ರಾಯಚೂರು: ಹಿಂದುಳಿದ ವರ್ಗಕ್ಕೆ ಸೇರಿದ ಸ್ಥಳೀಯ ಲಕ್ಷ್ಮೀಪುರಂ ಬಡಾವಣೆ ನಿವಾಸಿ ಕೆ.ಸತ್ಯನಾರಾಯಣ ಅವರು ತಮ್ಮ ಇಬ್ಬರು ಮಕ್ಕಳಿಗೆ ಕಾಡು ಕುರುಬ ಹೆಸರಿನ ಮೇಲೆ ಪರಿಶಿಷ್ಟ ಪಂಗಡದ (ಎಸ್ಟಿ) ಜಾತಿ ಪ್ರಮಾಣ ಪತ್ರವನ್ನು ಪಡೆದು ವಂಚಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್.ರಘುವೀರ ನಾಯಕ ಆಗ್ರಹಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕೆ.ಸತ್ಯಾನಾರಾಯಣ ಅವರು ಮೂಲತಃ ಕುರುಬ ಸಮಾಜಕ್ಕೆ ಸೇರಿದವರಾಗಿದ್ದು, ಅವರ ಪತ್ನಿ ಕೆ.ಅನಿತಾ ಅವರ ಜಾತಿ ದಾಖಲೆಗಳ ಆಧಾರದ ಮೇಲೆ ಮಕ್ಕಳಾದ ಕೆ.ಎಸ್.ಸಾಕ್ಷಿ ಹಾಗೂ ಕೆ.ಎಸ್.ಸಂಜಯ ಅವರಿಗೆ ಕಾಡು ಕುರುಬ ಹೆಸರಿನ ಮೇಲೆ ರಾಯಚೂರಿನ ತಹಶೀಲ್ದಾರ್ ಕಚೇರಿಯಿಂದ ನಕಲಿ ಪರಿಶಷ್ಟ ಪಂಗಡ (ಎಸ್ಟಿ) ಜಾತಿ ಪ್ರಮಾಣ ಪತ್ರವನ್ನು ಪಡೆದಿದ್ದಾರೆ ಎಂದು ಆರೋಪಿಸಿದರು.
ಈ ಇಬ್ಬರು ಮಕ್ಕಳ ಶಾಲಾ ದಾಖಲಾತಿಗಳ ಜಾತಿ ಕಾಲಂನಲ್ಲಿ ಒಬಿಸಿ ಎಂದು ನಮೋದಿಸಿದ್ದನ್ನು ತಿದ್ದಿ ಪರಿಶಿಷ್ಟ ಪಂಗಡ (ಎಸ್ಟಿ) ಎಂದು ಬರೆಯಲಾಗಿದೆ. ಯಾವುದೇ ವ್ಯಕ್ತಿ ಜಾತಿ ಪ್ರಮಾಣ ಪತ್ರವನ್ನು ತಂದೆಯ ಜಾತಿ ಆಧಾರದ ಮೇಲೆ ನೀಡಲಿದ್ದು, ವಿಶೇಷ ಸಂದರ್ಭದಲ್ಲಿ ತಾಯಿ ಆಧಾರದ ಮೇಲೆ ಜಾತಿ ಪ್ರಮಾಣ ಪತ್ರವನ್ನು ಪಡೆಯುವ ನಿಯಮವಿದೆ. ಆದರೆ ಈ ಪ್ರಕರಣದಲ್ಲಿ ಅದು ಪಾಲನೆಯಾಗದೇ ಇರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದರು.
ಕೆ.ಸತ್ಯನಾರಾಯಣ ಅವರ ಪತ್ನಿ ಕೆ.ಅನಿತಾ ಅವರು ಸಹ ಹಿಂದುಳಿದ ವರ್ಗದಲ್ಲಿ ಬರುತ್ತಿದ್ದು, ಅವರೂ ಸಹ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವ ಅನುಮಾನವಿದ್ದು, ತನಿಖೆಗಾಗಿ ನಾಗರಿಕ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದರು.
ನಕಲಿ ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸಬೇಕು ಎಂದು ಈಗಾಗಲೇ ಉಪವಿಭಾಗಾಧಿಕಾರಿಗೆ ದೂರು ಸಲ್ಲಿಸಲಾಗಿದೆ. ಇಷ್ಟೇ ಅಲ್ಲದೇ ಇದಕ್ಕೆ ಪ್ರೋತ್ಸಾಹ ನೀಡಿದ ಪಾಲಕರು, ವಿದ್ಯಾರ್ಥಿಗಳ ಶಾಲಾ ವರ್ಗಾವಣೆ (ಟಿಸಿ) ಪತ್ರದಲ್ಲಿ ಜಾತಿ ಕಲಂ ತಿದ್ದುಪಡಿ ಮಾಡಿದ ಶಿಕ್ಷಣ ಸಂಸ್ಥೆ ಮುಖ್ಯಸ್ಥರ ವಿರುದ್ಧ ಮತ್ತು ನಕಲಿ ಎಸ್ಟಿ ಪ್ರಮಾಣ ಪತ್ರ ನೀಡಿರುವ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಮೇಲೆ ಕ್ರಮ ಕೈಗೋಳ್ಳುವಂತೆ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿಗೆ ದೂರು ಸಲ್ಲಿಸುವುದಾಗಿ ಹೇಳಿದರು.
ಸಂಘದ ಮುಖಂಡರಾದ ಮಲ್ಲಿಕಾರ್ಜುನ ನಾಯಕ, ರಮೇಶ ನಾಯಕ, ರಾಮಕೃಷ್ಣ ನಾಯಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.