ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರೂಪದ ಪರಿಸರ ಪ್ರೇಮಿ ಅಮರೇಗೌಡ

40 ಸಾವಿರಕ್ಕೂ ಅಧಿಕ ಗಿಡನೆಟ್ಟು ಪಾಲನೆ ಮಾಡಿದ ಅಮರೇಗೌಡ ಮಲ್ಲಾಪುರ
Last Updated 8 ಆಗಸ್ಟ್ 2021, 3:43 IST
ಅಕ್ಷರ ಗಾತ್ರ

ಸಿಂಧನೂರು: ತಾಲ್ಲೂಕಿನ ಮಲ್ಲಾಪುರ ಗ್ರಾಮದ ಯುವಕ ಅಮರೇಗೌಡ ಮಲ್ಲಾಪುರ ಆರು ವರ್ಷಗಳಿಂದ ಮರಗಳ ಸಂರಕ್ಷಣೆ ಮತ್ತು ಪರಿಸರ ಅಭಿವೃದ್ಧಿ ನಡೆಸುತ್ತಿರುವುದು ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ನಗರ ಸೇರಿದಂತೆ ತಾಲ್ಲೂಕಿನ ಯಾವುದೇ ಗ್ರಾಮ ಅಥವಾ ಮುಖ್ಯರಸ್ತೆಯಲ್ಲಿರುವ ಮರಗಳನ್ನು ಕಡಿಯುತ್ತಾರೆ ಎನ್ನುವ ಮಾಹಿತಿ ಸಿಕ್ಕರೆ ಸಾಕು ಅಮರೇಗೌಡ ಮಲ್ಲಾಪುರ ಅವರ ತಂಡವು ಅಲ್ಲಿಗೆ ತೆರಳುತ್ತದೆ. ‘ಅಪ್ಪಿಕೋ ಚಳವಳಿ’ ನಡೆಸಿ, ಮರ ಕಡಿಯುವುದನ್ನು ತಡೆಯುತ್ತದೆ. ಮರ ಕಡಿದ ಸುದ್ದಿ ತಿಳಿದರೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡುವುದಲ್ಲದೆ, ಸಸಿಗಳನ್ನು ಮತ್ತೆ ನೆಟ್ಟು ಪೋಷಿಸುವ ಜವಾಬ್ದಾರಿ ವಹಿಸಲಾಗುತ್ತಿದೆ.

ಪರಿಸರದ ಬಗ್ಗೆ ಆಳವಾದ ಅಧ್ಯಯನ ಮಾಡಿದ ವ್ಯಕ್ತಿಯಲ್ಲ. ಉನ್ನತ ವಿದ್ಯಾಭ್ಯಾಸವೂ ಆಗಿಲ್ಲ. ಗ್ರಾಮದ ವ್ಯಕ್ತಿಗಳು ತಮ್ಮ ಹೊಲದಲ್ಲಿ ಬೆಳೆದ ಗಿಡಗಳನ್ನು ಕಡಿಯುವುದನ್ನು ನೋಡಿ ಮರುಗಿದ ಅಮರೇಗೌಡರಿಗೆ ಅವುಗಳನ್ನು ನೆಟ್ಟು ಬೆಳೆಸಬೇಕೆನ್ನುವ ಆಸೆ ಚಿಗರೊಡೆಯಿತು. ಗೆಳೆಯರ ಸಹಕಾರದೊಂದಿಗೆ ಸಾಲುಮರದ ತಿಮ್ಮಕ್ಕನವರನ್ನು ಭೇಟಿಯಾದರು. ಆ ನಂತರದಲ್ಲಿ ಅಮರೇಗೌಡರಿಗೆ ಪರಿಸರ ಪ್ರೇಮ ಇನ್ನೂ ಹೆಚ್ಚಿಗೆ ವೃದ್ಧಿಯಾಗಿ ನೂರಾರು ಸ್ನೇಹಿತರನ್ನು ಕಟ್ಟಿಕೊಂಡು ಊರೂರಿಗೆ ಸಸಿಗಳನ್ನು ನೆಡುತ್ತಾ ಕಲ್ಯಾಣ ಕರ್ನಾಟಕದಾದ್ಯಂತ ಸಂಚರಿಸಿದ್ದಾರೆ.

ಮಣ್ಣಿನ ತಟ್ಟೆ, ತಗಡಿನ ಡಬ್ಬಿಗಳಿಂದ ಗೂಡು ತಯಾರಿಸಿ ಅದರಲ್ಲಿ ಕಾಳು, ನೀರು ಹಾಕಿ ಶಾಲಾ-ಕಾಲೇಜು, ದೇವಸ್ಥಾನ ಆವರಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿರುವ ಗಿಡ-ಮರಗಳಿಗೆ ನೇತು ಹಾಕಿ ಬರುತ್ತಾರೆ.. ಅಮರೇಗೌಡರ ಸ್ನೇಹಿತ ಮಂಜುನಾಥ ಗಾಣಗೇರಾ ಹೇಳುವ ಮಾತಿದು. ಬೀಜಗಳನ್ನು ಸಂಗ್ರಹಿಸಿ, ಸೆಗಣಿ, ಆಕಳ ಮೂತ್ರದೊಂದಿಗೆ ಬೆರಸಿ ಪ್ರತಿವರ್ಷ ಮಳೆಗಾಲದಲ್ಲಿ ತಾಪ್ಸಿ, ವಂಗೆ, ಹುಣಸೆ, ಬೇವು, ನೇರಳೆ, ಹತ್ತಿಹಣ್ಣು, ನುಗ್ಗೆ ಮತ್ತಿತರ ಬಗೆಯ 40 ಸಾವಿರ ಬೀಜದ ಉಂಡೆಗಳನ್ನು ಸಿದ್ಧಪಡಿಸಿ, ತಾಲ್ಲೂಕಿನ ಕಲಮಂಗಿ ಗುಡ್ಡಗಾಡು ಸೇರಿ ಹಲವು ಕಡೆಗಳಲ್ಲಿ ಹಾಕುವ ಕೆಲಸವನ್ನು ಅಮರೇಗೌಡ ಮಲ್ಲಾಪುರ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT