ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಸಮರ್ಪಕ ನಿರ್ವಹಣೆಗೆ ನಿರಾಸಕ್ತಿ: ಕೋಟಿ ಸುರಿದರೂ ಬೆಳೆಯದ ಅರಣ್ಯ

Published 18 ಡಿಸೆಂಬರ್ 2023, 5:18 IST
Last Updated 18 ಡಿಸೆಂಬರ್ 2023, 5:18 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಪ್ರತಿ ವರ್ಷ ಕೋಟ್ಯಂತರ ಖರ್ಚು ಮಾಡಿ ಅರಣ್ಯ ಇಲಾಖೆ ಗಿಡ ಮರಗಳನ್ನು ಬೆಳೆಸುತ್ತಿರುವುದನ್ನು ದಾಖಲೆಗಳಲ್ಲಿ ನೋಡಿದರೆ ಇಷ್ಟೊತ್ತಿಗೆ ಜಿಲ್ಲೆ ಅರಣ್ಯ ಪ್ರದೇದಿಂದಲೇ ಆವರಿಸಿಕೊಂಡಿರಬೇಕಿತ್ತು. ಅಂತಹ ಯಾವುದೇ ಮ್ಯಾಜಿಕ್ ನಡೆದಿಲ್ಲ.

ಸಾಮಾಜಿಕ ಅರಣ್ಯ ವಿಭಾಗದವರು ಬೆಳೆಸಿದ ಗಿಡ ಮರಗಳು ಮಾತ್ರ ಸ್ವಲ್ಪ ಮಟ್ಟಿಗೆ ಬೆಳೆದಿದ್ದು, ಪ್ರಾದೇಶಿಕ ಅರಣ್ಯ ವಿಭಾಗದವರು ಬೆಳೆಸಿದ ಸಸಿಗಳು ಕಡತದಲ್ಲೇ ಉಳಿದುಕೊಂಡಿವೆ. ಅತಿ ಹೆಚ್ಚು ಕೃಷಿ ಉತ್ಪನ್ನ ಬೆಳೆಯುವ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಗಿಡಗಳೇ ಬೆಳೆಯದಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಕರ್ನಾಟಕದ ಈಶಾನ್ಯ ವಲಯದಲ್ಲಿರುವ ರಾಯಚೂರು ಅರಣ್ಯ ವಲಯ 35,148,52 ಹೆಕ್ಟೇರ್‌ಗಳಷ್ಟು ವಿಸ್ತಾರ ಹೊಂದಿದೆ. ಶೇಕಡ 4.19 ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಜಿಲ್ಲೆಯ ಬಂಕಲದೊಡ್ಡಿ, ಜಾಲಹಳ್ಳಿ, ಕವಿತಾಳ, ಕುಮಾರಖೇಡ, ದೇವದುರ್ಗ ತಾಲ್ಲೂಕಿನಲ್ಲಿ ಒಣ ಎಲೆಯುದುರುವ ಕಾಡು ಇದೆ. ಪ್ರಾದೇಶಿಕ ವಿಭಾಗ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಅರಣ್ಯ ಅಭಿವೃದ್ಧಿ ನೆಲಕಚ್ಚಿದೆ.

ಸಾಮಾಜಿಕ ಅರಣ್ಯ ವಿಭಾಗಕ್ಕೆ ಹೊಸದಾಗಿ ಡಿಸಿಎಫ್‌ ಆಗಿ ಬಂದಿರುವ ಸುರೇಶ ಬಾಬು ತಂಡದವರು ಮಾತ್ರ ಗಿಡಮರಗಳನ್ನು ಬೆಳೆಸಲು ವಿಶೇಷ ಆಸಕ್ತಿ ತೋರಿದ ಪರಿಣಾಮ ಬರದ ಮಧ್ಯೆಯೂ ಈ ವರ್ಷ ಶೇಕಡ 70ರಷ್ಟು ಸಸಿಗಳು ಜೀವ ಉಳಿಸಿಕೊಂಡಿವೆ.

ಪ್ರಾದೇಶಿಕ ಅರಣ್ಯ ವಿಭಾಗ ಈ ವರ್ಷ ಕೇವಲ 900 ಗಿಡಗಳನ್ನು ನೆಟ್ಟಿದೆಯಂದು ದಾಖಲೆಯಲ್ಲಿ ತೋರಿಸಿದೆ. ನರೇಗಾದಲ್ಲಿ ಕೇವಲ 800 ಸಸಿಗಳನ್ನು ನೆಡಲಾಗಿದೆ. ಖಾಸಗಿ ಜಮೀನಿನಲ್ಲಿ 800 ಗಿಡ ನೆಡುವ ಯೋಜನೆ ಹಾಕಿಕೊಂಡರೂ ನೆಟ್ಟಿರುವುದು ಕೇವಲ 100 ಗಿಡ. ಇಲಾಖೆ ಸಾಧನೆ ಶೇಕಡ 13 ದಾಟಿಲ್ಲ.

ಮಳೆ ಕೊರತೆ: ಒಣಗಿದ ನೂರಾರು ಗಿಡಗಳು

ಮಳೆ ಕೊರತೆಯಿಂದ ಮಾನ್ವಿ ತಾಲ್ಲೂಕಿನ ವಿವಿಧೆಡೆ ಅರಣ್ಯ ಇಲಾಖೆ ವತಿಯಿಂದ ನೆಡಲಾಗಿದ್ದ ಗಿಡಗಳು ಒಣಗಿವೆ.

ಮೂರು ವರ್ಷಗಳ ಹಿಂದೆ ಮಾನ್ವಿ ಪಟ್ಟಣದಿಂದ ಪೋತ್ನಾಳ ಗ್ರಾಮದವರೆಗೆ ರಾಜ್ಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಮತ್ತು ಪೋತ್ನಾಳ ಗ್ರಾಮದಿಂದ ಖರಾಬದಿನ್ನಿ ಗ್ರಾಮದ ರಸ್ತೆಯ ಬದಿಯಲ್ಲಿ ಬೇವು ಸೇರಿ ಅನೇಕ ಮಾದರಿಯ ನೂರಾರು ಸಸಿಗಳನ್ನು ನೆಡಲಾಗಿತ್ತು. ಈಗ ಗಿಡಗಳು ಒಣಗಿ ನಿಂತಿವೆ.

ಮಾನ್ವಿ ಪಟ್ಟಣದಲ್ಲಿ ಸಾಮಾಜಿಕ ಅರಣ್ಯ ವಿಭಾಗದ ಸಿಬ್ಬಂದಿ ಸಸಿಗಳನ್ನು ನೆಟ್ಟಿದ್ದರು. ನಿರ್ವಹಣೆಯ ಹೊಣೆಯನ್ನು ಪುರಸಭೆ ಅಧಿಕಾರಿಗಳಿಗೆ ನೀಡಲಾಗಿತ್ತು. ಆದರೆ, ಪುರಸಭೆ ಸಿಬ್ಬಂದಿ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಳ್ಳಲೇ ಇಲ್ಲ.

ಅರಣ್ಯ ಇಲಾಖೆ ವತಿಯಿಂದ ಅರಣ್ಯ ಸಪ್ತಾಹ ಆಚರಣೆ ಅಂಗವಾಗಿ ಶಾಲಾ–ಕಾಲೇಜುಗಳ ಆವರಣದಲ್ಲಿ ನೆಟ್ಟಿದ್ದ ಸಸಿಗಳ ಬೆಳವಣಿಗೆಗೆ ತೊಂದರೆಯಾಗಿಲ್ಲ. ಮಾನ್ವಿ ಪಟ್ಟಣದ ಮಲ್ಲಿಕಾರ್ಜುನ ಬೆಟ್ಟದಲ್ಲಿರುವ ಟ್ರೀ ಪಾರ್ಕ್‌ನಲ್ಲಿ ನೀರಿನ ಸೌಲಭ್ಯ ಇರುವ ಕಾರಣ ಮರ–ಗಿಡಗಳ ಬೆಳವಣಿಗೆಗೆ ಧಕ್ಕೆಯಾಗಿಲ್ಲ. ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬೆಳೆಸಲು ಉದ್ದೇಶಿಸಿದ್ದ ಗಿಡಗಳು ಒಣಗಿದ್ದು, ಅರಣ್ಯ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಗಮನಹರಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಸಸಿ ನೆಟ್ಟ ನೆನಪು ಮಾತ್ರ

ಕವಿತಾಳ: ಅರಣ್ಯ ಇಲಾಖೆ ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳು ಪರಿಸರ ಜಾಗೃತಿ ಮೂಡಿಸುವುದರ ಜತೆಗೆ ಪ್ರತಿ ವರ್ಷ ಸಾವಿರಾರು ಸಸಿಗಳನ್ನು ನೆಡುತ್ತಿದ್ದರೂ ಅರಣ್ಯ ಪ್ರದೇಶ ಹೆಚ್ಚಳ ಮೇಲ್ನೋಟಕ್ಕೆ ಬಂಡು ಬರುತ್ತಿಲ್ಲ.

ಕಡ್ಡೋಣಿ ತಿಮ್ಮಾಪುರ (ಊಟಿ) ಮತ್ತು ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ಪ್ರತಿ ವರ್ಷ ಸಾವಿರಾರು ಸಸಿಗಳನ್ನು ಬೆಳೆಸಿ ಇಲಾಖೆ ವತಿಯಿಂದ ಕೆಲವನ್ನು ನೆಡಲಾಗುತ್ತದೆ. ಉಳಿದವುಗಳನ್ನು ಸಂಘ ಸಂಸ್ಥೆಗಳು ಮತ್ತು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ.

ಇಲ್ಲಿನ ಕಡ್ಡೋಣಿ ತಿಮ್ಮಾಪುರ ನರ್ಸರಿಯಲ್ಲಿ ಕಳೆದ ವರ್ಷ 55 ಸಾವಿರ ಸಸಿ ಬೆಳೆಸಿ 5 ಸಾವಿರ ಸಸಿಗಳನ್ನು ಇಲಾಖೆ ವತಿಯಿಂದ ನೆಡಲಾಗಿದೆ ಮತ್ತು ಪ್ರಸಕ್ತ ವರ್ಷ 13,800 ಸಸಿಗಳನ್ನು ಬೆಳೆಸಲಾಗಿದೆ.

ಸರ್ಕಾರಿ ಶಾಲಾ–ಕಾಲೇಜು, ವಿವಿಧ ಸರ್ಕಾರಿ ಕಚೇರಿಗಳ ಆವರಣ ಮತ್ತು ರಸ್ತೆ ಬದಿ ಸಸಿಗಳನ್ನು ನೆಟ್ಟರೂ ಅವುಗಳಿಗೆ ನೀರು ಹಾಕಿ ಪೋಷಿಸುವ ಹಾಗೂ ಜನ ಜಾನುವಾರುಗಳಿಂದ ರಕ್ಷಿಸುವ ಬಗ್ಗೆ ಇಲಾಖೆ ಅಧಿಕಾರಿಗಳು ಕಾಳಜಿ ವಹಿಸದ ಕಾರಣ ಸಸಿ ನೆಡುವುದು ದಾಖಲೆಗೆ ಮಾತ್ರ ಸಿಮೀತವಾಗುತ್ತದೆ ಹೊರತು ಸಸಿಗಳು ಬೆಳೆದು ಮರಗಳಾಗುವುದು ಕಡಿಮೆ ಎನ್ನುವ ಆರೋಪ ಇದೆ.

ಪ್ರತಿ ವರ್ಷ ನೆಡುವ ಸಸಿಗಳಲ್ಲಿ ವಿವಿಧ ಕಾರಣಗಳಿಂದ ಶೇ 10 ರಷ್ಟು ಬೆಳವಣಿಗೆಯಾಗುವುದಿಲ್ಲ. ಈ ವರ್ಷ ಮಳೆ ಕೊರತೆ ಹಿನ್ನೆಲೆಯಲ್ಲಿ ಈ ಪ್ರಮಾಣ ಹೆಚ್ಚಬಹುದು. ಆದಾಗ್ಯೂ ಬೇಸಿಗೆಯಲ್ಲಿ ಮತ್ತೆ ಚಿಗುರುವ ಅವಕಾಶಗಳು ಇರುತ್ತದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಅಧಿಕಾರಿಯೊಬ್ಬರು ಹೇಳಿದರು.

ಅರಣ್ಯ ಸಂರಕ್ಷಣೆಗೆ ಹರಸಾಹಸ

ಲಿಂಗಸುಗೂರು: ತಾಲ್ಲೂಕಿನಾದ್ಯಂತ ಅರಣ್ಯ ಪ್ರದೇಶ ಸೇರಿ ಪ್ರಮುಖ ರಸ್ತೆ, ಸರ್ಕಾರಿ ಕಚೇರಿಗಳ ಆವರಣದಲ್ಲಿ ಸಸಿಗಳನ್ನು ನೆಟ್ಟು ಸಂರಕ್ಷಣೆ ಮಾಡಲು ಅರಣ್ಯ ಇಲಾಖೆ ಅವಿರತವಾಗಿ ಶ್ರಮಿಸುತ್ತಿದೆ. ಆದರೆ, ಇಲ್ಲಿ ಸಾರ್ವಜನಿಕರಿಂದಲೇ ಸಹಕಾರ ಸಿಗುತ್ತಿಲ್ಲ.

ಪ್ರತಿ ವರ್ಷ ಲಕ್ಷಾಂತರ ಸಸಿಗಳನ್ನು ಬೆಳೆಸಿ ಇಲಾಖೆ ನೆಡುವ ಜತೆಗೆ ರೈತರಿಗೆ ರಿಯಾಯಿತಿ ದರದಲ್ಲಿ ಸಸಿಗಳ ಮಾರಾಟ ಮಾಡಲಾಗುತ್ತಿದೆ. ಆದರೆ, ನಿರೀಕ್ಷಿತ ಪ್ರಮಾಣದ ಗಿಡ ಮರ ಬೆಳೆದು ಪರಿಸರ ಕಾಪಾಡುವಲ್ಲಿ ವಿಫಲವಾಗಿದ್ದು ಮೇಲ್ನೊಟಕ್ಕೆ ಕಂಡು ಬರುತ್ತದೆ.

ದೇವದುರ್ಗ ತಾಲ್ಲೂಕಿನಾದ್ಯಂತ ರಸ್ತೆ ಬದಿಯಲ್ಲಿ ಮತ್ತು ಸರ್ಕಾರಿ ಶಾಲಾ–ಕಾಲೇಜುಗಳು ಹಾಗೂ ವಿವಿಧ ಇಲಾಖೆಗಳ ಆವರಣದಲ್ಲಿ ಅರಣ್ಯ ಇಲಾಖೆ ನೆಟ್ಟ ಸಸಿಗಳು ನಿರ್ವಹಣೆ ಇಲ್ಲದೆ ಒಣಗಿವೆ.

ಪಟ್ಟಣದ ಹೊರವಲಯದಲ್ಲಿನ ವಿದ್ಯಾಗಿರಿ ಪ್ರದೇಶದಲ್ಲಿನ ಡಿಪ್ಲೊಮಾ, ಐಟಿಐ, ಕನ್ನಡ ವಿಶ್ವವಿದ್ಯಾಲಯ ಹಂಪಿ ವಿಸ್ತರಣಾ ಕೇಂದ್ರ, ಕಿತ್ತೂರು ರಾಣಿ ಚನ್ನಮ್ಮ, ವಸತಿ ಶಾಲೆ, ಎಸ್‌ಟಿ, ಎಸ್ಸಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ವಸತಿ ನಿಲಯಗಳ ಆವರಣದಲ್ಲಿ ಮಳೆಗಾಲದಲ್ಲಿ ಆಸಕ್ತಿಯಿಂದ ಸಸಿ ನೆಡುವ ಅರಣ್ಯ ಇಲಾಖೆ ಮಳೆ ಬಾರದ ಸಮಯದಲ್ಲಿ ಗಿಡಗಳಿಗೆ ನೀರು ಹಾಕಿಲ್ಲ. ಈಗ ನೆಟ್ಟ ಗಿಡಗಳು ಒಣಗಿ ನಿಂತಿವೆ.

ತಾಲ್ಲೂಕಿನಾದ್ಯಂತ ರಸ್ತೆ ಅಕ್ಕಪಕ್ಕ, ರೈತರ ಜಮೀನುಗಳಲ್ಲಿ, ಶಾಲಾ-ಕಾಲೇಜುಗಳ ಆವರಣ ಸೇರಿ ಅರಣ್ಯ ಇಲಾಖೆಯಿಂದ 30 ಸಾವಿರಕ್ಕೂ ಹೆಚ್ಚಿನ ಗಿಡಗಳನ್ನು ನೆಡಲಾಗಿದೆ. ರಸ್ತೆಗಳ ಅಕ್ಕಪಕ್ಕ ನೆಟ್ಟಿರುವ ಗಿಡಗಳ ನಿರ್ವಹಣೆಯನ್ನು ಮಾಡಲು ಅರಣ್ಯ ಇಲಾಖೆಗೆ ಸರ್ಕಾರ ಒಂದು ಬಾರಿ ನೀರು ಹಾಕಿದರೆ ₹ 5 ರಿಂದ ₹ 6 ನೀಡುತ್ತದೆ. ಅರಣ್ಯ ಇಲಾಖೆ ಸಿಬ್ಬಂದಿ ಒಂದೆರಡು ಬಾರಿ ನೀರು ಹಾಕಿ ಕೈತೊಳೆದುಕೊಂಡಿದ್ದಾರೆ.

ನರೇಗಾ ಯೋಜನೆ ಅನುದಾನದಲ್ಲಿ ಅರಣ್ಯ ಇಲಾಖೆ ದಾಖಲೆಯಲ್ಲಿ ಮಾತ್ರ ಸಾವಿರಾರು ಗಿಡಗಳನ್ನು ನೆಡಲಾಗಿದೆ ಎಂದು ತೋರಿಸುತ್ತದೆ. ಅವುಗಳಿಗೆ ನೀರು ಹಾಕಿ ನಿರ್ವಹಣೆ ಮಾಡುವುದಿಲ್ಲ. ಜಾನುವಾರುಗಳು, ಆಡು ಮತ್ತು ಕುರಿ ತಿಂದು ಮುರಿಯುತ್ತವೆ. ಸರಿಯಾದ ಬೇಲಿ ಕೂಡ ಹಾಕುವುದಿಲ್ಲ. ಸಹಜವಾಗಿಯೇ ಗಿಡಗಳು ಒಣಗುತ್ತವೆ. ಅರಣ್ಯ ಇಲಾಖೆ ಸಿಬ್ಬಂದಿ ಕೋಟ್ಯಂತರ ಖರ್ಚು ಮಾಡಿ, ಸಸಿಗಳನ್ನು ಬೆಳೆಸಲೂ ಲಕ್ಷಾಂತರ ಖರ್ಚು ಮಾಡಿ ಸಸಿ ನೆಟ್ಟ ಮೇಲೆ ನೀರು ಹಾಕದಿದ್ದರೆ ಏನು ಪ್ರಯೋಜನ ಎಂದು ದೇವದುರ್ಗದ ನಾಗರಿಕ ಮಂಜುನಾಥ ನಾಯಕ ಪ್ರಶ್ನಿಸುತ್ತಾರೆ.

ಸಹಕಾರ: ಬಸವರಾಜ ಭೋಗಾವತಿ, ಯಮನೇಶ ಗೌಡಗೇರಾ, ಪ್ರಕಾಶ ಮಸ್ಕಿ, ಡಿ.ಎಚ್‌.ಕಂಬಳಿ, ಬಸವರಾಜ ನಂದಿಕೋಲಮಠ, ಮಂಜುನಾಥ ಬಳ್ಳಾರಿ, ಶರಣಪ್ಪ ಆನೆಹೊಸೂರು, ಪಿ.ಕೃಷ್ಣ ಸಿರವಾರ

ಕವಿತಾಳ ಸಮೀಪದ ರಸ್ತೆ ಬದಿ ಅರಣ್ಯ ಇಲಾಖೆ ವತಿಯಿಂದ ನೆಟ್ಟ ಗಿಡಗಳು
ಕವಿತಾಳ ಸಮೀಪದ ರಸ್ತೆ ಬದಿ ಅರಣ್ಯ ಇಲಾಖೆ ವತಿಯಿಂದ ನೆಟ್ಟ ಗಿಡಗಳು
ಮಾನ್ವಿ ತಾಲ್ಲೂಕಿನ ಪೋತ್ನಾಳ-ಖರಾಬದಿನ್ನಿ ಗ್ರಾಮದ ರಸ್ತೆಯಲ್ಲಿ ಒಣಗಿದ ಗಿಡಗಳು
ಮಾನ್ವಿ ತಾಲ್ಲೂಕಿನ ಪೋತ್ನಾಳ-ಖರಾಬದಿನ್ನಿ ಗ್ರಾಮದ ರಸ್ತೆಯಲ್ಲಿ ಒಣಗಿದ ಗಿಡಗಳು
ರಾಯಚೂರಿನ ಪೋಲಕಮದೊಡ್ಡಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಬೆಳೆಸಲಾದ ಗಿಡಗಳು
ರಾಯಚೂರಿನ ಪೋಲಕಮದೊಡ್ಡಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಬೆಳೆಸಲಾದ ಗಿಡಗಳು
ಸಸಿಗಳು ಬಿಡಾಡಿ ದನಗಳ ಪಾಲು
ಮಸ್ಕಿ: ಸಾಮಾಜಿಕ ಅರಣ್ಯ ವಿಭಾಗದವರು ಪಟ್ಟಣದ ವಿವಿಧೆಡೆ ಸಸಿಗಳನ್ನು ಹಚ್ಚಿ ಅವುಗಳ ರಕ್ಷಣೆಗಾಗಿ ಸಸಿ ಸುತ್ತ ಜಾಲಿ ಗಿಡಗಳನ್ನು ಕಟ್ ಮಾಡಿ ಹಚ್ಚಲಾಗಿದೆ. ಅರಣ್ಯ ಇಲಾಖೆಯ ಲಿಂಗಸುಗೂರು ವಲಯ ಅರಣ್ಯಾಧಿಕಾರಿ ಹುಸೇನ್ ಪಾಷಾ ಮತ್ತು ಸಿಬ್ಬಂದಿ ಸಸಿಗಳಿಗೆ ಟ್ಯಾಂಕರ್ ಮೂಲಕ ನೀರುಣಿಸುವ ಮೂಲಕ ಅದರ ಪೋಷಣೆಗೆ ಮುಂದಾಗಿದ್ದಾರೆ. ಅದರ ಫಲವೆ ಹಚ್ಚಿದ ನೂರು ಸಸಿಗಳಲ್ಲಿ ಶೇ 70 ರಷ್ಟು ಸಸಿಗಳು ಜೀವ ಉಳಿಸಿಕೊಂಡಿವೆ. ಆದರೆ ಬೀದಿ ದನಗಳ ಹಾವಳಿ ಹಾಗೂ ಕುರಿಗಾಹಿಗಳಿಂದ ಬೆಳೆದ ಗಿಡದ ರಕ್ಷಣೆ ಅರಣ್ಯ ಇಲಾಖೆಗೆ ತಲೆನೋವಾಗಿದೆ. ದನ ಕರುಗಳು ಗಿಡವನ್ನು ತಿಕ್ಕಿ ಹಾಳು ಮಾಡುತ್ತಿದ್ದರೆ ಕುರಿಗಾಹಿಗಳು ಗಿಡಗಳ ಎಲೆಗಳನ್ನು ಕಡಿದು ಕುರಿಗಳಿಗೆ ಹಾಕುತ್ತಿದ್ದಾರೆ. ಅದರೂ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗಿ ಸಾಧ್ಯವಾದಷ್ಟು ಗಿಡಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಹೊಸ ನೀತಿ ರೂಪಿಸಿ
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ತಾಪಮಾನ ಇದೆ. ಅರಣ್ಯ ಸಂಪತ್ತಿನಿಂದ ಬಡವಾಗಿರುವ ಜಿಲ್ಲೆಗೆ ಅರಣ್ಯ ಇಲಾಖೆ ವಿಶೇಷ ಒತ್ತು ಕೊಡಬೇಕಿದೆ. ನಿತ್ಯ ಹರಿದ್ವರ್ಣ ಪ್ರದೇಶಕ್ಕೂ ಬೆಂಕಿಯಂಥ ಬಿಸಿಲಿರುವ ನಾಡಿಗೂ ಒಂದೇ ನಿಯಮ ಇದೆ. ನೀರಿನ ಕೊರತೆ ಇರುವ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ನೀರು ಹಾಕಿ ಪೋಷಿಸದಿದ್ದರೆ ಸರ್ಕಾರದ ಹಣ ಪೋಲಾಗುವುದಷ್ಟೇ ಅಲ್ಲ; ಅರಣ್ಯ ಇಲಾಖೆಯ ಸಿಬ್ಬಂದಿ ಶ್ರಮವೂ ವ್ಯರ್ಥ. ಜಿಲ್ಲೆಯಲ್ಲಿ ಒಟ್ಟು ಭೌಗೋಳಿಕ ಅರಣ್ಯ ಪ್ರದೇಶ (ಶೇ.2.79) ಕುಸಿದಿರುವುದೇ ಇದಕ್ಕೆ ಸಾಕ್ಷಿ ಎಂದು ಪರಿಸರ ಪ್ರೇಮಿಗಳು ಹೇಳುತ್ತಾರೆ. ರಾಜ್ಯದ ಜಿಲ್ಲೆಗಳನ್ನೂ ಹವಾಮಾನಕ್ಕೆ ಅನುಗುಣವಾಗಿ ಗುರುತಿಸಿ ಹೊಸ ನೀತಿ ರೂಪಿಸಬೇಕು. ಗಿಡ ಮರಗಳನ್ನು ಬೆಳೆಸಲು ಸಂಘ ಸಂಸ್ಥೆ ಹಾಗೂ ಪಂಚಾಯತ್‌ ರಾಜ್‌ ಸಂಸ್ಥೆಗಳನ್ನು ಸಕ್ರಿಯವಾಗಿ ಬಳಸಿಕೊಳ್ಳಬೇಕು. ಸಸಿಗಳನ್ನು ಬೆಳೆಸಲು ಅಗತ್ಯವಿರುವ ಜೀವ ಜಲಕ್ಕೆ ಹೆಚ್ಚಿನ ಅನುದಾನ ಕೊಡಬೇಕು ಎಂದು ಮನವಿ ಮಾಡುತ್ತಾರೆ.
ನೀರಿಲ್ಲದೆ ಒಣಗಿದ ಗಿಡಗಳು
ಸಿಂಧನೂರು: ರೈತರ ಜಮೀನು ಹಾಗೂ ಶಾಲಾ-ಕಾಲೇಜುಗಳ ಆವರಣದಲ್ಲಿ ಅರಣ್ಯ ಇಲಾಖೆಯಿಂದ 29775 ಗಿಡಗಳನ್ನು ನೆಡಲಾಗಿದೆ. ರಸ್ತೆಗಳ ಅಕ್ಕಪಕ್ಕ ನೆಟ್ಟಿರುವ ಗಿಡಗಳ ನಿರ್ವಹಣೆಯನ್ನು ಅರಣ್ಯ ಇಲಾಖೆ ಮಾಡುತ್ತಿದೆ. ಆದರೆ ಪ್ರಸ್ತುತ ಮಳೆ ಕೊರತೆಯಿಂದ ಆ ಗಿಡಗಳು ಸಂಪೂರ್ಣವಾಗಿ ಒಣಗಿವೆ. ‘ಅರಣ್ಯ ಇಲಾಖೆಯವರು ದಾಖಲೆಯಲ್ಲಿ ಸಾವಿರಾರು ಗಿಡಗಳನ್ನು ನೆಡಲಾಗಿದೆ ಎಂದು ತೋರಿಸುತ್ತಾರೆ. ಅವುಗಳಿಗೆ ನೀರು ಹಾಕಿ ನಿರ್ವಹಣೆಯನ್ನೇ ಮಾಡುವುದಿಲ್ಲ. ಆಕಳು ದನಗಳು ಗಿಡಗಳನ್ನು ತಿಂದು ಹಾಳು ಮಾಡಿವೆ. ಈಗ ಬರಗಾಲದ ನೆಪ ಹೇಳುತ್ತಿದ್ದಾರೆ’ ಎಂದು ಸಿಂಧನೂರಿನ ಸಿದ್ದಪ್ಪ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT