸುಗಳನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ವರದಿಯಲ್ಲಿನ ಶಿಫಾರಸ್ಸುಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು ಎಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಲಾಗಿದೆ.

ದಸಂಸ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಅಮರನಾಥ ಉದ್ಬಾಳ, ಇತರ ಪದಾಧಿಕಾರಿಗಳಾದ ರಂಜಿತ್ ಕೊಡ್ಲಿ, ಅನಿಲ್ ದೋತರಬಂಡಿ, ಅಮರೇಶ ದೋತರಬಂಡಿ, ದ್ಯಾವಣ್ಣ ಡಿ, ಪಾಮೇಶ, ಮರಿಯಣ್ಣ, ಹನುಮೇಶ ಪನ್ನೂರು, ಸುನಿಲ್ ಪನ್ನೂರು ಹಾಗೂ ದುರುಗಪ್ಪ ಇದ್ದರು.

‘ತಳಸಮುದಾಯಕ್ಕೆ ನ್ಯಾಯ ನೀಡಿ’
ಸಿರವಾರ:
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ವಿಧಾ ಸಭೆಯಲ್ಲಿ ಮಂಡಿಸಿ, ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ದಲಿತ ಸಂರಕ್ಷ ಸಮಿತಿ ಪದಾಧಿಕಾರಿಗಳು ತಹಶೀಲ್ ಕಚೇರಿ ಸಿಬ್ಬಂದಿಗೆ ಸೋಮವಾರ ಮನವಿ ಸಲ್ಲಿಸಿದರು.

ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ಪರಿಶಿಷ್ಟ ಜಾತಿಯ ಎಡಗೈ ಸಮುದಾಯ ಕಳೆದ ಎರಡು ದಶಕಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದೆ. ಈ ಹಿಂದೆ ಎಸ್.ಎಂ.ಕೃಷ್ಣ ಸರ್ಕಾರ ಒಳಮೀಸಲಾತಿ ನೀಡಲು ಆಯೋಗ ರಚಿಸಿತ್ತು. ಪರಿಶಿಷ್ಟ ಜಾತಿಗೆ ಸೇರಿದ ಎಲ್ಲ ವರ್ಗಗಳ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಸದಾಶಿವ ಆಯೋಗ ವರದಿ ಸಲ್ಲಿಸಿದೆ. ಆದರೆ ವರದಿಯನ್ನು ಜಾರಿ ಮಾಡದೇ ನಿರ್ಲಕ್ಷ್ಯವಹಿಸಲಾಗಿದ್ದು, ಕೂಡಲೇ ವರದಿ ಜಾರಿ ಮಾಡಬೇಕು ಎಂದು ಆಗ್ರಹಿಸಲಾಯಿತು.

ಪಟ್ಟಣದ ಬಸವ ವೃತ್ತದಿಂದ ತಹಶೀಲ್ ಕಚೇರಿಯವರೆಗೆ ಕಾಲ್ನಡಿಗೆ ಜಾಥಾದ ಮೂಲಕ‌ ತೆರಳಿ ಮನವಿ ಸಲ್ಲಿಸಲಾಯಿತು.

ದಲಿತ ಸಂರಕ್ಷ ಸಮಿತಿ ತಾಲ್ಲೂಕ ಘಟಕದ ಅಧ್ಯಕ್ಷ ವಿಜಯಕುಮಾರ ಲಡಕಲ್, ಉಪಾಧ್ಯಕ್ಷ ಸಂಗನಬಸವ ಹೀರಾ, ಗೌರವಾಧ್ಯಕ್ಷ ಹನುಮಂತ ಹಿರೇಕೊಟ್ನೆಕಲ್, ಕೆ. ರಾಘವೇಂದ್ರ ಖಜಾಗೌಡ, ಸಿಮಾನ್ ದೊಡ್ಮನಿ, ಹನುಮಂತ, ಬಸವರಾಜ ಡೊಂಗ್ರಿ , ಹುಸೇನಪ್ಪ ಕವಿತಾಳ, ಶಾಂತಪ್ಪ ಪಿತ್ತಗಲ್, ಜೋಸೆಫ್ ಕಡತಲ್ ಕವಿತಾಳ, ಸಂತೋಷ ಕಲ್ಲಶೆಟ್ಟಿ ಕವಿತಾಳ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.