ಮಂಗಳವಾರ, ಜನವರಿ 21, 2020
19 °C
10 ದಿನಗಳಿಂದ ಆಯೋಜಿಸಿದ್ದ ನೇತ್ರ ತಪಾಸಣೆ, ಚಿಕಿತ್ಸಾ ಶಿಬಿರದ ಸಮಾರೋಪ

‘ಶಂಕರ ನೇತ್ರಾಲಯ ಪರಿಶ್ರಮದಿಂದ ದೃಷ್ಟಿಭಾಗ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ರಾಘವೇಂದ್ರ ಸ್ವಾಮಿ ಕೃಪೆ ಹಾಗೂ ಶಂಕರ ನೇತ್ರಾಲಯ ತಂಡದ ಪರಿಶ್ರಮದಿಂದ ನೂರಾರು ಬಡ ಜನರಿಗೆ ಚಿಕಿತ್ಸೆ ನೀಡಿ, ಮರಳಿ ದೃಷ್ಟಿ ಭಾಗ್ಯ ಕರುಣಿಸಿದಂತಾಗಿದೆ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಹೇಳಿದರು.

ನಗರದ ರಾಘವೇಂದ್ರ ಸ್ವಾಮಿ ಶಾಖಾಮಠದಲ್ಲಿ ಮಂಗಳವಾರ ನಡೆದ ಮಂತ್ರಾಲಯ ಮಠ ಮತ್ತು ಚೆನ್ನೈನ ಶಂಕರ ನೇತ್ರಾಲಯ ಹಾಗೂ ಎಲ್ ಆ್ಯಂಡ್‌ ಟಿ ಟೆಕ್ನಾಲಜಿ ಸರ್ವೀಸಸ್ ಸಹಯೋಗದ 10 ದಿನ ಉಚಿತ ನೇತ್ರ ಚಿಕಿತ್ಸಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಶಿಬಿರ ಆರಂಭದಲ್ಲಿ ಒಟ್ಟು 1,440 ಜನರಿಗೆ ನೇತ್ರ ತಪಾಸಣೆ ಮಾಡಲಾಗಿದೆ. ₹10 ಕೋಟಿ ವೆಚ್ಚದ ಎರಡು ಅತ್ಯಾಧುನಿಕ ಬಸ್‌ಗಳಲ್ಲಿ 300ಕ್ಕೂ ಹೆಚ್ಚು ಜನರಿಗೆ ಉಚಿತ ನೇತ್ರ ಚಿಕಿತ್ಸೆ ನೀಡಲಾಗಿದೆ. 200 ಜನರಿಗೆ ಶಸ್ತ್ರಚಿಕಿತ್ಸೆ ಮಾಡಿ, ಲೇನ್ಸ್ ಹಾಗೂ ಔಷಧಿ ವಿತರಿಸಲಾಗಿದೆ. 400 ಜನರಿಗೆ ಅಧಿಕ ದೃಷ್ಟಿ ದೋಷ ಇರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಚೆನ್ನೈಗೆ ಆಗಮಿಸುವಂತೆ ತಿಳಿಸಿರುವುದನ್ನು ವೈದ್ಯರು ತಿಳಿಸಿದ್ದಾರೆ ಎಂದರು.

ಶಂಕರ ನೇತ್ರಾಲಯದ ಮುಖ್ಯಸ್ಥ ಬದ್ರಿನಾಥ ಅವರು ದುಬಾರಿ ವೆಚ್ಚದ ಸಂಚಾರಿ ಶಸ್ತ್ರಚಿಕಿತ್ಸೆ ಉಪಕರಣಗಳನ್ನೊಂಡಿರುವ ಎರಡು ವಾಹನ ಹಾಗೂ ವೈದ್ಯರು ಸೇರಿದಂತೆ ತಾಂತ್ರಿಕ ತಂಡವನ್ನು ಕಳುಹಿಸಿರುವುದು  ಸಾಮಾಜಿಕ ಕಳಕಳಿ ತೋರಿಸುತ್ತದೆ ಎಂದರು.

ರಿಮ್ಸ್ ಆಸ್ಪತ್ರೆಯ ಡಾ.ಸಿದ್ದೇಶ ಮಾತನಾಡಿ, ಹಿಂದುಳಿದ ರಾಯಚೂರು ಜಿಲ್ಲೆಯಲ್ಲಿ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಗಳ ಮಠ ಹಾಗೂ ಶಂಕರ ನೇತ್ರಾಲಯದಿಂದ ಕೈಗೊಂಡಿರುವ ಶಿಬಿರದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಶ್ರೀಮಠದ ವಿದ್ವಾಂಸ ರಾಜಾ ಎಸ್. ಗಿರಿಯಾಚಾರ್ಯ ಮಾತನಾಡಿ, ಮನುಷ್ಯನಿಗೆ ಎಲ್ಲ ಅಂಗಗಳಲ್ಲಿ ನೇತ್ರ ಮಹತ್ವದ ಅಂಗವಾಗಿದೆ. ನೇತ್ರದ ತೊಂದರೆಗಳಿಂದ ಸಮಸ್ಯೆ ಎದುರಿಸುವವರಿಗಾಗಿ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಇಂಥ ಅನೇಕ ಸಾಮಾಜಿಕ ಕಾರ್ಯಗಳನ್ನು ಮಂತ್ರಾಲಯದ ಶ್ರೀಮಠವು ನಿರಂತವಾಗಿ ನಡೆಸುತ್ತಾ ಬಂದಿದೆ ಎಂದು ಹೇಳಿದರು.

ಶಂಕರ ನೇತ್ರಾಲಯದ ಮುಖ್ಯವೈದ್ಯ ಡಾ.ರಾಜೇಶ ಮಾತನಾಡಿ, ಶ್ರೀರಾಯರ ಪ್ರೇರಣೆ ಹಾಗೂ ಗುರುಗಳ ಆಶೀರ್ವಾದದಿಂದ ಶಿಬಿರ ಯಶಸ್ವಿಯಾಗಲು ಕಾರಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವೈದ್ಯ ಡಾ.ರಾಘವೇಂದ್ರ ಕುಲಕರ್ಣಿ ಮಾತನಾಡಿದರು. ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗದ ಮುಖ್ಯಸ್ಥೆ ಡಾ.ನಂದಿತಾ, ಚೆನ್ನೈನ ಡಾ. ಸೌರವ್, ಗೋವಿಂದರಾಜ್, ಅರುಲ್ ಕುಮಾರ, ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಪ್ರಾಚಾರ್ಯ ಎನ್.ವಾದಿರಾಜಾಚಾರ್ಯ, ಸೇತುಮಾಧವ ಕನಕವೀಡು ಇದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು