ಗುರುವಾರ , ಜುಲೈ 29, 2021
21 °C
ಅಂತರ ಪಾಲನೆಯೆ ವ್ಯಾಪಾರಿಗಳಿಗೆ ದೊಡ್ಡ ಸವಾಲು

ರಾಯಚೂರು: ದುಬಾರಿ ಚಿನ್ನಕ್ಕೆ ಕುಗ್ಗಿದ ಬೇಡಿಕೆ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರದ ಸರಾಫ್‌ ಬಜಾರಿನ ಚಿನ್ನಾಭರಣ ಮಳಿಗೆಗಳಲ್ಲಿ ಕಾಣುತ್ತಿದ್ದ ಜನಸಂದಣಿ ಮತ್ತು ವಹಿವಾಟಿನ ಸಂಭ್ರಮ ಇನ್ನೂ ಮರಳಿಲ್ಲ. ಕೊರೊನಾ ಲಾಕ್‌ಡೌನ್‌ ಪರಿಣಾಮ ಜನರು ಮೊದಲಿನಂತೆ ಚಿನ್ನ ಖರೀದಿ ಮಾಡದಿರುವುದರಿಂದ ವ್ಯವಹಾರವೂ ‘ಡೌನ್‌’ ಇದೆ.

ಸಣ್ಣ ಪ್ರಮಾಣದ ಚಿನ್ನ ಖರೀದಿ ಮಾತ್ರ ನಡೆಯುತ್ತಿದೆ. ಮಹಿಳೆಯರು ವೈವಿಧ್ಯಮಯ ವಿನ್ಯಾಸಗಳನ್ನು ಪರಿಶೀಲಿಸಿ ಬಳಿಕ ಚಿನ್ನಾಭರಣ ಸಿದ್ಧ ಮಾಡಿಕೊಡುವಂತೆ ವ್ಯಾಪಾರಿಗಳಿಗೆ ಬೇಡಿಕೆ ಸಲ್ಲಿಸುತ್ತಿದ್ದರು. ಇಂತಹ ಗ್ರಾಹಕರ ಸಂಖ್ಯೆ ತುಂಬಾ ಕಡಿಮೆ ಆಗಿದೆ. ಮದುವೆ ಸೀಜನ್‌ ಕೂಡಾ ಮುಗಿಯುತ್ತಿದ್ದು, ನಿರೀಕ್ಷಿಸಿದಷ್ಟು ವ್ಯಾಪಾರವಿಲ್ಲ ಎನ್ನುವ ಅಳಲನ್ನು ಚಿನ್ನಾಭರಣ ವ್ಯಾಪಾರಿಗಳು ಹೇಳಿಕೊಳ್ಳುತ್ತಿದ್ದಾರೆ.

ಕೋವಿಡ್‌ ಸೋಂಕು ಹರಡದಂತೆ ಸಾಧ್ಯವಾದಷ್ಟು ಮುನ್ನಚ್ಚರಿಕೆ ಕ್ರಮಗಳನ್ನು ಸರಾಫ್‌ ಬಜಾರಿನಲ್ಲೂ ಅನುಸರಿಸುತ್ತಿದ್ದಾರೆ. ಪ್ರತಿ ಮಳಿಗೆಗಳಲ್ಲಿ ಸ್ಯಾನಿಟೈಸರ್‌ ನೀಡಲಾಗುತ್ತಿದೆ. ಆದರೆ, ಅಂತರ ಕಾಯ್ದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಒಂದು ಚಿನ್ನಾಭರಣ ಖರೀದಿಗಾಗಿ ಒಟ್ಟಾಗಿ ಬಂದವರನ್ನು ಪ್ರತ್ಯೇಕವಾಗಿ ಕುಳಿತುಕೊಳ್ಳಲು ಸೂಚಿಸಿದರೂ, ಪಾಲನೆ ಆಗುತ್ತಿಲ್ಲ ಎನ್ನುವ ಅಳಲನ್ನು ವ್ಯಾಪಾರಿಗಳು ಹೇಳಿಕೊಳ್ಳುತ್ತಿದ್ದಾರೆ. ಚಿನ್ನಾಭರಣಗಳನ್ನು ಕೈಯೊಳಗೆ ಹಿಡಿದು ಪರಿಶೀಲಿಸುವುದಕ್ಕೂ ವ್ಯಾಪಾರಿಗಳು ಬೇಡ ಎನ್ನುವ ಸ್ಥಿತಿ ಇಲ್ಲ. ವ್ಯಾಪಾರ ಮಾತ್ರ ಎಂದಿನಂತೆ ನಡೆಯುತ್ತಿಲ್ಲ.

‘ಮನೆಗಳಿಗೆ ತೆಗೆದುಕೊಂಡು ಹೋಗುವ ₹ 10 ತರಕಾರಿಯನ್ನು ಕೂಡಾ ಕೈಯಲ್ಲಿ ಹಿಡಿದು, ಆಯ್ಕೆ ಮಾಡಿ ಖರೀದಿಸುತ್ತಾರೆ. ಸಾವಿರಾರು ರೂಪಾಯಿ ಮೌಲ್ಯದ ಚಿನ್ನಾಭರಣ ಖರೀದಿಗೆ ಬರುವವರಿಗೆ ಮುಟ್ಟಬೇಡಿ ಎಂದರೆ, ಅಂಗಡಿಗಳತ್ತ ಯಾರೂ ಬರುವುದಿಲ್ಲ. ಕೈಗಳಿಗೆ ಸ್ಯಾನಿಟೈಜರ್‌ ಹಾಕುವುದರಿಂದ ಸೋಂಕು ಹರಡುವುದಿಲ್ಲ’ ಎಂದು ಸರಾಫ್‌ ಬಜಾರ್ ವ್ಯಾಪಾರಿಗಳು ಹೇಳುತ್ತಿರುವ ಮಾತು.

ರಾಯಚೂರಿನಲ್ಲಿ 250 ಚಿನ್ನಾಭರಣ ಮಳಿಗೆಗಳಿವೆ. ಅವುಗಳಲ್ಲಿ 50 ಮಳಿಗೆಗಳು ಆಭರಣ ತಯಾರಿಸುವ ಕಾರ್ಯಾಗಾರ ಹೊಂದಿವೆ. ಕಾರ್ಯಾಗಾರದಲ್ಲಿ 200 ಕ್ಕೂ ಹೆಚ್ಚು ಕಾರ್ಮಿಕರು ಪಶ್ಚಿಮ ಬಂಗಾಳದವರು. ಕೊರೊನಾ ಲಾಕ್‌ಡೌನ್‌ ಆರಂಭದಲ್ಲಿ ಆತಂಕದಿಂದ ಎಲ್ಲರೂ ತಮ್ಮ ರಾಜ್ಯಕ್ಕೆ ಮರಳಿದ್ದಾರೆ. ಹೀಗಾಗಿ ಹೊಸ ವಿನ್ಯಾಸದ ಚಿನ್ನಾಭರಣಗಳಿಗೆ ಬೇಡಿಕೆ ಸಲ್ಲಿಸುವವರಿಗೆ ಮತ್ತು ಹಳೇ ಚಿನ್ನ ಕರಗಿಸಿ ಆಭರಣ ಮಾಡಿಸಿಕೊಳ್ಳುವವರಿಗೆ ಇನ್ನೂ ಒಂದು ತಿಂಗಳು ಕಾಯಬೇಕು ಎನ್ನುವ ಮಾತನ್ನು ವ್ಯಾಪಾರಿಗಳು ಮನವರಿಕೆ ಮಾಡುತ್ತಿದ್ದಾರೆ. ಚಿನ್ನಾಭರಣ ಸಿದ್ಧಪಡಿಸುವ ಕುಶಲ ಕಾರ್ಮಿಕರು ಪಶ್ಚಿಮ ಬಂಗಾಳದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜ್ಯದಿಂದ ರಾಜ್ಯಕ್ಕೆ ಸಂಚರಿಸಿದರೆ ಕ್ವಾರಂಟೈನ್‌ ಮಾಡುತ್ತಾರೆ ಎನ್ನುವ ಆತಂಕದಿಂದ ಕಾರ್ಮಿಕರು ಮರಳುತ್ತಿಲ್ಲ. ವ್ಯಾಪಾರ ಕಡಿಮೆ ಆಗುವುದಕ್ಕೆ ಇದು ಕೂಡಾ ಕಾರಣ.

‘ಗುರುವಾರ ಪ್ರತಿ 10 ಗ್ರಾಂ ಚಿನ್ನದ ದರ ₹ 48 ಸಾವಿರಕ್ಕೆ ತಲುಪಿದೆ. ಒಂದು ಕೆಜಿ ಬೆಳ್ಳಿ ದರ ₹ 49,600 ಇದೆ. ದುಬಾರಿ ಚಿನ್ನವನ್ನು ಸ್ವಲ್ಪ ಜನರು ಮಾತ್ರ ಖರೀದಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳು ಜೋರಾಗಿವೆ. ಗ್ರಾಮಗಳಿಂದ ಬಸ್‌ ಸೌಕರ್ಯ ಕೂಡಾ ಸಹಜ ಸ್ಥಿತಿಗೆ ಬಂದಿಲ್ಲ. ಹೀಗಾಗಿ ಚಿನ್ನಾಭರಣ ವ್ಯಾಪಾರವು ಕೇವಲ ಶೇ 30 ರಷ್ಟು ಮಾತ್ರ ಇದೆ’ ಎಂದು ಚಿನ್ನಾಭರಣ ವ್ಯಾಪಾರಿ ನರಸಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು